ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: 3 ಎಲ್‌ಇಟಿ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ
ಜಮ್ಮು ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಶೋಪಿಯಾನ್‌ನಲ್ಲಿ ಎನ್‌ಕೌಂಟರ್ ವೇಳೆ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇವರು ಎಲ್‌ಇಟಿ ಉಗ್ರರು ಎಂದು ತಿಳಿದುಬಂದಿದೆ.
ಕಣಿವೆ ಪ್ರದೇಶ ಜಮ್ಮು ಹಾಗೂ ಕಾಶ್ಮೀರದಲ್ಲಿ (Jammu and Kashmir) ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ (Shopian) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) (Lashkar E Taiba) ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ನ ನಾಗಬಾಲ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಶೋಧ ಕಾರ್ಯಾಚರಣೆಯ ವೇಳೆ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು, ಹತ್ಯೆಗೀಡಾದ ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹಾಗೂ, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಶೋಧ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.