ತಮಿಳುನಾಡಿನ ಸೇಲಂ ಬಳಿ ಯೆರ್ಕಾಡ್ ಎಕ್ಸ್‌ಪ್ರೆಸ್ ರೈಲು ಹಳಿತಪ್ಪುವುದರಿಂದ ಪಾರಾಗಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಮೂವರು ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಹಳಿಯ ಮೇಲೆ ಕಬ್ಬಿಣದ ರಾಡ್ ಇರಿಸಿದ್ದೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.

ಜೂನ್ 17, ಮಂಗಳವಾರ ತಡರಾತ್ರಿ ತಮಿಳುನಾಡಿನ ಸೇಲಂ ಜಿಲ್ಲೆಯ ಮಗುಡಂಚವಾಡಿ ರೈಲು ನಿಲ್ದಾಣದ ಬಳಿ ಯೆರ್ಕಾಡ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22650) ರೈಲು ಹಳಿತಪ್ಪಿಸುವ ಶಂಕಿತ ಕೃತ್ಯವೊಂದು ರೈಲು ಚಾಲಕನ ಎಚ್ಚರಿಕೆಯಿಂದ ತಪ್ಪಿಸಲಾಯಿತು ಎಂದು ದಿ ಹಿಂದೂ ವರದಿ ಮಾಡಿದೆ. ಮಾತ್ರವಲ್ಲ ಈ ರೈಲಿನಲ್ಲಿ ಹೈಕೋರ್ಟ್ ನ ಮೂವರು ನ್ಯಾಯಾಧೀಶರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈರೋಡ್ ಜಂಕ್ಷನ್‌ನಿಂದ ರಾತ್ರಿ 9:01 ಕ್ಕೆ ಹೊರಟ ಈ ರೈಲು, ಶಂಕರಿ ಬ್ಲಾಕ್‌ನ ಕಲಿಗೌಂಡಂಪಾಲಯಂ ಹಳಿಗೆ ಆಗಮಿಸುತ್ತಿದ್ದಾಗ, ಚಾಲಕನಿಗೆ ಚಕ್ರಗಳ ಕೆಳಗಿಂದ ಅಸಾಧಾರಣ ರುಬ್ಬುವ ರೀತಿಯ ಶಬ್ದ ಹಾಗೂ ಕಿಡಿಗಳು ಕಾಣಿಸಿಕೊಂಡವು. ತಕ್ಷಣವೇ ಅಪಾಯವನ್ನು ಅರಿತ ಲೋಕೊ ಪೈಲಟ್, ರೈಲನ್ನು ನಿಧಾನಗೊಳಿಸಿ ನಿಲ್ಲಿಸಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದನು.

ಅನಂತರದ ಪರಿಶೀಲನೆ ವೇಳೆ, ರೈಲ್ವೆ ಹಳಿಯ ಮೇಲೆ ಸುಮಾರು 10 ಅಡಿ ಉದ್ದದ ಕಬ್ಬಿಣದ ರಾಡ್ ಅನ್ನು ಉದ್ದೇಶಪೂರ್ವಕವಾಗಿ ಇಡಲಾಗಿದ್ದುದಾಗಿ ತಿಳಿದುಬಂದಿದೆ. ರೈಲು ಈ ಲೋಹದ ಸರಂಜಾಮಿಗೆ ಡಿಕ್ಕಿ ಹೊಡೆದು ಸುಮಾರು 300 ಮೀಟರ್ ದೂರ ಎಳೆದುಕೊಂಡು ಹೋಗಿದ್ದ ಲೋಕೊಮೋಟಿವ್‌ಗೆ ಗಂಭೀರ ಹಾನಿಯುಂಟಾಗಿದೆ.

