*  ಹಿಂದೂ ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ*  ಇದರ ವಿರುದ್ಧ ಪ್ರತಿರೋಧ ತೋರಬೇಕು: ಜವಾಹಿರಿ ವಿಡಿಯೋ*  ‘ಅಲ್ಲಾ ಹು ಅಕ್ಬರ್‌’ ಎಂದ ಮಂಡ್ಯ ವಿದ್ಯಾರ್ಥಿನಿ ಬಗ್ಗೆ ಮೆಚ್ಚುಗೆ 

ನವದೆಹಲಿ(ಏ.07): ಕರ್ನಾಟಕದಲ್ಲಿ(Karnataka) ಎದ್ದಿದ್ದ ‘ಹಿಜಾಬ್‌’(Hijab) ವಿವಾದಕ್ಕೆ ಇದೀಗ ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರ ಹಾಗೂ ಅಲ್‌ಖೈದಾ(Al-Qaeda) ಭಯೋತ್ಪಾದಕ ಸಂಘಟನೆ ನೇತಾರ ಐಮನ್‌ ಅಲ್‌ ಜವಾಹಿರಿ(Ayman al-Zawahiri) ಮಧ್ಯಪ್ರವೇಶಿಸಿದ್ದಾನೆ. ಹಿಜಾಬ್‌ಗೆ ವಿರೋಧವನ್ನು ಇಸ್ಲಾಮಿಕ್‌ ಷರಿಯಾ ಕಾನೂನು, ಅದರ ಮೂಲ ತತ್ವ, ಸಿದ್ಧಾಂತ, ಶಿಷ್ಟಾಚಾರಗಳ ಮೇಲಿನ ದಾಳಿ ಎಂದು ಕಿಡಿಕಾರಿರುವ ಜವಾಹಿರಿ, ಹಿಂದೂಗಳ ಈ ದಬ್ಬಾಳಿಕೆ ವಿರುದ್ಧ ಮುಸ್ಲಿಂ ಸಮುದಾಯ ಪ್ರತಿರೋಧ ತೋರಬೇಕು ಎಂದು ಕರೆ ಕೊಟ್ಟಿದ್ದಾನೆ.

ಇದೇ ವೇಳೆ ಬುರ್ಖಾ ಧರಿಸಿ ಬಂದಿದ್ದಕ್ಕೆ ಕೇಸರಿ ಶಾಲುಧಾರಿ ಯುವಕರಿಂದ ವಿರೋಧ ವ್ಯಕ್ತವಾದಾಗ ‘ಅಲ್ಲಾ ಹು ಅಕ್ಬರ್‌’ ಎಂದು ಘೋಷಣೆ ಕೂಗಿ ಗಮನಸೆಳೆದಿದ್ದ ಮಂಡ್ಯದ ವಿದ್ಯಾರ್ಥಿನಿ(Mandya Student) ಮುಸ್ಕಾನ್‌(Muskan Khan) ಖಾನ್‌ಳನ್ನು ಬಹುವಾಗಿ ಶ್ಲಾಘಿಸಿರುವ ಜವಾಹಿರಿ, ಆಕೆಗೆಂದೇ ಕವನ ರಚಿಸಿ, ವಾಚಿಸಿದ್ದಾನೆ.

Ballari: ಹಿಜಾಬ್, ಹಲಾಲ್‌ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ

ಈ ನಡುವೆ ಮುಸ್ಕಾನ್‌ ಬಗ್ಗೆ ಜವಾಹಿರಿ ನೀಡಿರುವ ಹೇಳಿಕೆ ಗಮನಿಸಿದರೆ, ಅಲ್‌ ಖೈದಾ ಸಂಘಟನೆ ಭಾರತದಲ್ಲಿನ(India) ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಖಚಿತವಾಗುತ್ತದೆ. ಇದು ಸುಪ್ತವಾಗಿ ಕಾರಾರ‍ಯಚರಣೆ ನಡೆಸುತ್ತಿರುವ ಉಗ್ರರನ್ನು ಪ್ರಚೋದಿಸಬಹುದಾಗಿದೆ. ಹೀಗಾಗಿ ಆತನ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಭಾರತದ ಭದ್ರತಾ ಸಂಸ್ಥೆಗಳ ಮೂಲಗಳು ಹೇಳಿವೆ.

ಜವಾಹಿರಿ ಹೇಳಿದ್ದೇನು?:

ವಿಶ್ವದ ಹಲವು ದೇಶಗಳಲ್ಲಿ ಕೆಲ ಇಸ್ಲಾಂ ಆಚರಣೆಗಳಿಗೆ ಎದುರಾಗಿರುವ ತೊಡಕಿನ ಕುರಿತು ಅಲ್‌ಖೈದಾ ಮುಖ್ಯಸ್ಥ ಅಲ್‌ ಜವಾಹಿರಿ 8.43 ನಿಮಿಷಗಳ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಅದನ್ನು ಅಲ್‌ಖೈದಾದ ಅಧಿಕೃತ ಮಾಧ್ಯಮವಾದ ‘ಶಬಾಬ್‌ ಮೀಡಿಯಾ’ ಬಿಡುಗಡೆ ಮಾಡಿದೆ.

