ವಿಮಾನ ಮಾರ್ಗಮಧ್ಯೆ ಪತನಗೊಂಡು ಎಲ್ಲರೂ ಸಾವನ್ನಪ್ಪಿದಾಗ ದಟ್ಟಾರಣ್ಯದಲ್ಲಿ ಬಿದ್ದು ಮೃಗಗಳು, ವಿಷಜಂತುಗಳ ನಡುವೆ 11 ದಿನ ಕಳೆದ ಬಾಲಕಿಯ ಮೈನವಿರೇಳುವ ಸ್ಟೋರಿ ಇದು. 

ನಿನ್ನೆ ಗುಜರಾತ್​ನ ಅಹಮಾಬಾದ್​​ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ, ವಿಮಾನದಲ್ಲಿದ್ದ 242 ಜನರಲ್ಲಿ ಎಲ್ಲರೂ ಪ್ರಾಣ ಕಳೆದುಕೊಂಡರೂ ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆ ರಮೇಶ್​ ವಿಶ್ವಾಸ್​ ಅವರು ಇದೀಗ ಕೇಂದ್ರಬಿಂದುವಾಗಿದ್ದಾರೆ. ವಿಮಾನ ಬಿದ್ದಿರುವ ರೀತಿ ನೋಡಿದರೆ, ಸಾವಿನ ಬಾಯಿಗೆ ಹೋಗಿ ಸಾವನ್ನೇ ಜಯಿಸಿ ಬಂದಿರುವ ರಮೇಶ್​ ವಿಶ್ವಾಸ್​ ಪ್ರಕರಣ ಬೆಳಕಿಗೆ ಬರುತ್ತಲೇ ಇದೀಗ ಇಂಥದ್ದೇ ಒಂದು ಮೈನವಿರೇಳುವ ಬಾಲಕಿಯ ಘಟನೆ ವೈರಲ್​ ಆಗುತ್ತಿದೆ. ಜಗತ್ತಿನ ಅತ್ಯಂತ ದಟ್ಟಾರಣ್ಯ ಎಂದೇ ಹೆಸರು ಪಡೆದಿರುವ ಅಮೆರಿಕದ ಅಮೆಜಾನ್​ ಎಂಬ ದೈತ್ಯ ಕಾಡಿನಲ್ಲಿ ಭಯಾನಕ ವನ್ಯಮೃಗಗಳು, ವಿಷಜಂತುಗಳ ನಡುವೆ 11 ದಿನ ಕಾಲಕಳೆದು ಬದುಕಿರುವ ಏಕೈಕ ಬಾಲಕಿಯ ಸ್ಟೋರಿ ಇದಾಗಿದೆ. ವಿಮಾನದಲ್ಲಿದ್ದ 93 ಮಂದಿ ಸಾವನ್ನಪ್ಪಿದರೂ ಈ ಬಾಲಕಿಯೊಬ್ಬಳೇ ಬದುಕಿದ್ದಳು.

ಕೆಲವರು ತಮ್ಮ ಧೈರ್ಯದಿಂದ ಸಾವನ್ನು ಸಹ ಸೋಲಿಸುತ್ತಾರೆ ಎನ್ನುವುದಕ್ಕೆ ಈ ಘಟನೆಯೂ ಉದಾಹರಣೆಯಾಗಿ ನಿಂತಿತು. 1971ರಲ್ಲಿ 44 ವರ್ಷಗಳ ಹಿಂದೆ, 17 ವರ್ಷದ ಜೂಲಿಯನ್ ಕೊಪಾಕ್ ಸಾವಿನ ದವಡೆಯಿಂದ ಹಿಂತಿರುಗಿದ್ದಳು. ವಾಸ್ತವವಾಗಿ, ಅವಳು ಪ್ರಯಾಣಿಸುತ್ತಿದ್ದ LANSA ಫ್ಲೈಟ್ 508 ವಿಮಾನಕ್ಕೆ ಪೆರುವಿನಲ್ಲಿ ಮಿಂಚು ಬಡಿಯಿತು. ವಿಮಾನ ಅಮೆಜಾನ್ ಕಾಡಿನಲ್ಲಿ ಅಪ್ಪಳಿಸಿತು. ಈ ವಿಮಾನದಲ್ಲಿ 92 ಜನರಿದ್ದರು. ಆದರೆ ಜೂಲಿಯನ್ ಮಾತ್ರ ಬದುಕುಳಿದಿದ್ದಳು. ವಿಮಾನ ಅಪಘಾತಕ್ಕೀಡಾದ ನಂತರ, ಜೂಲಿಯನ್​ ತನ್ನ ಸೀಟಿನ ಸಹಿತ ಅಮೆಜಾನ್​ ಕಾಡಿನಲ್ಲಿ ಬಿದ್ದಳು. ಸೀಟು ಅವಳ ಜೊತೆ ಇದ್ದ ಕಾರಣ, ಅವಳ ಜೀವಕ್ಕೆ ಹಾನಿಯಾಗಿರಲಿಲ್ಲ. ಸೀಟ್ ಬೆಲ್ಟ್ ಗುರಾಣಿಯಾಗಿ ಕಾರ್ಯನಿರ್ವಹಿಸಿತು ಮತ್ತು ಅದರ ಹೊರ ಭಾಗವು ಪ್ಯಾರಾಚೂಟ್‌ನಂತೆ ಕಾರ್ಯನಿರ್ವಹಿಸಿತು ಎಂದು ಹೇಳಲಾಗುತ್ತದೆ. ಆದ್ದರಿಂದ ಅವಳು ವಿಮಾನದಿಂದ ಹೊರಬಂದಾಗ, ಅವಳ ವೇಗ ಕಡಿಮೆಯಾಗಿತ್ತು.

