ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಭೇಟಿ ನೀಡಿದ್ದ ದುರ್ಗಾ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ. ಕನ್ಹಯ್ಯಾ ಕುಮಾರ್ ದೇಶ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಯುವಕರು ಈ ಕ್ರಮ ಕೈಗೊಂಡಿದ್ದಾರೆ.

ಪಾಟ್ನಾ: ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಭೇಟಿ ನೀಡಿದ್ದ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಲಾಗಿದೆ. 'ಪಲಾಯನ್ ರೋಕೋ, ನೌಕರಿ ದೋ' ಘೋಷಣೆಯೊಂದಿಗೆ ಕನ್ಹಯ್ಯಾ ಕುಮಾರ್ ಬಿಹಾರದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. 25ನೇ ಮಾರ್ಚ್ 2025ರಂದು ಕನ್ಹಯ್ಯಾ ಕುಮಾರ್ ಮಂಗಳವಾರ ರಾತ್ರಿ ಸರ್ಹಾಸದಲ್ಲಿರುವ ಬನ್‌ಗಾಂವ್ ತಲುಪಿದ್ದರು. ಈ ವೇಳೆ ಬನ್‌ಗಾಂವ್‌ದಲ್ಲಿರುವ ದುರ್ಗಾ ದೇವಸ್ಥಾನದ ಆವರಣದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ನಂತರ ದೇವಸ್ಥಾನದ ಪ್ರಾಂಗಣದಲ್ಲಿಯೇ ಕೆಲವು ಸಭೆಗಳನ್ನು ನಡೆಸಲಾಗಿತ್ತು. ತಮ್ಮ ಗ್ರಾಮಕ್ಕೆ ಆಗಮಿಸಿದ್ದ ಕನ್ಹಯ್ಯಾ ಕುಮಾರ್ ಅವರನ್ನು ಸ್ಥಳೀಯ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸ್ವಾಗತಿಸಿದ್ದರು. 

ಕನ್ಹಯ್ಯಾ ಕುಮಾರ್ ಆಯೋಜಿಸಿದ ಕಾರ್ಯಕ್ರಮಕ್ಕೆ ಬನ್‌ಗಾಂವ್ ಗ್ರಾಮಸ್ಥರು ಸಹ ಸೇರಿದ್ದರು. ಕನ್ಹಯ್ಯಾ ಕುಮಾರ್ ತಮ್ಮೂರಿನಿಂದ ತೆರಳಿದ ಬಳಿಕ ಬುಧವಾರ ಬೆಳಗ್ಗೆ ಗ್ರಾಮದ ಕೆಲ ಯುವಕರು ಗಂಗಾಜಲದಿಂದ ದೇವಸ್ಥಾನದ ಶುದ್ಧೀಕರಣ ಮಾಡಿದ್ದಾರೆ. ಕನ್ಹಯ್ಯಾ ಕುಮಾರ್ ಭಾಷಣ ಮಾಡಿದ ಸ್ಥಳ ಸೇರಿದಂತೆ ದೇವಸ್ಥಾನದ ಪ್ರಾಂಗಣವನ್ನು ಗಂಗಾಜಲದಿಂದ ತೊಳೆದಿದ್ದಾರೆ. ಸದ್ಯ ದೇವಸ್ಥಾನದ ಶುದ್ಧೀಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಿಹಾರ ರಾಜಕಾರಣದಲ್ಲಿ ಚರ್ಚೆಯ ವಿಷಯವಾಗಿ ಬದಲಾಗಿದೆ. 

ಕಾಂಗ್ರೆಸ್ ಯುವ ಮುಖಂಡರಾಗಿರುವ ಕನ್ಹಯ್ಯಾ ಕುಮಾರ್ ದೇಶದ ವಿರುದ್ಧ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ದೇವಸ್ಥಾನದ ಪ್ರಾಂಗಣವನ್ನು ಗಂಗಾಜಲದಿಂದ ತೊಳೆಯಲಾಗಿದೆ ಎಂದು ಯುವಕರು ಹೇಳಿಕೆ ನೀಡಿದ್ದಾರೆ. ನಗರ ಪಂಚಾಯತ್ ಬಂಗಾನ್ ವಾರ್ಡ್ ಕೌನ್ಸಿಲರ್ ಪ್ರತಿನಿಧಿ ಅಮಿತ್ ಚೌಧರಿ ನೇತೃತ್ವದಲ್ಲಿ ವಿಷ್ಣು, ಮಖಾನ್, ಆನಂದ್, ಸೂರಜ್, ಸರೋಜ್ ಮತ್ತು ಬಾದಲ್ ಎಂಬ ಯುವಕರು ದೇವಸ್ಥಾನದ ಶುದ್ಧೀಕರಣ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ ಈ ಯುವಕರು ಕನ್ಹಯ್ಯಾ ಕುಮಾರ್ ಮೇಲೆ ದೇಶದ್ರೋಹದ ಆರೋಪವನ್ನು ಮಾಡಿದ್ದಾರೆ. ಕನ್ಹಯ್ಯಾ ಕುಮಾರ್ ದೇಶ ಮತ್ತು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಕೋಪ ಮೋದಿ ವಿರುದ್ಧವಲ್ಲ, ನಿತೀಶ್ ವಿರುದ್ಧ ಎಂದ ಕನ್ಹಯ್ಯಾ ಕುಮಾರ್..!

ಮಂಗಳವಾರ ಬನ್‌ಗಾಂವ್‌ನಲ್ಲಿ ಮಾತನಾಡಿದ್ದ ಕನ್ಹಯ್ಯಾ ಕುಮಾರ್, ಚಂಪಾರಣ್‌ನಿಂದ ಸರ್ಹಾಸ ತಲುಪಿದ ಬಳಿಕ ನಮ್ಮ ಈ ಪಾದಯಾತ್ರೆ ಯಶಸ್ಸು ಸಿಕ್ಕಿದೆ ಎಂದು ನನಗೆ ಅನ್ನಿಸುತ್ತದೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಇಡೀ ದೇಶದ ಶೇ.90ರಷ್ಟು ಮಖಾನಾವನ್ನು ಕೋಸಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಮಖಾನಾಗೆ ವಿಶ್ವಮಟ್ಟದ ಮನ್ನಣೆ ಸಿಕ್ಕಿದೆ. ಆದ್ರೆ ಮಖಾನಾ ಉತ್ಪಾದಿಸುವ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಮಿಥಿಲಾ ಚಿತ್ರಕಲೆಯ ಕಲಾವಿದರ ಸ್ಥಿತಿಯೂ ಇದೇ ಆಗಿದೆ ಎಂದು ಹೇಳಿದ್ದರು.

ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಪಶ್ಚಿಮ ಚಂಪಾರಣ್‌ನ ಭೀತಿಹರ್ವಾ ಗಾಂಧಿ ಆಶ್ರಮದಿಂದ ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಬಿಹಾರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೃಷ್ಣ ಅಲ್ಲಾವಾರು, ರಾಜ್ಯಾಧ್ಯಕ್ಷ ರಾಜೇಶ್ ಕುಮಾರ್ ರಾಮ್ ಸೇರಿದಂತೆ ಹಲವು ನಾಯಕರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. 

ಇದನ್ನೂ ಓದಿ: ಕನ್ಹಯ್ಯಾ ಪರ ನಿಂತ ಕನ್ನಡದ ಸ್ಟಾರ್ ನಟ: ರೋಡ್ ಶೋನಲ್ಲಿ ಭಾಗಿ

Scroll to load tweet…