Asianet Suvarna News Asianet Suvarna News

‘ಆಪರೇಷನ್‌ ಕಮಲ’ಕ್ಕೆ ಪುತ್ತೂರು ಲಿಂಕ್‌..! ತೆಲಂಗಾಣ ಪೊಲೀಸರಿಂದ ಶೋಧ ಕಾರ್ಯ

ತೆಲಂಗಾಣ ಆಪರೇಶನ್‌ ಕಮಲ ಆರೋಪಕ್ಕೆ ಸಂಬಂಧಪಟ್ಟಂತೆ ಪುತ್ತೂರಲ್ಲಿ ರೇಡ್‌ ಮಾಡಲಾಗಿದೆ. ಪುತ್ತೂರಲ್ಲಿ ಮನೆ ಹೊಂದಿರುವ ಆರೋಪಿ ರಾಮಚಂದ್ರ ಭಾರತಿಯ ಮನೆಯನ್ನು ತೆಲಂಗಾಣ ಪೊಲೀಸರು ತಲಾಶ್‌ ನಡೆಸಿದ್ದಾರೆ. ಟಿಆರ್‌ಎಸ್‌ ಶಾಸಕರ ‘ಖರೀದಿ’ ಯತ್ನದ ಆರೋಪಿ ರಾಮಚಂದ್ರ ಭಾರತಿ ಅವರ ಮೇಲಿದೆ. 

telangana police launch searches in 4 states in connection with poach gate including karnatakas puttur ash
Author
First Published Nov 14, 2022, 7:56 AM IST

ಹೈದರಾಬಾದ್‌: ತೆಲಂಗಾಣದಲ್ಲಿ (Telangana) ಆಳಿತಾರೂಢ ಟಿಆರ್‌ಎಸ್‌ (TRS) ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ (BJP) ನಡೆಸಿತು ಎನ್ನಲಾದ ಯತ್ನಕ್ಕೆ ಸಂಬಂಧಿಸಿದಂತೆ ಕರ್ನಾಟಕದ (Karnataka) ಪುತ್ತೂರು (Puttur) ಸೇರಿದಂತೆ 4 ರಾಜ್ಯಗಳ 7 ಸ್ಥಳಗಳಲ್ಲಿ ತೆಲಂಗಾಣ ಪೊಲೀಸರು (Telangana Police) ದಾಳಿ ನಡೆಸಿದ್ದಾರೆ.

ತಮಗೆ 250 ಕೋಟಿ ರೂ. ನೀಡಿ ಬಿಜೆಪಿ ಏಜೆಂಟರು ಎನ್ನಲಾದ ಫರೀದಾಬಾದ್‌ (Faridabad) ಮೂಲದ ಧರ್ಮ ಪ್ರಚಾರಕ ರಾಮಚಂದ್ರ ಭಾರತಿ, ಹೈದರಾಬಾದ ಉದ್ಯಮಿ ನಂದಕುಮಾರ್‌ ಹಾಗೂ ತಿರುಪತಿಯ ಸಿಂಹಯ್ಯಾಜಿ ಸ್ವಾಮಿ ಯತ್ನಿಸಿದ್ದರು ಎಂದು 3 ಟಿಆರ್‌ಎಸ್‌ ಶಾಸಕರು ಇತ್ತೀಚೆಗೆ ದೂರು ನೀಡಿದ್ದರು ಹಾಗೂ ‘ಖರೀದಿ ಯತ್ನದ’ ವಿಡಿಯೋವನ್ನೂ ಬಿಡುಗಡೆ ಮಾಡಿದ್ದರು. ಬಳಿಕ ಆಂಧ್ರಪ್ರದೇಶ ಹೈಕೋರ್ಟ್‌ ಸೂಚನೆ ಮೇರೆಗೆ ಮೂವರನ್ನೂ ತೆಲಂಗಾಣ ಪೊಲೀಸರು ಬಂಧಿಸಿದ್ದರು.

