ರಾಜ್ಯದಲ್ಲಿ ಬರದ ಛಾಯೆ ಇರುವಾಗಲೇ ಅಕ್ಟೋಬರ್ 15ರಿಂದ ಹಿಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಯಾವ ಭಾಗದಲ್ಲಿ ಹಿಂಗಾರು ಮಳೆ ಆಗಲಿದೆ ಎಂಬುದರ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಎಲ್ ನಿನೋ ಪ್ರಭಾವದಿಂದ ಶೇ.12.6ರಷ್ಟು ಮಳೆ ಕೊರತೆಯಾಗಿದೆ.
ನವದೆಹಲಿ: ಕರ್ನಾಟಕ ಸೇರಿದಂತೆ ಕೆಲ ದಕ್ಷಿಣದ ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇರುವ ಹೊತ್ತಿನಲ್ಲೇ, ಮುಂದಿನ 4-5 ದಿನಗಳಲ್ಲಿ ಈ ಪ್ರದೇಶಕ್ಕೆ ಹಿಂಗಾರು ಪ್ರವೇಶಿಸಲಿದ್ದು ಭಾರೀ ಮಳೆಯಾಗಲಿದೆ ಎಂಬ ಶುಭಸುದ್ದಿಯನ್ನು ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
2-3 ದಿನಗಳಲ್ಲಿ ದಕ್ಷಿಣ ಭಾರತಕ್ಕೆ ಈಶಾನ್ಯ ಮಾರುತ ಪ್ರವೇಶಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಪರಿಣಾಮ ಅ.15ರಿಂದ 18ರ ವರೆಗೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ಆಂಧ್ರಪ್ರದೇಶ ಹಲವೆಡೆ ವರ್ಷಧಾರೆಯ ನಿರೀಕ್ಷೆಯಿದೆ. ಅಂತೆಯೇ, ಅ.17 ಮತ್ತು 18ರಂದು ಕರ್ನಾಟಕದಲ್ಲಿ, ಅ.15 ಮತ್ತು 16ರಂದು ರಾಯಲಸೀಮೆಯಲ್ಲಿ ಮಳೆಯಾಗಲಿದೆ.
ಇದರೊಂದಿಗೆ ನೈಋತ್ಯ ಮುಂಗಾರು ಭಾರತದಿಂದ ನಿರ್ಗಮಿಸಲಿದೆ.
ಶೇ.12.6ರಷ್ಟು ಮಳೆ ಕೊರತೆ
ಕೃಷಿಗೆ ಅತ್ಯಗತ್ಯವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನೈಋತ್ಯ ಮುಂಗಾರು ಅವಧಿಯಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.12.6ರಷ್ಟು ಕಡಿಮೆ, ಅರ್ಥಾತ್ 759.4 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 868.6 ಮಿ.ಮೀ. ಮಳೆಯಾಗುತ್ತದೆ ಎಂದು ಐಎಂಡಿ ತಿಳಿಸಿದೆ. ಎಲ್ ನಿನೋ ಇದಕ್ಕೆ ಪ್ರಮುಖ ಕಾರಣ.
ಮಳೆಯೇ ಬೆಳೆಗಳಿಗೆ ಜೀವಾಳ
ಜೂನ್‌ನಿಂದ ಅಕ್ಟೋಬರ್ ವರೆಗೆ ಕಾಲಾನುಸಾರ ಮಳೆಯಾದರೆ ಮುಂಗಾರು ಮತ್ತು ಹಿಂಗಾರು ಬೆಳೆಗಳು ಸಮೃದ್ಧವಾಗಿ ಬೆಳೆದು ರೈತರ ಕೈ ಸೇರುತ್ತವೆ. ಇದರಿಂದ ಕೃಷಿ ಆಧಾರಿತ ಕುಟುಂಬಗಳ ಆರ್ಥಿಕ ಬದುಕಿಗೂ ಆಸರೆಯಾಗುತ್ತದೆ. ಹಿಂದೆ ಕಾಲಕಾಲಕ್ಕೆ ಮಳೆಯಾಗುತ್ತಿದ್ದ ಪರಿಣಾಮ ಉತ್ತಮ ಇಳುವರಿ ಪಡೆಯಲಾಗುತ್ತಿತ್ತು. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಮಳೆಯ ಏರುಪೇರಿನಿಂದ ಆಹಾರ ಧಾನ್ಯಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೋಡ ಬಿತ್ತನೆ
ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಕ್ರಮಕೈಗೊಂಡರೂ, ನಿರ್ದಿಷ್ಟ ಸಾಂದ್ರತೆಯ ಮೋಡಗಳಿದ್ದಾಗ ಮಾತ್ರ ಸಿಲ್ವರ್ ಅಯೋಡೈಡ್ ಸೇರಿದಂತೆ ರಾಸಾಯನಿಕ ಬಳಸಿ ಕೃತಕವಾಗಿ ಮಳೆ ತರಿಸುವ ಪ್ರಯತ್ನ ಪರಿಣಾಮಕಾರಿಯಾಗುತ್ತದೆ. ಹವಾಮಾನದಲ್ಲಿ ವ್ಯತ್ಯಯವಾದರೆ ಮೋಡ ಬಿತ್ತನೆ ಪ್ರಯೋಜನಕಾರಿಯಾಗದ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.