‘ಹಿಜಾಬ್‌ ವಿವಾದವು ‘ಹಿಂದೂ ಭಾರತ’ದ(Hindu India) ನಿಜ ಬಣ್ಣ ಬಯಲು ಮಾಡಿದೆ. ಆದರೆ ಇಂಥ ಸಂದರ್ಭದಲ್ಲಿ ಹಿಜಾಬ್‌ ಧರಿಸಿ ಬಂದ ತನ್ನನ್ನು ವಿರೋಧಿಸಿದ ವ್ಯಕ್ತಿಗಳನ್ನು ಮುಸ್ಕಾನ್‌ ಖಾನ್‌ (ಮಂಡ್ಯದ ವಿದ್ಯಾರ್ಥಿನಿ) ದಿಟ್ಟತನದಿಂದ ಎದುರಿಸಿದ್ದಾಳೆ. ಆಕೆ ‘ಅಲ್ಲಾ ಹು ಅಕ್ಬರ್‌’ ಎಂದು ಕೂಗಿದ್ದು ಶ್ಲಾಘನೀಯ. ಈ ಮೂಲಕ ಮುಸ್ಲಿಂ ಧರ್ಮದಲ್ಲಿ ಕೀಳರಿಮೆ ಹೊಂದಿರುವ ಇತರ ಮಹಿಳೆಯರಿಗೆ ಮುಸ್ಕಾನ್‌ ಖಾನ್‌ ನೈತಿಕ ಪಾಠ ಕಲಿಸಿದ್ದಾಳೆ. ಹಿಂದೂ ಬಹುದೇವತಾ ಆರಾಧಕರ ವಿರುದ್ಧ ಆಕೆ ತೋರಿದ ಧೈರ್ಯವು ಮುಸ್ಲಿಂ ಸಮುದಾಯವನ್ನು ಬಡಿದೆಬ್ಬಿಸಿದೆ ಹಾಗೂ ಧರ್ಮಯುದ್ಧಕ್ಕೆ (Jihad) ಪ್ರೇರೇಪಣೆ ನೀಡಿದೆ’ ಎಂದು ಆತ ಹೇಳಿದ್ದಾನೆ.

‘ಸಾಮಾಜಿಕ ಮಾಧ್ಯಮಗಳು ಹಾಗೂ ವಿಡಿಯೋಗಳ ಮೂಲಕ ಮುಸ್ಕಾನ್‌ ಖಾನ್‌ ಬಗ್ಗೆ ನಾನು ತಿಳಿದುಕೊಂಡೆ. ಈ ‘ಮುಜಾಹಿದ್‌ ಸೋದರಿ’ಯ ನಡೆ ನೋಡಿ ನನಗೆ ಮನದುಂಬಿ ಬಂತು. ‘ಅಲ್ಲಾ ಹು ಅಕ್ಬರ್‌’ ಎಂಬ ಆಕೆಯ ಉದ್ಘೋಷ ಕೇಳಿ ಕವಿತೆಯೊಂದನ್ನು ಬರೆಯಲು ನಿರ್ಧರಿಸಿದೆ. ನಾನೇನೂ ಕವಿಯಲ್ಲ. ಆದರೂ ನಾನು ಬರೆದ ಪದ್ಯವನ್ನು ಮುಸ್ಕಾನ್‌ ಸ್ವೀಕರಿಸುವಳು ಎಂಬ ಆಶಾಭಾವವಿದೆ. ಇಂಥ ಧರ್ಮಬಾಹಿರ ದೇಶದ ಹಾಗೂ ಹಿಂದೂ ಭಾರತದ ಮುಖವಾಡ ಬಯಲಿಗೆಳೆದ ಮುಸ್ಕಾನ್‌ಳನ್ನು ಅಲ್ಲಾಹು ಆಶೀರ್ವದಿಸಲಿ’ ಎಂದು ಜವಾಹಿರಿ ಆಶಿಸಿದ್ದಾನೆ.

Namaz Controversy ತರಗತಿ ಒಳಗಡೆ ನಮಾಜ್ ಮಾಡಿ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯಿಂದ ಕ್ಷಮಾಪಣಾ ಪತ್ರ!

