ಟ್ರಾಫಿಕ್ ಕ್ಯಾಮರಾ ಕಳುಹಿಸಿದ ಫೋಟೋವನ್ನು ಸಾಕ್ಷ್ಯವಾಗಿರಿಸಿ ಗಂಡನ ಜೈಲಿಗಟ್ಟಿದ ಹೆಂಡತಿ ಕೇರಳದ ಇಡುಕ್ಕಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತಿರುವನಂತಪುರ: ಇತ್ತೀಚೆಗೆ ಟ್ರಾಫಿಕ್ ಕ್ಯಾಮರಾಗಳು ಕ್ಯಾಮರಾಮ್ಯಾನ್‌ಗಿಂತ ಚೆನ್ನಾಗಿ ಫೋಟೋ ಕ್ಲಿಕ್ಕಿಸುತ್ತಿದ್ದು, ಇದನ್ನು ನೋಡಿದ ವಾಹನ ಸವಾರರು ದಂಡ ಕಟ್ಟಿದ್ರು ಪರ್ವಾಗಿಲ್ಲ ಫೋಟೋ ಚೆನ್ನಾಗಿದೆಯಲ್ಲ ಎಂದು ಹೇಳಿಕೊಳ್ಳುವಷ್ಟು ಚೆನ್ನಾಗಿರುತ್ತವೆ. ಆದರೆ ಈ ಕ್ಯಾಮರಾದ ಸ್ಪಷ್ಟತೆಯಿಂದ ಈಗ ಪತಿಯೊಬ್ಬ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದು, ಬಾಯ್ಬಾಯ್ ಬಿಡುವಂತಾಗಿದೆ. ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳಿಗೆ ಕಚೇರಿಯಿಂದ ತೆರಳುವಾಗ ದಾರಿ ಒಂದೇ ಆಗಿದ್ದಾರೆ ತಮ್ಮ ವಾಹನಗಳಲ್ಲಿ ಡ್ರಾಫ್ ಕೊಡುವುದು ಮೆಟ್ರೋ ಸಿಟಿಗಳಲ್ಲಿ ಸಾಮಾನ್ಯ ಎನಿಸಿದೆ. ಆದರೆ ಹೀಗೆ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಡ್ರಾಫ್ ನೀಡಿದ ವ್ಯಕ್ತಿಗೆ ಈಗ ಸಂಕಷ್ಟ ಎದುರಾಗಿದ್ದು, ಕಂಬಿ ಹಿಂದೆ ಕೂರುವಂತಾಗಿಗಿದೆ
ಆಗಿದ್ದೇನು?
ದ್ವಿಚಕ್ರವಾಹನದಲ್ಲಿ ಡ್ರಾಫ್ ನೀಡುವ ವೇಳೆ ಹಿಂದೆ ಕುಳಿತಿದ್ದ ಮಹಿಳಾ ಸಹೋದ್ಯೋಗಿ ಹೆಲ್ಮೆಟ್ ಹಾಕದೇ ಪ್ರಯಾಣಿಸಿದ್ದು, ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ವಾಹನ ಸವಾರರು ಟ್ರಾಫಿಕ್ ನಿಯಮ ಮೀರದಿರಲು ಹದ್ದಿನ ಕಣ್ಣಂತೆ ಕಾಯುವ ಈ ಟ್ರಾಫಿಕ್ ಕ್ಯಾಮರಾಗಳು ಈ ಸಂಚಾರ ನಿಯಮ ಉಲ್ಲಂಘನೆಯ ಫೋಟೋ ತೆಗೆದು ದಂಡದ ಸಮೇತ ಮನೆಗೆ ಕಳುಹಿಸಿದ್ದು, ಇದರಿಂದ ಈಗ ಗಂಡ ಹೆಂಡತಿ ಜಗಳ ಆಡುವಂತಾಗಿದೆ.
