ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಛತ್ತೀಸ್‌ಗಢದ ಇಬ್ಬರು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಗುಂಡು ಹಾರಿಸುವ ಮುನ್ನ ಉಗ್ರರು ಕಾರ್ಮಿಕರ ಜಾತಿ ಮತ್ತು ಧರ್ಮವನ್ನು ಕೇಳಿ ಖಚಿತಪಡಿಸಿಕೊಂಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಛತ್ತೀಸ್‌ಗಢದ ಇಬ್ಬರು ವಲಸೆ ಕಾರ್ಮಿಕರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಉಗ್ರರು ಗುಂಡು ಹಾರಿಸುವ ಮುನ್ನ ಕಾರ್ಮಿಕರ ಗುರುತು, ಜಾತಿ ಹಾಗೂ ಧರ್ಮವನ್ನು ಕೇಳಿ ತಿಳಿದುಕೊಂಡಿದ್ದರು ಎಂದು ಸಂತ್ರಸ್ತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಭೀಕರ ಘಟನೆಯು ಏಪ್ರಿಲ್ 2025 ರಲ್ಲಿ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಯ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಗುಂಡು ಹಾರಿಸುವ ಮುನ್ನ ಜಾತಿ ಕೇಳಿದ ಉಗ್ರರು!
ಕೊಲೆಯಾದ ಕಾರ್ಮಿಕರಲ್ಲಿ ಒಬ್ಬರಾದ ದೀಪಕ್ ರಾತ್ರೆ ಅವರ ಚಿಕ್ಕಪ್ಪ ಹಲ್ದಾರ್ ರಾತ್ರೆ ಮಾಧ್ಯಮಗಳೊಂದಿಗೆ ಮಾತನಾಡಿ ಉಗ್ರರ ಅಮಾನವೀಯ ಕೃತ್ಯವನ್ನು ಬಿಚ್ಚಿಟ್ಟಿದ್ದಾರೆ. ನಮಗೆ ಸಿಕ್ಕ ಮಾಹಿತಿ ಪ್ರಕಾರ, ಭಯೋತ್ಪಾದಕರು ಗುಂಡು ಹಾರಿಸುವ ಮುನ್ನ ಕಾರ್ಮಿಕರ ಜಾತಿ, ಸಮುದಾಯ ಮತ್ತು ಧರ್ಮದ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಗುರುತು ಖಚಿತಪಡಿಸಿಕೊಂಡ ನಂತರವೇ ಉಗ್ರರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರದ ಪೊಲೀಸರು ಅಥವಾ ಸ್ಥಳೀಯ ಆಡಳಿತ ಈ ಆರೋಪದ ಕುರಿತು ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ.
ಖರ್ಗೆಖಂಡನೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದಿರುವ ಹೇಡಿತನದ ಉಗ್ರರ ದಾಳಿ ಅತ್ಯಂತ ಖಂಡನೀಯ ಮತ್ತು ಮಾನವೀಯತೆಗೆ ಕಪ್ಪು ಚುಕ್ಕೆ. ಇಬ್ಬರು ಅಮಾಯಕ ಕಾರ್ಮಿಕರನ್ನು ಗುರುತಿಸಿ ಕ್ರೂರವಾಗಿ ಹತ್ಯೆ ಮಾಡಿರುವುದು ಭಯೋತ್ಪಾದನೆಯ ವಿಕೃತ ಮತ್ತು ಅಮಾನವೀಯ ಮನಸ್ಥಿತಿಯನ್ನು ತೋರಿಸುತ್ತದೆ. ಈ ಕೃತ್ಯವನ್ನು ಎಷ್ಟು ಖಂಡಿಸಿದರೂ ಸಾಲದು. ಮೃತರ ಕುಟುಂಬಸ್ಥರಿಗೆ ನನ್ನ ತೀವ್ರ ಸಂತಾಪಗಳು. ಈ ಘಟನೆಯ ತಪ್ಪಿತಸ್ಥರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆಯಾಗಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಉದ್ಯೋಗ ಅರಸಿ ಹೋಗಿದ್ದ ಕಾರ್ಮಿಕರು
ಮೃತಪಟ್ಟ ಕಾರ್ಮಿಕರನ್ನು ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಬುಂದೇಲಿ ಗ್ರಾಮದ ದೀಪಕ್ ರಾತ್ರೆ (24) ಮತ್ತು ಸಾರಂಗಢ್-ಬಿಲೈಗಢ್ ಜಿಲ್ಲೆಯ ಭೂಪೇಂದ್ರ ಭೈನಾ (28) ಎಂದು ಗುರುತಿಸಲಾಗಿದೆ. ಇಬ್ಬರೂ ಉದ್ಯೋಗ ಅರಸಿ ಜಮ್ಮು ಕಾಶ್ಮೀರಕ್ಕೆ ತೆರಳಿ ಕುಲ್ಗಾಮ್‌ನ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ದೀಪಕ್ ಕುಟುಂಬದಲ್ಲಿದ್ದ ಏಕೈಕ ದುಡಿಯುವ ಸದಸ್ಯನಾಗಿದ್ದ. ಸುಮಾರು 7-8 ತಿಂಗಳ ಹಿಂದಷ್ಟೇ ತನ್ನ ಪತ್ನಿಯೊಂದಿಗೆ ಕಾಶ್ಮೀರಕ್ಕೆ ಬಂದಿದ್ದ. ಈತನಿಗೆ ವೃದ್ಧ ತಾಯಿ, ವಿಕಲಚೇತನ ಕಿರಿಯ ಸಹೋದರ ಮತ್ತು ಕೇವಲ 4 ತಿಂಗಳ ಮಗುವಿದೆ. ಭೂಪೇಂದ್ರ ಭೈನಾ ಸುಮಾರು 3 ತಿಂಗಳ ಹಿಂದೆ ಪತ್ನಿಯೊಂದಿಗೆ ಕಾಶ್ಮೀರಕ್ಕೆ ಬಂದಿದ್ದ ಭೂಪೇಂದ್ರನಿಗೆ 4 ವರ್ಷದ ಮಗನಿದ್ದಾನೆ. ಮಗು ಪ್ರಸ್ತುತ ಛತ್ತೀಸ್‌ಗಢದಲ್ಲಿ ನೆಂಟರ ಮನೆಯಲ್ಲಿದೆ.


