ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಗುತ್ತಿಗೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಮೃತರ ಕುಟುಂಬಕ್ಕೆ 1.2 ಕೋಟಿ ರೂ. ಪರಿಹಾರ ಹಾಗೂ ಉದ್ಯೋಗ ಘೋಷಿಸಲಾಗಿದೆ.
ಮಂಗಳೂರು (ಅ.1): ಮಂಗಳೂರಿನ ಜೋಕಟ್ಟೆಯಲ್ಲಿರುವ ತೈಲ ಶುದ್ಧೀಕರಣ ಘಟಕ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಸಂಭವಿಸಿದ ಆಕಸ್ಮಿಕ ಭಾರೀ ಸ್ಫೋಟದಲ್ಲಿ ಮೃತಪಟ್ಟ ಗುತ್ತಿಗೆ ಸಿಬ್ಬಂದಿ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಕಂಪನಿಯು ಬರೋಬ್ಬರಿ 1 ಕೋಟಿ 20 ಲಕ್ಷ ರೂಪಾಯಿ ಗರಿಷ್ಠ ಪರಿಹಾರವನ್ನು ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಕಟ್ಟುನಿಟ್ಟಿನ ಸೂಚನೆ ಹಾಗೂ ಕೋಟಿ ಪರಿಹಾರಕ್ಕಾಗಿ ನಡೆದ ಸಾರ್ವಜನಿಕ ಪ್ರತಿಭಟನೆಯ ಬೆನ್ನಲ್ಲೇ ಎಂಆರ್‌ಪಿಎಲ್ ಆಡಳಿತ ಮಂಡಳಿಯು ಈ ಬೃಹತ್ ಪರಿಹಾರವನ್ನು ಪ್ರಕಟಿಸಿದೆ. ಪರಿಹಾರ ಧನದ ಜೊತೆಗೆ ಮೃತ ಮನೀಶ್ ಅವರ ಸಹೋದರನಿಗೆ ಸಂಸ್ಥೆಯಲ್ಲಿ ಖಾಯಂ ಉದ್ಯೋಗ ನೀಡಲು ಒಪ್ಪಿಗೆ ಸೂಚಿಸಲಾಗಿದೆ.
ಸಚಿವ ಯು.ಟಿ. ಖಾದರ್ ಭೇಟಿ, ಪರಿಹಾರಕ್ಕೆ ಆದೇಶ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂಗಳೂರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು, ಎಂಆರ್‌ಪಿಎಲ್‌ನ ಸ್ಫೋಟ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಎಂಆರ್‌ಪಿಎಲ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ಹಾಗೂ ಖಾಯಂ ಉದ್ಯೋಗ ನೀಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದರು. ಬಳಿಕ ಆಸ್ಪತ್ರೆಗೆ ತೆರಳಿದ ಸಚಿವರು, ಮೃತ ಮನೀಶ್ ಕರ್ಕೇರ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಹಾಗೂ ಗಾಯಗೊಂಡ 9 ಮಂದಿ ಕಾರ್ಮಿಕರ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಇದೇ ವೇಳೆ, ಸ್ಫೋಟದ ತೀವ್ರತೆಯಿಂದ ಹಾನಿಗೊಳಗಾದ ಜೋಕಟ್ಟೆ ಸುತ್ತಮುತ್ತಲಿನ ಈದ್ಗಾ ಮಸ್ಜಿದ್ ಅಂಜುಮಾನ್ ವಿದ್ಯಾಸಂಸ್ಥೆ, ಕಲವಾರು ಮಸ್ಜಿದ್, ಕಲವಾರು ಚರ್ಚ್ ಹಾಗೂ ಶಾಂತಿಗುಡ್ಡೆ ಮಸೀದಿಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿ, ತಕ್ಷಣದ ಅಗತ್ಯ ಕ್ರಮಗಳಿಗೆ ಸೂಚಿಸಿದರು.
ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ, ದೆಹಲಿಯಿಂದ ಕೇಂದ್ರ ತಂಡ ಭೇಟಿ
ಎಂಆರ್‌ಪಿಎಲ್ ಘಟಕದಲ್ಲಿ ಅಧಿಕ ಒತ್ತಡದಿಂದ ಉಂಟಾದ ಆಕಸ್ಮಿಕ ಸ್ಫೋಟದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ದುರಂತದ ತಾಂತ್ರಿಕ ಕಾರಣಗಳನ್ನು ಕಂಡುಹಿಡಿಯಲು ದೆಹಲಿಯಿಂದ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ನಡೆಸಲಿದೆ.
ಏನಿದು ದುರಂತ?
ಬುಧವಾರ ಮಧ್ಯಾಹ್ನ 12.15 ಗಂಟೆಯ ಸುಮಾರಿಗೆ ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (CHTU) ಅಧಿಕ ಒತ್ತಡದಿಂದಾಗಿ ದಿಢೀರ್ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿಕೊಂಡಿತ್ತು. ಘಟನೆಯಲ್ಲಿ ಮನೀಶ್ ಕರ್ಕೇರ ಸ್ಥಳದಲ್ಲೇ ಮೃತಪಟ್ಟಿದ್ದು, 9 ಜನರು ತೀವ್ರ ಗಾಯಗೊಂಡಿದ್ದರು. ಬಳಿಕ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನರ್ವಡೆ ವಿನಾಯಕ್ ಕಾರ್ಭಾರಿ ಭೇಟಿ ನೀಡಿ ಪರಿಶೀಲಿಸಿದ್ದರು.
ಮಾನವ ಹಕ್ಕುಗಳ ಆಯೋಗಕ್ಕೆ ಡಿವೈಎಫ್‌ಐ ಮನವಿ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಜರುಗಿದ ಅಗ್ನಿ ಅವಘಡ, ಕಾರ್ಮಿಕನ ಸಾವು ಹಾಗೂ ಸಾರ್ವಜನಿಕ ಸುರಕ್ಷತೆಯ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಡಿವೈಎಫ್‌ಐ (DYFI) ಕರ್ನಾಟಕ ರಾಜ್ಯ ಸಮಿತಿ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ 1993ರ ಸೆಕ್ಷನ್ 12ರ ಅಡಿಯಲ್ಲಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಘಟನೆಯ ಕುರಿತು ತುರ್ತು ಹಾಗೂ ಸಮಗ್ರ ಮಾನವ ಹಕ್ಕುಗಳ ತನಿಖೆ ನಡೆಸಬೇಕು ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರಿಗೆ ನಿಯೋಗವು ಒತ್ತಾಯಿಸಿದೆ.


