ಮಧ್ಯಪ್ರದೇಶದಲ್ಲಿ 5 ಹುಲಿ ಮರಿಗಳ ಜತೆ ಮೊದಲ ಬಾರಿ ಕಾಣಿಸಿಕೊಂಡ 'ಡಿಜೆ': ಪ್ರವಾಸಿಗರು ಫುಲ್ ಖುಷ್..!
ಸುಮಾರು 9 ವರ್ಷ ವಯಸ್ಸಿನ ಹೆಣ್ಣು ಹುಲಿ, ಬಹುಶಃ ಕಳೆದ ವರ್ಷ ನವೆಂಬರ್‌ನಲ್ಲಿ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಿಗೆ ಈಗ ಸುಮಾರು 3 ತಿಂಗಳ ವಯಸ್ಸಾಗಿದೆ ಎಂದು ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್ ಅಗರವಾಲ್ ಹೇಳಿದ್ದಾರೆ.
ಮಂಡ್ಲಾ (ಜನವರಿ 31, 2023): ಮೃಗಾಲಯ, ಅರಣ್ಯದಲ್ಲಿ ಹುಲಿಗಳನ್ನು ನೋಡೋದೇ ಎಷ್ಟು ಚೆಂದ ಅಲ್ವಾ. ಅದರ ಗತ್ತು, ಗಾಂಭೀರ್ಯದ ನಡಿಗೆ ಅನೇಕರಿಗೆ ಇಷ್ಟ. ಜತೆಗೆ, ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಬೇರೆ. ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮಂಡ್ಲಾ ಜಿಲ್ಲೆಯ ಮೀಸಲು ಪ್ರದೇಶದ ಮುಕ್ಕಿ ವಲಯದಲ್ಲಿ ಶನಿವಾರ ಮೊದಲ ಬಾರಿಗೆ ಐದು ಮರಿಗಳೊಂದಿಗೆ ಟಿ-27 ಹೆಸರಿನ ಹುಲಿ ಕಾಣಿಸಿಕೊಂಡಿದೆ ಎಂದು ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಎಸ್.ಕೆ. ಸಿಂಗ್ ತಿಳಿಸಿದ್ದಾರೆ.
ಸುಮಾರು 9 ವರ್ಷ ವಯಸ್ಸಿನ ಹೆಣ್ಣು ಹುಲಿ (Tigress), ಬಹುಶಃ ಕಳೆದ ವರ್ಷ ನವೆಂಬರ್‌ನಲ್ಲಿ ಮರಿಗಳಿಗೆ ಜನ್ಮ (Birth) ನೀಡಿದೆ. ಈ ಮರಿಗಳಿಗೆ ಈಗ ಸುಮಾರು 3 ತಿಂಗಳ ವಯಸ್ಸಾಗಿದೆ ಎಂದು ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ (Kanha Tiger Reserve) ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್ ಅಗರವಾಲ್ ಹೇಳಿದ್ದಾರೆ. ಇದನ್ನು ಡಿಜೆ ಎಂದೂ ಕರೆಯಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಹುಲಿ ಗಣತಿ: ಈ ಬಾರಿ ಕರ್ನಾಟಕಕ್ಕೆ ಮತ್ತೆ ನಂ. 1 ಸ್ಥಾನ..?