ಇದಲ್ಲದೆ, ಹಿಜಾಬ್‌ ನಿಷೇಧಿಸಿರುವ ಫ್ರಾನ್ಸ್‌, ಹಾಲೆಂಡ್‌ ಹಾಗೂ ಸ್ವಿಜರ್ಲೆಂಡ್‌ ವಿರುದ್ಧ ಜವಾಹಿರಿ ಕಿಡಿಕಾರಿದ್ದಾನೆ. ಪಾಕಿಸ್ತಾನ, ಬಾಂಗ್ಲಾದೇಶಗಳು ಪಾಶ್ಚಾತ್ಯ ದೇಶಗಳ ಜೊತೆ ಸಖ್ಯ ಬೆಳೆಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ.
‘ಇಸ್ಲಾಂ(Islam) ತುಳಿಯಲು ನಡೆದಿರುವ ಇಂಥ ಯತ್ನಗಳ ವಿರುದ್ಧ ಚೀನಾದಿಂದ ಇಸ್ಲಾಮಿಕ್‌ ಮಘ್ರೇಬ್‌ವರೆಗಿನ ಮುಸ್ಲಿಮರು ಹಾಗೂ ಕೌಕಾಸಸ್‌ನಿಂದ ಸೊಮಾಲಿಯಾವರೆಗಿನ ಮುಸ್ಲಿಮರು ಒಂದಾಗಬೇಕು. ಭಾರತದಲ್ಲಿನ ಮುಸ್ಲಿಂ ಸಮುದಾಯ ಜಾಗೃತರಾಗಬೇಕು. ಬುದ್ಧಿಮತ್ತೆಯಿಂದ ಮಾಧ್ಯಮಗಳನ್ನು ಬಳಸಿ ಹಾಗೂ ಯುದ್ಧಭೂಮಿಯಲ್ಲಿ ಶಸ್ತ್ರ ಬಳಸಿ ಹೋರಾಡಬೇಕು’ ಎಂದು ಕರೆ ನೀಡಿದ್ದಾನೆ.

ಯಾರು ಈ ಮುಸ್ಕಾನ್‌?:

2 ತಿಂಗಳ ಹಿಂದೆ ಮಂಡ್ಯದ ಮುಸ್ಕಾನ್‌ ಖಾನ್‌ ಕಾಲೇಜಿಗೆ ಬುರ್ಖಾ ಧರಿಸಿ ಬಂದಾಗ ಕೆಲವು ಕೇಸರಿ ಶಾಲುಧಾರಿ ಯುವಕರು ‘ಜೈ ಶ್ರೀರಾಂ’ ಎಂದು ಕೂಗಿ ಆಕೆಗೆ ಅಡ್ಡಿಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಆಕೆ ‘ಅಲ್ಲಾ ಹು ಅಕ್ಬರ್‌’ ಎಂದು ಕೂಗಿ ಸುದ್ದಿ ಆಗಿದ್ದಳು.

‘ಕಾಣದ ಕೈ’ ಈಗ ಪತ್ತೆ

ಹಿಜಾಬ್‌ ವಿವಾದದಲ್ಲಿ ಮತಾಂಧ ಶಕ್ತಿಗಳಿವೆ ಎಂದು ಮೊದಲಿನಿಂದ ಹೇಳುತ್ತಾ ಬಂದಿದೆ. ಅಲ್‌ಖೈದಾ ಉಗ್ರರು ಮಾತನಾಡುವುದರೊಂದಿಗೆ ಕಾಣದ ಕೈಗಳು ಯಾವುವು ಎಂಬುದು ಸಾಬೀತಾಗಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

ಜಗಳ ತಂದಿಡುವ ಯತ್ನ

ಅಲ್‌ ಜವಾಹಿರಿ ಯಾರೆಂದೇ ನನಗೆ ಗೊತ್ತಿಲ್ಲ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿಲ್ಲ. ಜಗಳ ತಂದಿಡಲು ಇದನ್ನೆಲ್ಲಾ ಮಾಡುತ್ತಿದ್ದಾರೆ. ನಾವು ಎಲ್ಲರ ಜತೆ ಅಣ್ಣ-ತಮ್ಮಂದಿರ ರೀತಿ ಇದ್ದೇವೆ ಅಂತ ಮುಸ್ಕಾನ್‌ ತಂದೆ ಮಹಮದ್‌ ಹುಸೇನ್‌ ಖಾನ್‌ ಹೇಳಿದ್ದಾರೆ. 

ಆರೆಸ್ಸೆಸ್‌ ಮಾಡಿಸ್ತಿದೆ

ಎಲ್ರೀ ಉಗ್ರ, ಯಾರ್ರೀ ಉಗ್ರ... ಇವುಗಳನ್ನೆಲ್ಲಾ ಆರ್‌ಎಸ್‌ಎಸ್‌ನವರೇ ಕಲಿಸುವುದು. ಸಮಾಜದಲ್ಲಿ ಅಶಾಂತಿ ಉಂಟು ಮಾಡಲು, ಸಾಮರಸ್ಯ ಹಾಳುಮಾಡಲು, ಮತ ಗಟ್ಟಿಸಲು ಇಂಥದ್ದು ಮಾಡುತ್ತಾರೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.