JNU ವಿದ್ಯಾರ್ಥಿ ಸಂಘದ ಮಾಜಿ ನಾಯಕ ಹಾಗೂ ಬೆಗುಸರೈ ಸ್ರಾಯ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಪರ ಕನ್ನಡದ ಸ್ಟಾರ್ ನಟರೊಬ್ಬರು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಬೆಂಗಳೂರು[ಏ.21]: ಲೋಕಸಭಾ ಚುನಾವಣೆ 2019ರಲ್ಲಿ ಈ ಬಾರಿ ಬಿಹಾರದ ಬೆಗುಸರೈ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಾಡಾಗಿದೆ. ಈ ಕ್ಷೇತ್ರದಿಂದ ಕಣಕ್ಕಿಳಿದಿರುವ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್, ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಎಂದೇ ಖ್ಯಾತಿ ಗಳಿಸಿರುವ ಗಿರಿರಾಜ್ ಸಿಂಗ್ ವಿರುದ್ಧ ಸಮರ ಸಾರಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕನ್ಹಯ್ಯಾ ಕುಮಾರ್ ಪರ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರಚಾರ ಮಾಡಿದ್ದರು, ಇದೀಗ ಪ್ರಖ್ಯಾತ ಬಹುಭಾಷಾ ನಟನೂ ಇವರ ಪರ ಪ್ರಚಾರಕ್ಕಿಳಿದಿದ್ದಾರೆ.
ಕನ್ನಡ, ತಮಿಳು ಸೇರಿದಂತೆ ನಾನಾ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ಹಾಗೂ ಕರ್ನಾಟಕದ ಬೆಂಗಳೂರು ಕೆಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಶನಿವಾರದಂದು ಬೆಗುಸರೈ ಕ್ಷೇತ್ರಕ್ಕೆ ತೆರಳಿ ಕನ್ಹಯ್ಯಾ ಪರ ಪ್ರಚಾರ ನಡೆಸಿದ್ದಾರೆ. ರೋಡ್ ಶೋನಲ್ಲಿ ಭಾಗವಹಿಸಿದ ನಟ ಪ್ರಕಾಶ್ ರಾಜ್ ಈ ಕುರಿತಾಗಿ ಟ್ವೀಟ್ ಕೂಡಾ ಮಾಡಿದ್ದಾರೆ.
ಈ ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಕಾಶ್ ರಾಜ್ 'ಬೆಗುಸರೈನಲ್ಲಿ ನಾನು ಕನ್ಹಯ್ಯಾ ಜೊತೆ ಪ್ರಯಾಣ ಕೈಗೊಂಡೆ. ನಾನು ಜನರ ಕಣ್ಣಲ್ಲಿ ಭರವಸೆಯ ಬೆಳಕು ಕಂಡಿದ್ದೇನೆ. ಬದಲಾವಣೆಯ ಅಲೆ ನನ್ನ ಗಮನಕ್ಕೆ ಬಂದಿದೆ. ನಾನು ಅವರ ಪರ ಇದ್ದೇನೆ ಎಂದು ನನಗೆ ಹೆಮ್ಮೆ ಅನಿಸುತ್ತದೆ' ಎಂದ್ದಾರೆ.
