ವಿಮಾನದಲ್ಲಿ ಪ್ರಯಾಣಿಸುವಾಗ 11A ಸೀಟನ್ನು ಮಾತ್ರ ಬುಕ್ ಮಾಡಬೇಡಿ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಕಾರಣ ಏನು? ಈಗ ಅದೇ ಸೀಟಿಗೆ ಭಾರಿ ಡಿಮಾಂಡ್ ಶುರುವಾಗಿದ್ದು 27 ವರ್ಷಗಳ ಹಿಂದೆ ನಡೆದ ಪವಾಡವೇನು?
ವಿಮಾನದಲ್ಲಿ ಯಾವುದೇ ಸೀಟು ಬೇಕಾದ್ರೂ ಬುಕ್ ಮಾಡಿ. ಆದರೆ ವಿಮಾನದಲ್ಲಿ ಒಳ್ಳೆಯ ಅನುಭವ ಬೇಕು ಎಂದರೆ 11ಎ ಮಾತ್ರ ಬುಕ್ ಮಾಡಬೇಡಿ ಎಂದು ಮೊದಲಿನಿಂದಲೂ ಹೇಳುತ್ತಲೇ ಬರಲಾಗಿದೆ. ಅದರಲ್ಲಿಯೂ ಜೀವನದಲ್ಲಿ ಅಪರೂಪಕ್ಕೆ ವಿಮಾನದಲ್ಲಿ ಹಾರಾಟ ಮಾಡಿ ಅದರ ಮಜಾ ಪಡೆಯಬೇಕೆಂದುಕೊಳ್ಳುವವರಿಗೆ ಈ ನಂಬರ್ ಬುಕ್ ಮಾಡಬೇಡಿ ಎನ್ನುವುದು. ಇದಕ್ಕೆ ಕಾರಣವೂ ಇದೆ, ಅದೇನೆಂದರೆ, ವಿಮಾನ ಟಿಕೆಟ್ ಬುಕ್ ಮಾಡುವಾಗ, ಅನೇಕ ಪ್ರಯಾಣಿಕರು ಸುಂದರವಾದ ನೋಟಗಳು ಮತ್ತು ಆರಾಮದಾಯಕ ಪ್ರಯಾಣವನ್ನು ನಿರೀಕ್ಷಿಸಲು ಕಿಟಕಿ ಆಸನಗಳತ್ತ ಆಕರ್ಷಿತರಾಗುತ್ತಾರೆ. 11ಎ ಕೂಡ ಕಿಟಕಿ ಬಳಿಯ ಸೀಟೇ ಆಗಿದ್ದರೂ ಇದು ಬೇರೆ ಕಿಟಕಿ ಬದಿಯ ಸೀಟಿಗಿಂತ ಭಿನ್ನ. ಅಂದರೆ, 11A ಸೀಟ್ ಸಾಮಾನ್ಯವಾಗಿ ರೆಕ್ಕೆಯ ಮೇಲೆ ಇರುತ್ತದೆ. ಆದ್ದರಿಂದ ಹೊರಗಿನ ನೋಟವನ್ನು ಅನುಭವಿಸಲು ಆಗುವುದಿಲ್ಲ. ಮಾತ್ರವಲ್ಲದೇ ಈ ಸೀಟಿನವರೆಗೆ ಸೇವೆ ವಿಳಂಬವಾಗಿ ಸಿಗುತ್ತದೆ ಎಂದೇ ಹೇಳಲಾಗುತ್ತದೆ. ಅದರಲ್ಲಿಯೂ ಬೋಯಿಂಗ್ 737 ನಂತಹ ಕೆಲವು ವಿಮಾನಗಳಲ್ಲಿ, ಹವಾನಿಯಂತ್ರಣ ವ್ಯವಸ್ಥೆಯ ಡಕ್ಟ್‌ವರ್ಕ್‌ನ ನಿಯೋಜನೆಯು ಈ ಸೀಟಿನಲ್ಲಿ ಕಿಟಕಿಯನ್ನು ಬಿಟ್ಟುಬಿಡುವ ಅಗತ್ಯವಿರುತ್ತದೆ. ಪರಿಣಾಮವಾಗಿ, ಪ್ರಯಾಣಿಕರು ನಿರೀಕ್ಷಿತ ವೈಮಾನಿಕ ನೋಟಗಳ ಬದಲಿಗೆ ಖಾಲಿ ಗೋಡೆಯತ್ತ ನೋಡಬೇಕಾಗುತ್ತದೆ. ಈ ವಿನ್ಯಾಸದ ವಿಲಕ್ಷಣದಿಂದಾಗಿ ನಿರ್ದಿಷ್ಟವಾಗಿ ಕಿಟಕಿ ಆಸನಗಳನ್ನು ಆಯ್ಕೆ ಮಾಡುವವರಿಗೆ ವಿಶೇಷವಾಗಿ ನಿರಾಶಾದಾಯಕವಾಗಿರುತ್ತದೆ.
