2026ರ ಡೆಲ್ಲಿ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ಆಟಗಾರ ಅನೂಜ್ ರಾವತ್ ಸ್ಪೋಟಕ ಶತಕ (105*) ಸಿಡಿಸಿ ಮಿಂಚಿದ್ದಾರೆ. ಸಂಕಷ್ಟದಲ್ಲಿದ್ದ ಹಳೆ ಡೆಲ್ಲಿ ತಂಡಕ್ಕೆ ಆಸರೆಯಾದರೂ, ಯಶ್ ಧುಲ್ ಅವರ ಉತ್ತಮ ಆಟದಿಂದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ ಜಯ ಸಾಧಿಸಿದ್ದರಿಂದ ರಾವತ್ ಶತಕ ವ್ಯರ್ಥವಾಯಿತು.
ನವದೆಹಲಿ: 2026ನೇ ಸಾಲಿನ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಅಕ್ಷರಶಃ ರನ್ ಮಳೆಯೇ ಹರಿದಿದೆ. ಆರ್‌ಸಿಬಿ ಮಾಜಿ ಕ್ರಿಕೆಟಿಗ ಅನೂಜ್ ರಾವತ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅನೂಜ್ ರಾವತ್ ಆಡಿದ ರೀತಿಯನ್ನು ನೋಡಿದರೇ, ಆತನನ್ನು ಕೈಬಿಟ್ಟು ಆರ್‌ಸಿಬಿ ಫ್ರಾಂಚೈಸಿ ತಪ್ಪು ಮಾಡಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಹಳೆ ಡೆಲ್ಲಿ ತಂಡದ ಪರವಾಗಿ ಕಣಕ್ಕಿಳಿದ ಅನೂಜ್ ರಾವತ್, ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ಅನೂಜ್ ರಾವತ್ ಮೈದಾನಕ್ಕಿಳಿಯುವ ವೇಳೆಯಲ್ಲಿ ಹಳೆ ಡೆಲ್ಲಿ ತಂಡವು 30 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕ್ರೀಸ್‌ಗಿಳಿದ ಅನೂಜ್ ರಾವತ್, ಏಕಾಂಗಿಯಾಗಿ ಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಸ್ಪೋಟಕ ಶತಕ ಚಚ್ಚಿದ ಅನೂಜ್ ರಾವತ್:
ಅನೂಜ್ ರಾವತ್ ಸದ್ಯ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಇದಕ್ಕೂ ಮೊದಲು 2022ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆ ಸಂದರ್ಭದಲ್ಲಿ ಅನೂಜ್ ರಾವತ್‌ಗೆ ಡ್ರೆಸ್ಸಿಂಗ್ ರೂಮ್ ಹಾಗೂ ಮೈದಾನದಲ್ಲಿ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಅವರಂತಹ ದಿಗ್ಗಜ ಆಟಗಾರರಿಂದ ಕಲಿಯುವ ಅವಕಾಶ ಸಿಕ್ಕಿತು. ಅಲ್ಲಿ ಕಲಿತ ಅನುಭವವನ್ನು ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನಾಗಿ ಬಳಸಿಕೊಳ್ಳುವಲ್ಲಿ ಅನೂಜ್ ರಾವತ್ ಯಶಸ್ವಿಯಾದರು.
ಹಳೆ ಡೆಲ್ಲಿ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅನೂಜ್ ರಾವತ್, ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಅನೂಜ್ ರಾವತ್ ಕೇವಲ 59 ಎಸೆತಗಳನ್ನು ಎದುರಿಸಿ 177.97ರ ಸ್ಟ್ರೈಕ್‌ರೇಟ್‌ನಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 105 ರನ್ ಸಿಡಿಸಿದರು. ಇವರಿಗೆ ದೇವ್ ಲಾಕ್ರಾ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಹಳೆ ಡೆಲ್ಲಿ ತಂಡವು ಆರು ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.
ಪಂದ್ಯ ಗೆದ್ದು ಬೀಗಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್:
ಇನ್ನು ಕಠಿಣ ಗುರಿ ಬೆನ್ನತ್ತಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು ಇನ್ನೂ ಐದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡದ ಪರ ನಾಯಕ ಯಶ್ ಧುಲ್ 45 ಎಸೆತಗಳಲ್ಲಿ 72 ರನ್ ಸಿಡಿಸಿ ತಂಡ ಅನಾಯಾಸವಾಗಿ ಗೆಲುವು ದಾಖಲಿಸಲು ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಅನೂಜ್ ರಾವತ್ ಶತಕ ವ್ಯರ್ಥವಾಯಿತು.