ಈ ಹಿನ್ನೆಲೆ ಮಧ್ಯಪ್ರದೇಶದ (Madhya Pradesh) ಕನ್ಹಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ಡಿಜೆ ಎಂದು ಜನಪ್ರಿಯವಾಗಿರುವ ಹುಲಿಯನ್ನು ನೋಡಿ ಖುಷಿಯಾಗಿದ್ದಾರೆ ಎಂದೂ ಎಸ್.ಕೆ. ಸಿಂಗ್ ಹೇಳಿದ್ದಾರೆ. ಅಖಿಲ ಭಾರತ ಹುಲಿ ಅಂದಾಜು ವರದಿ 2018 ರ ಪ್ರಕಾರ, ಮಧ್ಯಪ್ರದೇಶದಲ್ಲಿ ಹುಲಿಗಳ ಜನಸಂಖ್ಯೆ 526 ಎಂದು ತಿಳಿದುಬಂದಿದ್ದು, ಇದು ದೇಶದ ಯಾವುದೇ ರಾಜ್ಯಗಳಿಗಿಂತ ಅತಿ ಹೆಚ್ಚು. ದೇಶದಲ್ಲಿ ಮುಂದಿನ ಹುಲಿ ಗಣತಿ ಕಾರ್ಯ ಕಳೆದ ವರ್ಷ ಪೂರ್ಣಗೊಂಡಿದ್ದು, ಈ ವರದಿ ಇನ್ನಷ್ಟೇ ಹೊರಬರಬೇಕಿದೆ. ಮಧ್ಯಪ್ರದೇಶವು ಕನ್ಹಾ, ಬಾಂಧವಗಢ, ಪೆಂಚ್, ಸತ್ಪುರ ಮತ್ತು ಪನ್ನಾ ಸೇರಿದಂತೆ ಹಲವಾರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.
ಇದನ್ನೂ ಓದಿ: Chikkamagaluru: ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಡಿ.1ರಿಂದ ಆರಂಭವಾಗಿದೆ ಹುಲಿ ಗಣತಿ
ಈ ಬಾರಿ ಹುಲಿ ಗಣತಿಯಲ್ಲಿ ಕರ್ನಾಟಕಕ್ಕೆ ನಂ. 1 ಸ್ಥಾನ..?
ಈ ಮಧ್ಯೆ, ದೇಶದ ಪ್ರಮುಖ ಹುಲಿ ಆವಾಸ ಸ್ಥಾನಗಳಲ್ಲಿ ಒಂದಾಗಿರುವ ಕರ್ನಾಟಕ, ದೇಶದಲ್ಲಿ ಅತ್ಯಂತ ಹೆಚ್ಚಿನ ಹುಲಿ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿರುವ ಸಾಧ್ಯತೆ ಇದೆ. ಕಾರಣ 2018ರಲ್ಲಿ ಬಿಡುಗಡೆಯಾದ ಹುಲಿ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶ ನಂ. 1 ಸ್ಥಾನ ಪಡೆದಿದ್ದರೆ, 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದರೆ 2021ರಲ್ಲಿ ಮಧ್ಯಪ್ರದೇಶದಲ್ಲಿ 42, ಕರ್ನಾಟಕದಲ್ಲಿ 15 ಹುಲಿಗಳು, 2022ರಲ್ಲಿ ಮಧ್ಯಪ್ರದೇಶದಲ್ಲಿ 34 ಮತ್ತು ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟಿವೆ. ಈ ಲೆಕ್ಕಾಚಾರದಲ್ಲಿ ನೋಡಿದರೆ 2022ರಲ್ಲಿ ನಡೆಸಲಾದ ಹುಲಿ ಗಣತಿ ವೇಳೆಗೆ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರದಿ 2023ರಲ್ಲಿ ಬಿಡುಗಡೆಯಾಗಲಿದೆ.
ದೇಶದಲ್ಲಿ ಪ್ರತಿ 4 ವರ್ಷಗಳಿಗೆ ಒಮ್ಮೆ ಹುಲಿ ಗಣತಿ ನಡೆಸಲಾಗುತ್ತದೆ. 2018ರಲ್ಲಿ ನಡೆಸಲಾದ ಗಣತಿಯ ಅನ್ವಯ ದೇಶದಲ್ಲಿ 2,967 ಹುಲಿಗಳಿದ್ದವು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತಿಳಿಸಿದೆ. ಎನ್‌ಟಿಸಿಎ ಹುಲಿ ಸಂರಕ್ಷಣೆಯನ್ನು ಬಲಪಡಿಸುವುದಕ್ಕಾಗಿ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ರಚಿಸಲಾದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿದೆ. ಎನ್‌ಟಿಸಿಎ ವೆಬ್‌ಸೈಟ್‌ನ ಪ್ರಕಾರ 2022ರಲ್ಲಿ ಭಾರತದಲ್ಲಿ ಒಟ್ಟು 117 ಹುಲಿಗಳು ಮೃತಪಟ್ಟಿವೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಹುಲಿ ದಿನ: ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ!