ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ಪೊಲೀಸ್ ತಡೆಯ ನಡುವೆಯೂ ಸಾವಿರಾರು ಯುವಕರು ಹಾಗೂ ಗಣ್ಯರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.
ಮುಂಬೈ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ. ಅಲ್ಲದೆ, ಕೇಂದ್ರ ಮುಂಬೈ ಭಾಗದಲ್ಲಿ ಹಾಗೂ ದಾದರ್ ರೈಲ್ವೆ ನಿಲ್ದಾಣದ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅದರ ಹೊರತಾಗಿಯೂ ಸಾವಿರಾರು ಯುವಕ-ಯುವತಿಯರು ಪ್ರತಿಭಟನಾ ಸ್ಥಳ ತಲುಪಿ ಹೋರಾಟದಲ್ಲಿ ಪಾಲ್ಗೊಂಡರು.
ಜ್ಞಾನೇಶ್ ರಾಜೀನಾಮೆಗೆ ಕೂಗು
ಪ್ರತಿಭಟನೆಯಲ್ಲಿ ‘ಜ್ಞಾನೇಶ್ ಅವರೇ, ನಿಮಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ವಾ?’, ‘ಜ್ಞಾನೇಶ್ ಅವರೇ ರಾಜೀನಾಮೆ ನೀಡಿ’, ‘ದ್ರೋಹಿ ಜ್ಞಾನು ತೊಲಗಲಿ’ ಎಂಬಿತ್ಯಾದಿ ಬರಹಗಳಿದ್ದ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಯುವ ಸಂಘಟನೆಗಳಾದ ಎಸ್‌ಎಫ್‌ಐ ಮತ್ತು ಎಐಎಸ್ಎಫ್ ಕಾರ್ಯಕರ್ತರು, ನಟರಾದ ಶಬಾನಾ ಅಜ್ಮಿ, ನಸೀರುದ್ದೀನ್ ಶಾ, ಗಾಯಕ ವಿಶಾಲ್ ದದ್ಲಾನಿ ಹಾಗೂ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಭಾಗವಹಿಸಿದ್ದರು.
ಅಭಿಜೀತ್ ದೀಪ್ಕೆ ಕಿಡಿ:
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ಹೋರಾಟದ 2 ತಿಂಗಳ ಒಳಗಾಗಿ ಮತ್ತೊಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಯಿತು’ ಎಂದು ಕಿಡಿಕಾರಿದರು. ‘ಶಿವಾಜಿ ಪಾರ್ಕ್‌ನಲ್ಲಿ ನೆರೆದಿರುವ ಪ್ರತಿಭಟನಾಕಾರರನ್ನು ಧೈರ್ಯವಿದ್ದರೆ ಜೈಲಿಗೆ ಕಳುಹಿಸಲಿ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಸವಾಲು ಹಾಕಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅಕ್ರಮವೆಸಗಿದ್ದು, ಅವರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.