ಅಂದಹಾಗೆ ಗಂಡ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಹೆಂಡತಿ ಹೆಸರಿನಲ್ಲಿದ್ದು, ದಂಡದ ಚಲನ್ ಫೋಟೋ ಸಮೇತ ಹೆಂಡತಿ ಮೊಬೈಲ್‌ಗೆ ಹೋಗಿದೆ. ಗಂಡ ಇನ್ಯಾವುದು ಮಹಿಳೆಯನ್ನು ಗಾಡಿ ಹಿಂದೆ ಕೂರಿಸಿಕೊಂಡು ಬಿಂದಾಸ್ ಆಗಿ ಹೋಗುತ್ತಿರುವುದನ್ನು ನೋಡಿದ ಹೆಂಡತಿ ಗಂಡನ ಬಳಿ ಈ ಬಗ್ಗೆ ವಿಚಾರಿಸಿದ್ದಾಳೆ. ತಮ್ಮ ಹಿಂಬದಿ ಕುಳಿತಿರುವ ಮಹಿಳೆ ಯಾರು ಎಂದು ಆಕೆ ಪ್ರಶ್ನಿಸಿದ್ದಾಳೆ. ಹೀಗೆ ಸಹೋದ್ಯೋಗಿಯನ್ನು ಕರೆದೊಯ್ದ 32 ವರ್ಷದ ವ್ಯಕ್ತಿ ಟೆಕ್ಸ್‌ಟೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ತನಗೂ ತಾನು ಡ್ರಾಪ್ ನೀಡಿದ ಆ ಮಹಿಳೆಗೂ ಯಾವುದೇ ಸಂಬಂಧ ಇಲ್ಲ. ಆಕೆಗೆ ಕೇವಲ ಡ್ರಾಪ್ ನೀಡಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆದರೆ ಪತ್ನಿ ಇದನ್ನು ನಂಬಲು ರೆಡಿ ಇರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ.
ಬೆಂಗಳೂರು ವಾಹನ ಸವಾರರೇ ಎಚ್ಚರ: ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡ ಫಿಕ್ಸ್
ನಂತರ ಗಂಡನ (Husband) ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದರಿಂದ ಆತನ ಬಂಧನವಾಗಿದೆ. ಮೇ. 5ರಂದು ಪತ್ನಿ ತನ್ನ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ತನ್ನ ಹಾಗೂ ತನ್ನ ಮೂರು ವರ್ಷದ ಕಂದನ ಮೇಲೆ ಪತಿ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾಳೆ. ಏಪ್ರಿಲ್ 25 ರಂದು ಹೆಲ್ಮೆಟ್ ಇಲ್ಲದೆ ತನ್ನ ಸಹೋದ್ಯೋಗಿಯನ್ನು ಕೂರಿಸಿಕೊಂಡು 32 ವರ್ಷದ ವ್ಯಕ್ತಿ ವಾಹನ ಚಾಲನೆ ಮಾಡಿದ್ದಾರೆ.
ಪತ್ನಿಯ ದೂರಿನ ಆಧಾರದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 321 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 341 (ತಪ್ಪು ಸಂಯಮ) ಮತ್ತು 294 (ಅಶ್ಲೀಲ ಕೃತ್ಯಗಳು) ಮತ್ತು ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 75 (ಮಗುವಿನ ಮೇಲೆ ಹಲ್ಲೆ ಅಥವಾ ನಿರ್ಲಕ್ಷ್ಯ) ಅಡಿಯಲ್ಲಿ ಬಂಧನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಂಧಿತ ಪತಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಿದೆ. ರಸ್ತೆ ಸುರಕ್ಷತಾ ಯೋಜನೆ 'ಸೇಫ್ ಕೇರಳ' ಭಾಗವಾಗಿ ರಾಜ್ಯದ ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ವಿಚಾರವೂ ಕೇರಳದಲ್ಲಿ ತೀವ್ರ ರಾಜಕೀಯ ಗದ್ದಲಕ್ಕೆ ಸಾಕ್ಷಿಯಾಗಿದೆ. ಕ್ಯಾಮೆರಾಗಳ ಅಳವಡಿಕೆಗೆ ಸಂಬಂಧಿಸಿದ ಒಪ್ಪಂದಗಳ ಕುರಿತು ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದೆ. ಈ ಮಧ್ಯೆ ಈ ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಟ್ರಾಫಿಕ್ ಕ್ಯಾಮರಾದಲ್ಲಿ ಸೆಲ್ಫೀ ಕ್ಲಿಕ್ಕಿಸಲು ಬಂದ ಹಕ್ಕಿ! ವಿಡಿಯೋ ಫುಲ್ ವೈರಲ್
ಗಂಡ ಹೆಂಡತಿ ಮಧ್ಯೆ ನಂಬಿಕೆ ಪರಸ್ಪರ ಪ್ರೀತಿ ವಿಶ್ವಾಸವೆಂಬ ತೆಳುವಾದ ಪದರವಿರುತ್ತದೆ. ಗಂಡ ಹೆಂಡತಿ ಮಧ್ಯೆ ಮೊದಲೇ ಇದ್ದಂತಹ ಸಣ್ಣ ಪುಟ್ಟ ವಿರಸ ಅಪನಂಬಿಕೆಗೆ ಈ ಫೋಟೋದಿಂದ ತುಪ್ಪ ಸುರಿದಂತಾಗಿದೆ. ಕೇರಳದ ಇಡುಕ್ಕಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
