Asianet Suvarna News Asianet Suvarna News

ಕ್ಲಚ್ ವೈರ್‌ನಿಂದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿ ಶವಪತ್ತೆ

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿಶವ ಪತ್ತೆಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಸಂರಕ್ಷಿತಾರಣ್ಯದಲ್ಲಿ ನಡೆದಿದೆ. ವೈರ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿಶವ ಪತ್ತೆಯಾಗಿದೆ.

tiger deadbody found hanging on tree at Panna tiger Reserve at Madhyapradesh akb
Author
First Published Dec 7, 2022, 3:37 PM IST

ಮಧ್ಯಪ್ರದೇಶ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿಶವ ಪತ್ತೆಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಸಂರಕ್ಷಿತಾರಣ್ಯದಲ್ಲಿ ನಡೆದಿದೆ. ವೈರ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿಶವ ಪತ್ತೆಯಾಗಿದೆ. ಪನ್ನಾದ ಅರಣ್ಯ ಇಲಾಖೆ ಸಿಬ್ಬಂದಿ ಈ ವಿಚಾರ ತಿಳಿಸಿದ್ದು, ವಾಹನಗಳಲ್ಲಿ ಇರುವಂತಹ ಕ್ಲಚ್ ವೈರ್‌ನಿಂದ (ಉರುಳು) ಹುಲಿಗೆ ನೇಣು ಬಿಗಿಯಲಾಗಿದೆ. ಇದನ್ನು ಸಾಮಾನ್ಯವಾಗಿ ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ಬೇಟೆಗಾರರು ಬಳಸುತ್ತಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. 

ಬೇರೆ ಪ್ರಾಣಿಗಳ ಸೆರೆ ಹಿಡಿಯುವ ಸಲುವಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿ ಶವಪತ್ತೆಯಾಗಿತ್ತು. ಪೆನ್ನಾ ಹುಲಿ ರಕ್ಷಿತಾರಣ್ಯದ ತಿಲ್ಗು ಬೀಟ್‌ನ ಉತ್ತರ ಭಾಗದ ಕಾಡಿನಲ್ಲಿ ಈ ಘಟನೆ ಸಂಭವಿಸಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಹುಲಿ ಫೋಟೋ ಕ್ಲಿಕ್ಕಿಸಿ ಸಂಕಷ್ಟಕ್ಕೆ ಸಿಲುಕಿದ 'ಕೆಜಿಎಫ್-2' ನಟಿ ರವೀನಾ; ತನಿಖೆಗೆ ಆದೇಶ

ಇದು ತುಂಬಾ ಅನುಮಾನಾಸ್ಪದವಾಗಿದೆ. ಅಂದಾಜು ಎರಡು ವರ್ಷದ ಭಾರಿ ಗಾತ್ರದ ಹುಲಿಯೊಂದು ಹೀಗೆ ವೈರ್‌ಗೆ ಸಿಲುಕಿ ಮರಕ್ಕೆ ನೇಣು ಬೀಳಲು ಹೇಗೆ ಸಾಧ್ಯ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಹುಲಿಯನ್ನು ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಕೊಲ್ಲಲಾಯಿತು ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ. ನಾವು ಮೃತದೇಹದ ಮಾದರಿಗಳನ್ನು ಸಹ ತೆಗೆದುಕೊಂಡಿದ್ದೇವೆ ಮತ್ತು ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪಶುವೈದ್ಯರು ಶವಪರೀಕ್ಷೆ ನಡೆಸಿದ್ದಾರೆ  ಎಂದು ಚತ್ತರ್‌ಪುರ ವ್ಯಾಪ್ತಿಯ (Chattarpur range) ಅರಣ್ಯ ಸಂರಕ್ಷಣಾಧಿಕಾರಿ (forest conservator) ಸಂಜೀವ್ ಝಾ (Sanjeev Jha) ಹೇಳಿದ್ದಾರೆ. 

ಈ ಹುಲಿಯ ಸಾವಿನ ತನಿಖೆಗಾಗಿ ಸ್ಥಳಕ್ಕೆ ಶ್ವಾನದಳವನ್ನು ಕೂಡ ಕರೆಸಲಾಗಿದೆ. ಈ ಹುಲಿ ಸಾವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದರೆ ನೀಡುವಂತೆ ಈ ಅರಣ್ಯ ವ್ಯಾಪ್ತಿಯ ಸಮೀಪ ವಾಸಿಸುವ ನಿವಾಸಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೇಳಿದ್ದಾರೆ. ಮಧ್ಯಪ್ರದೇಶವೂ ಆರು ಹುಲಿ ಸಂರಕ್ಷಿತಾರಣ್ಯವನ್ನು ಹೊಂದಿದೆ. ಪನ್ನಾ(Panna) ಜೊತೆ ಕನ್ಹಾ, ಬಾಂಧವಗಢ (Bandhavgarh), ಪೆಂಚ್ (Pench), ಸತ್ಪುರ(Satpura) ಸಂಜಯ್ ದುಬ್ರಿ (Sanjay Dubri) ಇನ್ನುಳಿದ ಹುಲಿ ಸಂರಕ್ಷಿತಾರಣ್ಯಗಳಾಗಿವೆ. ಹುಲಿ ಸಂರಕ್ಷಿತ ಅರಣ್ಯದಲ್ಲೇ ಈ ರೀತಿ ದುರಂತ ಸಂಭವಿಸಿದ್ದು ವಿಪರ್ಯಾಸವೆನಿಸಿದೆ.

ಮೊಬೈಲ್‌ನಲ್ಲಿ ಮುಳುಗಿದ ಮೇಲೆ ಸಿಂಹ ಬಂದರೂ ತಿಳಿಯದೇ...? ಇಲ್ಲೇನಾಯ್ತು ನೋಡಿ

Follow Us:
Download App:
  • android
  • ios