Asianet Suvarna News Asianet Suvarna News

ಭಯೋತ್ಪಾದಕನ ಶವವನ್ನು ಹೊರತೆಗೆಯುವ ಮನವಿ ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಜಮ್ಮುಕಾಶ್ಮೀರದ ಹೈದರ್‌ಪುರದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ ಸೇನೆಯ ಗುಂಡಿಗೆ ಬಲಿಯಾದ ಭಯೋತ್ಪಾದಕ ಅಮಿರ್‌ ಮ್ಯಾಗ್ರೆ ಶವವನ್ನು ಹೊರತೆಗೆದು, ಅಂತಿಮ ವಿಧಿ ವಿಧಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರ ತಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದೆ.

Terrorist Amir Magrey Father Petition rejected by Supreme Court Jammu Kashmir Hyderpora Encounter san
Author
First Published Sep 12, 2022, 4:51 PM IST

ನವದೆಹಲಿ (ಸೆ. 12): ಜಮ್ಮು ಮತ್ತು ಕಾಶ್ಮೀರದ ಹೈದರ್‌ಪುರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತನಾದ ಭಯೋತ್ಪಾದಕ ಅಮೀರ್ ಮ್ಯಾಗ್ರೆ ಶವವನ್ನು ಹೊರತೆಗೆಯಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಮೀರ್ ತಂದೆ ಲತೀಫ್ ಅವರು ತಮ್ಮ ಮಗನ ಶವವನ್ನು ಔಪಚಾರಿಕ ಅಂತ್ಯಕ್ರಿಯೆಗಾಗಿ ಹೊರತೆಗೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಸೋಮವಾರ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಬಿಎಸ್ ಪರ್ದಿವಾಲಾ ಅವರ ಪೀಠವು, ಮೃತ ದೇಹವು ನ್ಯಾಯದ ಹಿತಾಸಕ್ತಿಗಳನ್ನು ಪೂರೈಸಲಿದೆ ಎನ್ನುವ ಹಂತದಲ್ಲಿ ಮಾತ್ರವೇ ಇದನ್ನು ಪರಿಗಣಿಸಬಹುದು. ಆದರೆ, ಇದರಿಂದ ಅಂಥ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಮೀರ್‌ನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಆಡಳಿತವು ಸರಿಯಾಗಿ ನಡೆಸಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.  ನಾವು ಅಮೀರ್ ತಂದೆಯ ಭಾವನೆಗಳನ್ನು ಗೌರವಿಸುತ್ತೇವೆ, ಆದರೆ ನ್ಯಾಯಾಲಯವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತದೆಯೇ ಹೊರತು ಭಾವನೆಗಳಿಂದಲ್ಲ. ಅಮೀರ್‌ನ ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ತಂದೆ ಲತೀಫ್ ಅವರಿಗೆ ಅವಕಾಶವಿದೆ ಎಂದು ಪೀಠ ಹೇಳಿದೆ.

2021ರ ನವೆಂಬರ್‌ 15 ರಂದು ನಡೆದ ಎನ್‌ಕೌಂಟರ್‌ನಲ್ಲಿ ಅಮೀರ್‌ (Amir Magrey) ಸಾವು ಕಂಡಿದ್ದ. ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಹೈದರ್‌ಪುರದಲ್ಲಿ ದೊಡ್ಡ ಮಟ್ಟದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಅಂದು ಅಮಿರ್ ಜೊತೆಗೆ 3 ಸಹಚರರು ಸಾವು ಕಂಡಿದ್ದರು. ನಾಲ್ವರನ್ನು ಶ್ರೀನಗರದಿಂದ 80 ಕಿಮೀ ದೂರದಲ್ಲಿರುವ ಹಂದ್ವಾರದಲ್ಲಿ ಪೊಲೀಸರು ಸಮಾಧಿ ಮಾಡಿದರು. ಅದೇ ಸಮಯದಲ್ಲಿ, ಎನ್‌ಕೌಂಟರ್ ನಂತರ, ಅಮೀರ್ ಕುಟುಂಬವು ಹೈಕೋರ್ಟ್‌ನ ಮೊರೆ ಹೋಗಿತ್ತು. ಭಯೋತ್ಪಾದಕರ ದೇಹವನ್ನು ಅವರ ಕುಟುಂಬಗಳಿಗೆ ಹಸ್ತಾಂತರ ಮಾಡಲು ಸೇನೆ ನಿರಾಕರಿಸಿತ್ತು. ಕೊನೆಗೆ ವಡ್ಡರ್ ಪಯೀನ್ ಸ್ಮಶಾನದಲ್ಲಿ ಅಧಿಕಾರಿಗಳು ಶವವನ್ನು ಸಮಾಧಿ ಮಾಡಿದ್ದರು ಅಮೀರ್ ಮ್ಯಾಗ್ರೆ ಉಗ್ರಗಾಮಿ ಎಂದು ಪೊಲೀಸರು ಹೇಳಿದರೆ, ಆತನ ಕುಟುಂಬವು ಆತ ನಿರಪರಾಧಿ ಎಂದು ಸಮರ್ಥಿಸಿಕೊಂಡಿತ್ತು.

