ಚೇಸಿಂಗ್ ವೇಳೆ ದರೋಡೆಕೋರರಿಂದ ಪೊಲೀಸರ ಮೇಲೆಯೇ ಗುಂಡಿನ ದಾಳಿ: ಓರ್ವ ಪೊಲೀಸ್ ಹುತಾತ್ಮ
ನಾಲ್ವರು ಶಸ್ತ್ರಾಸ್ತ್ರಧಾರಿ ದರೋಡೆಕೋರರನ್ನು ಬೆನ್ನಟ್ಟುವ ವೇಳೆ ಪೊಲೀಸರ ಮೇಲೆಯೇ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಪೊಲೀಸ್ ಪೇದೆ ಗುಂಡು ತಗುಲಿ ಮೃತಪಟ್ಟಿದ್ದಾರೆ.

ಫಗ್ವಾರಾ: ನಾಲ್ವರು ಶಸ್ತ್ರಾಸ್ತ್ರಧಾರಿ ದರೋಡೆಕೋರರನ್ನು ಬೆನ್ನಟ್ಟುವ ವೇಳೆ ಪೊಲೀಸರ ಮೇಲೆಯೇ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಪೊಲೀಸ್ ಪೇದೆ ಗುಂಡು ತಗುಲಿ ಮೃತಪಟ್ಟಿದ್ದಾರೆ. ದರೋಡೆಕೋರರು ಹಾರಿಸಿದ ಗುಂಡು 28 ವರ್ಷದ ಕಾನ್ಸ್‌ಟೇಬಲ್ ಕುಲದೀಪ್ ಸಿಂಗ್ ಬಜ್ವಾ ಅವರ ತೊಡೆಯನ್ನು ಸೀಳಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಹುತಾತ್ಮರಾದ ಪೊಲೀಸ್ ಕಾನ್ಸ್‌ಟೇಬಲ್ ಕುಲದೀಪ್ ಸಿಂಗ್ ಬಜ್ವಾ ಅವರು ಫಗ್ವಾರಾ ಸ್ಟೇಷನ್ ಹೌಸ್ ಆಫೀಸರ್ ಅಮಂದೀಪ್ ನಹರ್ ಅವರ ಗನ್‌ಮ್ಯಾನ್ ಆಗಿದ್ದರು.
ಭಾನುವಾರ ತಡರಾತ್ರಿ ಪಂಜಾಬ್‌ನ ಜಲಂಧರ್ ಜಿಲ್ಲೆಯ ಫಿಲ್ಲೌರ್ ಉಪವಿಭಾಗದ ವ್ಯಾಪ್ತಿಯ ಕಂಗ್ಜಗೀರ್ ಗ್ರಾಮದಲ್ಲಿ ದರೋಡೆಕೋರರು ವ್ಯಕ್ತಿಯೊಬ್ಬನಿಂದ ಕಾರನ್ನು ಕಸಿದುಕೊಂಡು ಅದರಲ್ಲಿ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಬೆನ್ನಟ್ಟಲು ಮುಂದಾದಾಗ ದರೋಡೆಕೋರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ.
