ರೈಲು ಬರುತ್ತಿದ್ದಂತೆ ಹಳಿಗೆ ಹಾರಿದ ಯುವಕ ಯುವಕನನ್ನು ಕ್ಷಣದಲ್ಲಿ ರಕ್ಷಿಸಿದ ರೈಲ್ವೆ ಪೊಲೀಸ್ ಭಯಾನಕ ವಿಡಿಯೋ ವೈರಲ್
ಥಾಣೆ (ಮಾ.24): ರೈಲು ಬರುವುದಕ್ಕೆ ಕೆಲವೇ ಕ್ಷಣಗಳಿರುವಾಗ ರೈಲು ಹಳಿಗೆ ಹಾರಿದ 18 ರಯುವಕನನ್ನು ರೈಲ್ವೆ ಪೊಲೀಸೊಬ್ಬರು ಪವಾಡಸದೃಶವಾಗಿ ರಕ್ಷಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠಲವಾಡಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹೀಗೆ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮಹಾರಾಷ್ಟ್ರದ (Maharashtra) ಕಲ್ಯಾಣ (kalyana) ನಿವಾಸಿ ಎಂದು ಗುರುತಿಸಲಾಗಿದೆ. ಈತ ರೈಲು ಬರುವ ಮೊದಲು ನಿಲ್ದಾಣ ಫ್ಲಾಟ್‌ಫಾರ್ಮ್‌ನ ಅಂಚಿನಲ್ಲಿ ನಿಂತುಕೊಂಡಿದ್ದ. ರೈಲು ಬರುವುದನ್ನು ನೋಡುತ್ತಿದ್ದಂತೆ ಒಮ್ಮೆಲೆ ಹಳಿಗೆ ಹಾರಿದ್ದಾನೆ. ಇದನ್ನು ತಕ್ಷಣವೇ ನೋಡಿದ ರೈಲ್ವೆ ಪೊಲೀಸ್ ಒಬ್ಬರು ಕೂಡಲೇ ಹಳಿಗೆ ಹಾರಿ ರೈಲು ಪಾಸಾಗುವ ಮೊದಲು ಆತನನ್ನು ಎಳೆದುಕೊಂಡು ಮತ್ತೊಂದು ಕಡೆಗೆ ಹಾರಿದ್ದಾರೆ. ಇದರ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
31 ವರ್ಷದ ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಕಾರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ರೈಲ್ವೆ ಪೊಲೀಸ್ ಪೇದೆ ಯುವಕನನ್ನು ರಕ್ಷಿಸುತ್ತಿರುವ ವಿಡಿಯೋ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಪೊಲೀಸ್ ಪೇದೆಯ ಕಾರ್ಯವನ್ನು ಜನ ಶ್ಲಾಘಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಯುವಕ ವಿಠಲವಾಡಿ (vitalawaadi) ರೈಲ್ವೆ ನಿಲ್ದಾಣದ ಲೋಕಮಾನ್ಯ ತಿಲಕ್ (lokamanya Tilak terminal) ಟರ್ಮಿನಲ್‌ನಲ್ಲಿ ಹಳಿಯ ಹತ್ತಿರವೇ ನಿಂತಿದ್ದ. ಈ ವೇಳೆ ದೂರದಲ್ಲಿ ಮಧುರೈ ಎಕ್ಸ್‌ಪ್ರೆಸ್ ರೈಲು ಬರುವುದನ್ನು ನೋಡಿದ ಈತ ಹಳಿಗೆ ಹಾರಿದ್ದಾನೆ. ಇದನ್ನು ನೋಡಿದ ರೈಲ್ವೆ ಪೊಲೀಸರು ತಕ್ಷಣವೇ ಆತನೊಂದಿಗೆ ಹಳಿಗೆ ಹಾರಿ ಆತನನ್ನು ಹಳಿಯಿಂದ ಆಚೆಗೆ ಎಳೆದು ಜೀವ ಉಳಿಸಿದ್ದಾರೆ. ಇದಾಗಿ ಕ್ಷಣದಲ್ಲೇ ರೈಲು ಇದೇ ಹಳಿಯಲ್ಲಿ ಪಾಸಾಗಿದೆ.
ರೈಲು ಬರುತ್ತಿದ್ದಂತೆ ಮಗುವಿನೊಂದಿಗೆ ಹಳಿಗೆ ಹಾರಿದ ವ್ಯಕ್ತಿ: ಮಗು ಪವಾಡಸದೃಶವಾಗಿ ಪಾರು...
ರೈಲು ನಿಲ್ದಾಣಗಳಲ್ಲಿ ಇಂತಹ ಅವಘಡಗಳು ಆಗಾಗ ನಡೆಯುತ್ತಿದ್ದು, ಇಂತಹ ಹಲವು ವಿಡಿಯೋಗಳನ್ನು ಭಾರತೀಯ ರೈಲ್ವೆ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಎಚ್ಚರಿಕೆ ನೀಡುತ್ತಿದೆ. ಕೆಲ ದಿನಗಳ ಹಿಂದೆ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಪ್ರಯಾಣಿಕನೋರ್ವ ಕೆಳಗೆ ಬಿದ್ದು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾದ ಘಟನೆ ತೆಲಂಗಾಣದ ವಾರಂಗಲ್ (Warangal) ರೈಲು ನಿಲ್ದಾಣದಲ್ಲಿ ನಡೆದಿತ್ತು. ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಯುವಕನನ್ನು ದೊಡ್ಡ ದುರಂತದಿಂದ ರಕ್ಷಿಸಿತ್ತು. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ನಂತರ ವ್ಯಕ್ತಿ ಬಿದ್ದಿದ್ದು, ಕರ್ತವ್ಯದಲ್ಲಿದ್ದ ಇಬ್ಬರು ಆರ್‌ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ. ಇದರ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Selfie On Railway Track : ಸೆಲ್ಫಿ ತೆಗೆಯುವಾಗ ರೈಲು ಡಿಕ್ಕಿ, ನಾಲ್ವರ ಸಾವು!
ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರೈಲು ನಿಧಾನವಾಗಿ ಚಲಿಸುವಾಗ ಇಬ್ಬರು ಆರ್‌ಪಿಎಫ್ ಸಿಬ್ಬಂದಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಾ ಹೋಗುತ್ತಿರುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿನಿಂದ ಒಬ್ಬ ಪ್ರಯಾಣಿಕನು ಹಠಾತ್ತನೆ ಇಳಿಯಲು ಹೋಗಿ ಜಾರಿ ಬೀಳುತ್ತಾನೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಸುರಕ್ಷಿತವಾಗಿ ಮೇಲೆಳೆದುಕೊಳ್ಳುತ್ತಾರೆ. ಫೆಬ್ರವರಿ 8 ರಂದು ಸಂಜೆ 6:15 ರ ವೇಳೆ ಈ ಘಟನೆ ನಡೆದಿದೆ.