ಇದನ್ನು ಓದಿ: Telangana ಶಾಸಕರಿಗೆ ಹಣದ ಆಮಿಷ ಆರೋಪ: ಪ್ರಧಾನಿ ಮೋದಿ ವಿರುದ್ಧ ಕೆಸಿಆರ್‌ ವಾಗ್ದಾಳಿ

ಈ ಪೈಕಿ, ರಾಮಚಂದ್ರ ಭಾರತಿ ಫರೀದಾಬಾದ್‌ ಮಾತ್ರವಲ್ಲ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲೂ ಮನೆ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ಆತನ ಪುತ್ತೂರಿನ ಹಾಗೂ ಫರೀದಾಬಾದ್‌ ಮನೆಯಲ್ಲಿ ತೆಲಂಗಾಣದ ವಿಶೇಷ ತನಿಖಾ ತಂಡದ (Special Investigation Team) (ಎಸ್‌ಐಟಿ) (SIT) ಪೊಲೀಸರು ಶನಿವಾರ ತಪಾಸಣೆ ನಡೆಸಿದ್ದಾರೆ. ಇತರ ಆಪಾದಿತರ ಹರ್ಯಾಣ, ಕೇರಳ ಹಾಗೂ ತೆಲಂಗಾಣದ ಆಸ್ತಿಪಾಸ್ತಿಗಳ ಮೇಲೂ ದಾಳಿ ನಡೆದಿದೆ ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಏನಿದು ಪ್ರಕರಣ..?
ತೆಲಂಗಾಣದ ಆಡಳಿತ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕುದುರೆ ವ್ಯಾಪಾರ ನಡೆಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಫಾರ್ಮ್‌ಹೌಸ್‌ನಿಂದ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ಕಳೆದ ತಿಂಗಳು ತಿಳಿಸಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರು ಈ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಸ್ಟೀಫನ್ ರವೀಂದ್ರ ಮಾಧ್ಯಮಗಳಿಗೆ ಹೇಳಿದ್ದಾರೆ. 100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡೀಲ್‌ಗಳು ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ. ಪ್ರಮುಖ ವ್ಯಕ್ತಿಗೆ 100 ಕೋಟಿ ರೂ., ಜೊತೆಗೆ ಪ್ರತಿ ಶಾಸಕರಿಗೆ 50 ಕೋಟಿ ರೂ. ನೀಡುವುದಾಗಿ ಹೇಳಿದ್ದರು ಎಂದೂ ಪೊಲೀಸರು ಆರೋಪಿಸಿದ್ದರು.

ಇದನ್ನೂ ಓದಿ: Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia

ಇನ್ನೊಂದೆಡೆ, ತೆಲಂಗಾಣದ ಆಡಳಿತ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ನಾಯಕತ್ವ ಪ್ರಯತ್ನ ನಡೆಸಿದೆ ಎಂಬ ಆರೋಪದ ಬಗ್ಗೆ ವಾಗ್ದಾಳಿ ನಡೆಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಆರೋಪದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ 8 ರಾಜ್ಯಗಳಲ್ಲಿ ಬಿಜೆಪಿಯು ಆಪರೇಷನ್‌ ಕಮಲದ ಪ್ರಯತ್ನಗಳನ್ನು ಮಾಡಿತ್ತು ಎಂದೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಹೇಳಿದ್ದು, ಬಿಜೆಪಿ ಆಡುತ್ತಿರುವ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಈ ಬಾರಿ ತೆಲಂಗಾಣದಲ್ಲಿ ಎಂದು ಮನೀಶ್‌ ಸಿಸೋಡಿಯಾ ಆರೋಪಿಸಿದ್ದರು.

ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿ ಸೇರಿ ಹಲವರ ವಿರುದ್ಧ ಆರೋಪ ಮಾಡಿದ್ದರು. 

ಇದನ್ನೂ ಓದಿ: ಕೆಸಿಆರ್‌ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್‌..?

Follow Us:
Download App:
  • android
  • ios