ಸ್ಥಳೀಯ ಅರ್ಬನ್ ಎಸ್ಟೇಟ್‌ನಲ್ಲಿರುವ ( Urban Estate) ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ಎಸ್‌ಬಿಎಸ್ ನಗರದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದಾಗ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಕಾರನ್ನು ದೋಚಿದ್ದಾರೆ. ಕಾರಿನಲ್ಲಿದ್ದ ಮಾಲೀಕನ ತಲೆಗೆ ಗನ್ ಪಾಯಿಂಟ್ ಇಟ್ಟು ಬೆದರಿಸಿ ಕಾರನ್ನು ವಶಕ್ಕೆ ಪಡೆದ ದರೋಡೆಕೋರರು ಕಸಿದ ಕಾರಿನಲ್ಲೇ ಪರಾರಿಯಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಫಗ್ವಾರ (Phagwara) ಮತ್ತು ಗೊರಯಾ (Goraya)ಪೊಲೀಸರು ಜಿಆರ್‌ಪಿ ವ್ಯವಸ್ಥೆಯ (GRP system) ಸಹಾಯದಿಂದ ದರೋಡೆಕೋರರನ್ನು ಪತ್ತೆಹಚ್ಚಿ ಬೆನ್ನಟ್ಟಲು ಶುರು ಮಾಡಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಈ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ಬಜ್ವಾ ಅವರ ತೊಡೆಗೆ ಗುಂಡು ಹೊಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳನ ಮನಸ್ಸು ಹುಳ್ಳಹುಳ್ಳಗೆ: ಬೆನ್ನಟ್ಟಿದ ಪೊಲೀಸರಿಗೆ ಸಿಕ್ತು 85 ಲಕ್ಷ ಅಕ್ರಮ ನಗದು
ಕೂಡಲೇ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದು, ಮೂವರು ದರೋಡೆಕೋರರ ಕಾಲಿಗೆ ಗುಂಡಿಕ್ಕಿಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಒಬ್ಬ ರೋಡೆಕೋರ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಈ ವೇಳೆ ಗಾಯಗೊಂಡ ಬಾಜ್ವಾ ಅವರನ್ನು ಕೂಡಲೇ ಫಗ್ವಾರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ನಂತರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ದರೋಡೆಕೋರರನ್ನು ಕುಲ್ವಿಂದರ್ ಸಿಂಗ್ ಅಲಿಯಾಸ್ ಕಿಂಡಾ, ವಿಷ್ಣು ಮತ್ತು ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಇವರನ್ನು ಮೊದಲಿಗೆ ಫಿಲ್ಲೌರ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ನಂತರ ಜಲಂಧರ್‌ನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೃತ ಬಾಜ್ವಾ ಅವರು, ಬಟಾಲಾ (Batala) ನಿವಾಸಿಯಾಗಿದ್ದು, ಕಪುರ್‌ಥಲದಲ್ಲಿ (Kapurthala) ವಾಸ ಮಾಡುತ್ತಿದ್ದರು ಎಂದು ಬಾಜ್ವಾ ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ಫಗ್ವಾರಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪ್ರೀತ್ ಸಿಂಗ್ (Jaspreet Singh) ಹೇಳಿದರು. ಇನ್ಸ್ಟಾಗ್ರಾಮ್‌ನಲ್ಲಿ (Instagram) ಸಾಕಷ್ಟು ಜನಪ್ರಿಯರಾಗಿದ್ದ ಬಾಜ್ವಾ ಅವರು ಅಲ್ಲಿ ಅನೇಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡ್ರಗ್ ಪೆಡ್ಲರ್‌ಗಳನ್ನು ಚೇಸ್ ಮಾಡಿ ಹಿಡಿದ ಪೊಲೀಸರು... ವಿಡಿಯೋ ವೈರಲ್
ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಮತ್ತು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ (Gaurav Yadav) ಅವರು ಬಾಜ್ವಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಮೃತರಾದ ಹುತಾತ್ಮ ಕಾನ್‌ಸ್ಟೇಬಲ್ ಕುಲದೀಪ್ ಸಿಂಗ್ ಬಜ್ವಾ ಬೆಲ್ಟ್ ನಂ. 886/ಕೆಪಿಟಿ ಅವರಿಗೆ ಸೆಲ್ಯೂಟ್, ಕರ್ತವ್ಯದಲ್ಲಿದ್ದಾಗ ಮೃತರಾದ ಅವರಿಗೆ ಸರ್ಕಾರ ಒಂದು ಕೋಟಿ ರೂ ಪರಿಹಾರ ನೀಡುತ್ತದೆ. ಅವರ ಕುಟುಂಬದೊಂದಿಗೆ ಸರ್ಕಾರವಿದೆ ಎಂದು ಭಗವಂತ್ ಮಾನ್ ಟ್ವಿಟ್ ಮಾಡಿದ್ದಾರೆ.