ಹಿಂದೆ ಗಗನಸಖಿಯಾಗಿದ್ದ ಮಹಿಳಾ ಡಿವೈಎಸ್ಪಿ ನೇಹಾ ಎಂಬುವವರ ವಿರುದ್ಧ ಚಾಲಕನೊಬ್ಬನಿಂದ ಹಣ ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ವಾಹನ ಜಪ್ತಿ ಮಾಡುವುದಾಗಿ ಬೆದರಿಸಿ 30,000 ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಕೇರಳ ಪೊಲೀಸ್ ಇಲಾಖೆ(Kerala police department)ಯ ಮಹಿಳಾ ಡಿವೈಎಸ್ಪಿ ಅಧಿಕಾರಿಯೊಬ್ಬರ ವಿರುದ್ಧವೇ ಹಣಕ್ಕಾಗಿ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಡಿವೈಎಸ್ಪಿ ನೇಹಾ ಎಂಬುವವರೇ ಈ ಆರೋಪಕ್ಕೆ ಗುರಿಯಾದ ಅಧಿಕಾರಿಯಾಗಿದ್ದು, ಚಾಲಕನೊಬ್ಬನಿಂದ ಹಣ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಾಲಕನೊಬ್ಬನನ್ನು ತಡೆದ ಡಿವೈಎಸ್‌ಪಿ ನೇಹಾ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ದೂರಿನ ಪ್ರಕಾರ ಸ್ಥಳದಲ್ಲೇ ಚಾಲಕನಿಂದ 25,000 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಮರುದಿನ ಉಳಿದ 5,000 ರೂಪಾಯಿಗಳನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ವಾಹನವನ್ನು ಜಪ್ತಿ ಮಾಡುವುದಾಗಿ ಡಿವೈಎಸ್ಪಿ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ತನ್ನ ದೂರಿನಲ್ಲಿ ಆರೋಪಿಸಿದ್ದಾನೆ. ಈ ಬೆದರಿಕೆಗೆ ಮಣಿದ ಚಾಲಕ, ಮರುದಿನ ಉಳಿದ ಹಣವನ್ನೂ ಅಧಿಕಾರಿಗೆ ತಲುಪಿಸಿದ್ದಾನೆ. ಈ ಘಟನೆಯು ಪೊಲೀಸ್ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ.
ಈ ಹಿಂದೆ ಕೊಲೆ ಪ್ರಕರಣದಲ್ಲೂ ತನಿಖೆಯಲ್ಲೂ ಆರೋಪ
ಡಿವೈಎಸ್ಪಿ ನೇಹಾ ವಿರುದ್ಧ ಕೇಳಿಬಂದಿರುವ ಆರೋಪ ಇದೇ ಮೊದಲಲ್ಲ. ಈ ಹಿಂದೆ ಕೊಲೆ ಪ್ರಕರಣವೊಂದರ ತನಿಖೆಯಲ್ಲಿಯೂ ಅವರು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆಯೂ ಇಲಾಖಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಗಗನಸಖಿಯಾಗಿದ್ದ ನೇಹ ಪೊಲೀಸ್ ಇಲಾಖೆಗೆ ಎಂಟ್ರಿ!
ಪೊಲೀಸ್ ಸೇವೆಗೆ ಸೇರುವ ಮುನ್ನ ನೇಹಾ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಗಗನಸಖಿ ಹುದ್ದೆ ಬಿಟ್ಟು ಪೊಲೀಸ್ ಇಲಾಖೆ ಸೇರಿದ ನೇಹಾ ಇದೀಗ ಅವರ ವಿರುದ್ಧ ಸುಲಿಗೆ ಮತ್ತು ಕರ್ತವ್ಯಲೋಪದಂತಹ ಗಂಭೀರ ದೂರುಗಳು ಕೇಳಿ ಬಂದಿರುವುದರಿಂದ, ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ಸದ್ಯ ಚಾಲಕ ನೀಡಿದ ದೂರಿನ ಅನ್ವಯ ನೇಹಾ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ನಂತರವಷ್ಟೇ ಈ ಆರೋಪಗಳಲ್ಲಿನ ಸತ್ಯಾಸತ್ಯತೆ ಹೊರಬರಬೇಕಿದೆ. ನಾಗರಿಕರ ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಗಳನ್ನ ನಾಚಿಸುವಂತೆ ಸುಲಿಗೆ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಂಥ ಪ್ರಕರಣಗಲ್ಲಿ ಪೊಲೀಸ್ ಭಾಗಿಯಾಗುತ್ತಿರುವುದು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ.