ಆದರೆ ಇದೀಗ ಕುಖ್ಯಾತಿ ಗಳಿಸಿರೋ ವಿಮಾನದ ಇದೇ ಸೀಟ್ಗೆ ಭಾರಿ ಬೇಡಿಕೆ ಬರುತ್ತಿದೆ. ವಿಮಾನದಲ್ಲಿ ಪ್ರಯಾಣಿಸುವವರು ಇದೇ ಸೀಟು ಬೇಕು ಎನ್ನುತ್ತಿದ್ದಾರಂತೆ. ಅದಕ್ಕೆ ಕಾರಣ, ಮೊನ್ನೆ ನಡೆದ ಅಹಮದಾಬಾದ್ ವಿಮಾನ ದುರಂತ. ವಿಮಾನದಲ್ಲಿದ್ದ 240 ಜನರನ್ನು ಬಲಿ ಪಡೆದ ಈ ದುರಂತದಲ್ಲಿ ಬದುಕಿರುವ ಏಕೈಕ ಪ್ರಯಾಣಿಕ ರಮೇಶ್ ಅವರು ಕುಳಿತದ್ದು ಇದೇ ಸೀಟ್ ನಂಬರ್ನಲ್ಲಿ. ಇಲ್ಲಿಂದು ಜಿಗಿದು ಅವರು ಪ್ರಾಣವನ್ನು ಪವಾಡಸದೃಶವಾಗಿ ಉಳಿಸಿಕೊಂಡಿದ್ದರು. ಅದಕ್ಕಾಗಿಯೇ ಇದು ಅದೃಷ್ಟದ ಸೀಟು ಎಂದೇ ನಂಬಲಾಗುತ್ತಿದೆ. ಇದೇ ಕಾರಣಕ್ಕೆ ವಿಮಾನದ ಟಿಕೆಟ್ ಪಡೆಯುವವರೆಲ್ಲರೂ ಇದೇ ಸೀಟಿಗೆ ಬೇಡಿಕೆ ಒಡ್ಡುತ್ತಿದ್ದಾರಂತೆ.
ಇನ್ನೂ ಕುತೂಹಲದ ಸಂಗತಿ ಏನೆಂದರೆ, ಇದೀಗ ಥಾಯ್ಲೆಂಡ್ ನಟ-ಗಾಯಕ ರುವಾಂಗ್ಸಾಕ್ ಲೊಯ್ಚುಸಾಕ್ ಮಾಹಿತಿ ಹಂಚಿಕೊಂಡಿದ್ದಾರೆ. ಅದೇನೆಂದರೆ, ಇದೇ ಸೀಟು ಅವರ ಜೀವವನ್ನು ಉಳಿಸಿದ್ದರ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಡಿಸೆಂಬರ್ 11, 1998ರಂದು, 20 ವರ್ಷದ ರುವಾಂಗ್ಸಾಕ್ ಲೊಯ್ಚುಸಾಕ್ ಸಾವಿನಿಂದ ಗೆದ್ದು ಬಂದಿದ್ದರು. ರುವಾಂಗ್ಸಾಕ್ ಲೊಯ್ಚುಸಾಕ್ ಅವರು ಪ್ರಯಾಣಿಸುತ್ತಿದ್ದ ಏರ್ವೇಸ್ ವಿಮಾನ TG261 ದಕ್ಷಿಣ ಥೈಯ್ಲೆಂಡ್ನಲ್ಲಿ ತಗ್ಗು ಪ್ರದೇಶಕ್ಕೆ ಉರುಳಿತ್ತು. ಆಗ ವಿಮಾನದಲ್ಲಿದ್ದ 146 ಜನರಲ್ಲಿ 101 ಜನರು ಜೀವಬಿಟ್ಟಿದ್ದರು. ಆಗ ರುವಾಂಗ್ಸಾಕ್ ಲೊಯ್ಚುಸಾಕ್ ಅವರು 11A ಸೀಟ್ನಲ್ಲಿ ಕುಳಿತುಕೊಂಡಿದ್ದರಿಂದ ಬಜಾವ್ ಆಗಿದ್ದರಂತೆ. ಈ ಸುದ್ದಿ ವೈರಲ್ ಆಗುತ್ತಲೇ ಇದು ಜೀವ ಕಾಪಾಡುವ ಸೀಟು ಎಂದೇ ಬಣ್ಣಿಸಲಾಗುತ್ತಿದೆ.
ಇನ್ನು ಮೊನ್ನೆ ಅಹಮದಾಬಾದ್‌ನ ಮೇಘನಿನಗರದಲ್ಲಿ ಸಂಭವಿಸಿದ ನಡೆದ ದುರಂತದ ಕುರಿತು ಹೇಳುವುದಾದರೆ, ವಿಮಾನ ದುರಂತ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ನಿಯೋಜಿಸಲಾಗಿದೆ. ಕೇಂದ್ರ ಗೃಹಸಚಿವಾಲಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, 3 ತಿಂಗಳ ಗಡುವು ನಿಗದಿಪಡಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಬ್ಲ್ಯಾಕ್‌ಬಾಕ್ಸ್ ಪತ್ತೆ ಮಾಡಲಾಗಿದ್ದು, ದತ್ತಾಂಶವನ್ನು ಡಿಕೋಡ್ ಮಾಡಲಾಗುತ್ತಿದೆ. ಇದರ ದತ್ತಾಂಶದಿಂದ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿಯಲಿದೆ. ಅಲ್ಲದೇ ಅನೇಕ ತನಿಖಾ ಸಂಸ್ಥೆಗಳು ಹಾಗೂ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಹ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಅವರು ವಿವರಿಸಿದ್ದಾರೆ.
