ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ ಆಗುಂಬೆಯ ಮಳೆಯನ್ನೂ ಮೀರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಿಕೆವಿಕೆಯಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು (ಅ.06): ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ. ನಗರದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಬೆಂಗಳೂರಲ್ಲಿ ಎಲ್ಲಿ ಎಷ್ಟು ಮಳೆ?

ಹವಾಮಾನ ಇಲಾಖೆಯ ವರದಿಯ ಪ್ರಕಾರ, ನಗರದ ಹಲವೆಡೆ ಉತ್ತಮ ಮಳೆಯಾಗಿದೆ.

ಜಿಕೆವಿಕೆ (GKVK): ಬರೋಬ್ಬರಿ 69.5 ಮಿ.ಮೀ ಮಳೆ ದಾಖಲಾಗಿದೆ.

ಬೆಂಗಳೂರು ನಗರ (Bengaluru City): 42.6 ಮಿ.ಮೀ ಮಳೆ ಸುರಿದಿದೆ.

ಎಚ್‌ಎಎಲ್ ವಿಮಾನ ನಿಲ್ದಾಣ (HAL Airport): 20.1 ಮಿ.ಮೀ ಮಳೆಯಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL): 20.0 ಮಿ.ಮೀ ಮಳೆ ದಾಖಲಾಗಿದೆ.

ನಗರದಲ್ಲಿ ಆರ್ದ್ರತೆ (Relative Humidity) ಪ್ರಮಾಣ ಶೇ. 80 ರಿಂದ 90 ರಷ್ಟಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ:

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಕೆಲವೆಡೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 24 ಗಂಟೆಗಳಲ್ಲಿ: ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ.

ಮುಂದಿನ 48 ಗಂಟೆಗಳಲ್ಲಿ: ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.

ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮಳೆ ಸಿಂಚನ:

ಬೆಂಗಳೂರು ಮಾತ್ರವಲ್ಲದೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ.

ಚಿಕ್ಕಬಳ್ಳಾಪುರ: 54.5 ಮಿ.ಮೀ

ಕೋಲಾರ (ತಮಕ KVK): 39.0 ಮಿ.ಮೀ

ಚಿಂತಾಮಣಿ: 23.0 ಮಿ.ಮೀ

ಬಾಳೆಹೊನ್ನೂರು (ಚಿಕ್ಕಮಗಳೂರು): 12.0 ಮಿ.ಮೀ

ಬ್ರಹ್ಮಾವರ (ಉಡುಪಿ): 11.0 ಮಿ.ಮೀ

ಗದಗ: 7.7 ಮಿ.ಮೀ

ಆಗುಂಬೆ (ಶಿವಮೊಗ್ಗ): 7.5 ಮಿ.ಮೀ

ಇದಲ್ಲದೆ ಮಂಗಳೂರು, ಕಾರವಾರ ಮತ್ತು ಬೆಳಗಾವಿಯ ಕೆಲವೆಡೆ ತುಂತುರು ಹಾಗೂ ಸಾಧಾರಣ ಮಳೆಯಾಗಿದೆ.