ಪವಾಡ ಸದೃಶ್ಯ ಎಂಬಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಅದರಲ್ಲಿ ಮುಖ್ಯವಾಗಿ ಮದ್ರಾಸ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರೂ ಸೇರಿದಂತೆ, ಎಲ್ಲರೂ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಆದರೆ ಡಿಕ್ಕಿಯ ಪರಿಣಾಮವಾಗಿ ಎಂಜಿನ್‌ನ ಬ್ರೇಕ್ ಲೈನಿಂಗ್ ಜಾಮ್ ಆಗಿದ್ದು, ರೈಲು ಮುಂದೆ ಪ್ರಯಾಣಿಸದಂತೆ ಆಗಿತ್ತು.

ಘಟನೆ ನಡೆದ ಸ್ಥಳದಲ್ಲಿ ತಕ್ಷಣ ತನಿಖೆ ನಡೆಸಿದ ಲೋಕೊ ಪೈಲಟ್‌ಗಳು ಎಂಜಿನ್ ಕೆಳಗೆ ಸಿಲುಕಿರುವ ಲೋಹದ ರಾಡ್ ಪತ್ತೆಹಚ್ಚಿದರು. ಅದು ಓರ್ವ ಮನುಷ್ಯನಿಗೆ ಎತ್ತಿಕೊಂಡು ಹೋಗದಷ್ಟು ತೂಕವಾಗಿತ್ತು. ಕೂಡಲೇ ಸೇಲಂ ರೈಲ್ವೆ ವಿಭಾಗದ ಅಧಿಕಾರಿಗಳು, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಹಾಗೂ ಮಗುಡಂಚವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ತಕ್ಷಣ ಈರೋಡ್‌ನಿಂದ ಬದಲಿ ಎಂಜಿನ್ ಅನ್ನು ತರಿಸಿ ಈ ರೈಲಿಗೆ ಫಿಟ್‌ ಮಾಡಿದರು. ಹಳಿ ತೆರವುಗೊಳಿಸಿ ಹೊಸ ಎಂಜಿನ್ ಜೋಡನೆಯಾದ ನಂತರ, ರೈಲು ರಾತ್ರಿ 11:45 ಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ನಿಗದಿತ ಸಮಯಕ್ಕೆ ಎರಡು ಗಂಟೆಗಳ ವಿಳಂಬವಾಗಿ ರೈಲು ಹೊರಟಿತು.

ಯೆರ್ಕಾಡ್ ಎಕ್ಸ್‌ಪ್ರೆಸ್ ನಂತರ ಸೇಲಂ ರೈಲ್ವೆ ಜಂಕ್ಷನ್‌ಗೆ 2 ಗಂಟೆ 19 ನಿಮಿಷಗಳ ತಡವಾಗಿ ತಲುಪಿತು ಮತ್ತು ಅಂತಿಮವಾಗಿ ಬುಧವಾರ ಬೆಳಿಗ್ಗೆ 7:30 ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ತಲುಪಿದಾಗ, ಅದು ನಿಗದಿತ ವೇಳೆಗೆ ಹೋಲಿಸಿದರೆ 3 ಗಂಟೆ 50 ನಿಮಿಷಗಳ ತಡವಾಗಿತ್ತು. ಈ ಘಟನೆ ಬಳಿಕ ಹಲವು ಇತರ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಯಿತು.

ಈ ಘಟನೆ ಕುರಿತಾಗಿ ಪೊಲೀಸರು ಈಗಾಗಲೇ ಅಧಿಕೃತ ತನಿಖೆಯನ್ನು ಪ್ರಾರಂಭಿಸಿದ್ದು, ರೈಲ್ವೆ ಇಲಾಖೆ ಕೂಡ ತನ್ನ ಆಂತರಿಕ ತನಿಖೆಯನ್ನು ಆರಂಭಿಸಿದೆ. ಭವಿಷ್ಯದಲ್ಲಿ ಇಂಥ ದುಷ್ಕೃತ್ಯಗಳನ್ನು ತಡೆಗಟ್ಟಲು ತೀವ್ರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.