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: 3 ಎಲ್‌ಇಟಿ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

ಏಕಸದಸ್ಯ ಪೀಠದ (Single Bench) ತೀರ್ಪನ್ನು ದ್ವಿಸದಸ್ಯ ಪೀಠ ರದ್ದುಗೊಳಿಸಿತ್ತು. ಈ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ (Jammu And Kashmir) ಹೈಕೋರ್ಟ್‌ನ ಏಕಸದಸ್ಯ ಪೀಠ ಮೇ 2022 ರಲ್ಲಿ ಅಮೀರ್ ಅವರ ಮೃತ ದೇಹವನ್ನು ತೆಗೆಯಲು ಅನುಮತಿ ನೀಡಿತ್ತು, ಆದರೆ ಆಡಳಿತವು ತಕ್ಷಣವೇ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು. ಈ ಕುರಿತು ಹೈಕೋರ್ಟ್‌ನ ದ್ವಿ ಸದಸ್ಯ ಪೀಠ, ಏಕ ಪೀಠದ ತೀರ್ಪನ್ನು ತಳ್ಳಿಹಾಕಿ ಮೃತದೇಹವನ್ನು ಹೊರ ತೆಗೆಯುವಂತಿಲ್ಲ ಎಂದು ಆದೇಶ ನೀಡಿತ್ತು. ಆ ನಂತರ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಉ.ಪ್ರ. ಮಾದರಿ ಅಲ್ಲ, ಹಂತಕರ ಎನ್‌ಕೌಂಟರ್‌ಗೂ ರೆಡಿ: ಸಚಿವ ಅಶ್ವತ್ಥ್‌

ಲತೀಫ್ ಮ್ಯಾಗ್ರೆ (Latif Magrey) ಅವರು ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ (JK High Court)ಅರ್ಜಿ ಸಲ್ಲಿಸಿ, ತಮ್ಮ ಮಗನ ಶವವನ್ನು ಕುಟುಂಬಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸಿ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ (Last Rites) ನಡೆಸುತ್ತೇವೆ ಎಂದು ಹೇಳಿದ್ದರು. ಆದರೆ, ಜುಲೈನಲ್ಲಿ, ಮ್ಯಾಗ್ರೆ ಅವರ ವಕೀಲ ಆನಂದ್ ಗ್ರೋವರ್ ಅವರು ತಮ್ಮ ಕಕ್ಷಿದಾರರು ತಮ್ಮ ಮಗನ ದೇಹವನ್ನು ಹೊರತೆಗೆಯಲು ಒತ್ತಾಯಿಸುತ್ತಿಲ್ಲ ಕೇವಲ, ಅಂತಿಮ ವಿಧಿಗಳನ್ನು ಮಾತ್ರ ಮಾಡಲು ಬಯಸಿದ್ದಾಗಿ ಹೇಳಿದ್ದರು. ಅಲ್ಲದೇ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಸೋಮವಾರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರ ಪೀಠವು ಪರಿಹಾರದ ಬಗ್ಗೆ ಆದೇಶವನ್ನು ಪುನರುಚ್ಚರಿಸಿತು. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಅಮೀರ್ ಮ್ಯಾಗ್ರೆ ಅವರನ್ನು ಸಮಾಧಿ ಮಾಡಲಾಗಿದೆ ಎಂದು ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಪೀಠವು ಗಮನಿಸಿದೆ.

Follow Us:
Download App:
  • android
  • ios