ಆದರೆ ಅವಳಿಗೆ ಗಂಭೀರ ಗಾಯಗಳಾಗಿದ್ದವು. ಜೂಲಿಯನ್‌ನ ಕಾಲರ್‌ಬೋನ್ ಮುರಿದಿತ್ತು. ಅವಳ ಬಲಗೈ ತೀವ್ರವಾಗಿ ಗಾಯಗೊಂಡಿತ್ತು ಮತ್ತು ಅವಳ ಕಣ್ಣುಗಳು ಸಹ ಗಾಯಗೊಂಡಿದ್ದವು. ಪರಿಸ್ಥಿತಿ ಹೀಗಿದ್ದರೂ, ಜೂಲಿಯನ್, ಅಮೆಜಾನ್ ಕಾಡಿನಲ್ಲಿ 10 ದಿನಗಳ ಕಾಲ ಬದುಕುಳಿದಳು. ವನ್ಯಮೃಗಗಳು, ವಿಷಜಂತುಗಳ ನಡುವೆ ಆಕೆ ಅಲ್ಲಿ ಜೀವಂತ ಇದದ್ದೇ ಪವಾಡ. ಒಂದೆಡೆ ಹಸಿವು, ಇನ್ನೊಂದೆಡೆ ಪ್ರಾಣಿಗಳ ಭಯ, ಮತ್ತೊಂದೆಡೆ ಸೊಳ್ಳೆ, ಕೀಟಗಳು... ಇಂಥ ಪರಿಸ್ಥಿತಿಯಲ್ಲಿ ಯಾರಾದರೂ ಹೇಗೆ ಇರಬಹುದು ಎಂದು ಊಹಿಸಿಕೊಳ್ಳುವುದೂ ಕಷ್ಟ. ಆದರೆ ಜೂಲಿಯನ್​ ತಂದೆಯಿಂದ ಕಲಿತ ಪಾಠವೇ ಆಕೆಯ ನೆರವಿಗೆ ಬಂದಿತ್ತು. ಅದೇನೆಂದರೆ, ಜೂಲಿಯನ್ ತಂದೆ ಅಮೆಜಾನ್ ಕಾಡಿನಲ್ಲಿ ವನ್ಯಜೀವಿಗಳನ್ನು ಅಧ್ಯಯನ ಮಾಡುವ ಸಂಶೋಧನಾ ಕೇಂದ್ರವನ್ನು ನಡೆಸುತ್ತಿದ್ದರು. ಅವಳು ಅವನಿಂದ ಕಲಿತದ್ದೆಲ್ಲವೂ ಅವಳ ಕಾಡಿನಲ್ಲಿ ಉಪಯುಕ್ತವಾಯಿತು.

ಅವಳು ವಿಮಾನದಲ್ಲಿ ಕ್ಯಾಂಡಿ ತೆಗೆದುಕೊಂಡು ಹೋಗಿದ್ದಳು. ಅದು ಕೂಡ ಅವಳ ಜೊತೆಯೇ ಇತ್ತು. ಅದನ್ನೇ ತಿನ್ನುತ್ತಾ, ಮಳೆನೀರನ್ನು ಸೇವಿಸುತ್ತಾ ಅಚ್ಚರಿಯ ರೀತಿಯಲ್ಲಿ 11 ದಿನ ಬದುಕುಳಿದಳು. ಕೊನೆಗೆ ತಂದೆಯಿಂದ ಕಲಿತ ಪಾಠದಮತೆ ಆಕೆ ಅಲ್ಲಿ ಎಲ್ಲಾದರೂ ಹೊಳೆ ಹರಿಯುತ್ತಿದೆಯೇ, ನೀರಿನ ಶಬ್ದ ಬರುತ್ತಿದೆಯೇ ಎಂದು ಅದನ್ನೇ ಅನುಸರಿಸುತ್ತಾ ಹೋದಳು. ಕೊನೆಯದಾಗಿ ಆಕೆಗೆ ಒಂದು ಗುಡಿಸಲು ಕಂಡಿತು. ಅಲ್ಲಿ ತಲುಪಿದ ಬಳಿಕ ಮೀನುಗಾರರಿಗೆ ಸಿಕ್ಕ ಆಕೆಯನ್ನು ಕೊನೆಗೆ ರಕ್ಷಣಾ ತಂಡ ರಕ್ಷಿಸಿದೆ.