‘ಸರ್.. ನನಗೆ ಅಪ್ಪ-ಅಮ್ಮ ಇಲ್ಲ ಸರ್. ನೀವೇ ನನಗೆ ಅಪ್ಪ-ಅಮ್ಮ ಇದ್ದಂತೆ. ದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್. ನಾನು ಓದಿದ್ದ ಯಾವ ಪ್ರಶ್ನೆಗಳೂ ಪರೀಕ್ಷೆಯಲ್ಲಿ ಬಂದಿಲ್ಲ. ದೇವರು ಇದ್ದಾನೆ ಎಂದು ನಾನು ನಂಬಿದ್ದೇನೆ, ಆ ದೇವರೇ ನೀವೇ ಸರ್. ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನನ್ನು ಪಾಸ್ ಮಾಡಿ’..

ಪರೀಕ್ಷೆ ಬರೆಯುವಾಗ ಉತ್ತರ ಗೊತ್ತಿಲ್ಲದಿದ್ದರೆ ಏನು ಮಾಡುತ್ತೀರಿ? ಕೆಲವರು ತಲೆ ಕೆರೆದುಕೊಳ್ಳುತ್ತಾರೆ, ಇನ್ನು ಕೆಲವರು ಸಿನಿಮಾ ಹಾಡು, ಕಥೆ ಬರೆಯುತ್ತಾರೆ. ಆದರೆ, ಈ ವಿದ್ಯಾರ್ಥಿಯೊಬ್ಬ ಮಾಡಿರುವ ಕೆಲಸ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತನಗೆ ಅಪ್ಪ-ಅಮ್ಮ ಇಬ್ಬರೂ ಇಲ್ಲ, ನೀವೇ ನನಗೆ ಅಪ್ಪ-ಅಮ್ಮ ಹಾಗೂ ದೇವರು ಇದ್ದಂತೆ. ತನ್ನನ್ನು ಹೇಗಾದರೂ ಮಾಡಿ ಪಾಸ್ ಮಾಡಿಸುವಂತೆ ಉತ್ತರ ಪತ್ರಿಕೆಯಲ್ಲಿ ಆತ ಬರೆದಿರುವ ಭಾವನಾತ್ಮಕ ಪತ್ರ ಮತ್ತು ಬಿಡಿಸಿರುವ ಚಿತ್ರವನ್ನು ನೋಡಿ ಪೇಪರ್ ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರೇ ಒಂದು ಕ್ಷಣ ದಂಗಾಗಿದ್ದಾರೆ.

ವರ್ಷವಿಡೀ ರೀಲ್ಸ್, ಪರೀಕ್ಷೆಯಲ್ಲಿ ಕಣ್ಣೀರು!

ಇಂದಿನ ಕಾಲದಲ್ಲಿ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಲಕ್ಷಾಂತರ ರೂಪಾಯಿ ಫೀಜು ಕಟ್ಟಿ ದೊಡ್ಡ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಕೆಲವು ವಿದ್ಯಾರ್ಥಿಗಳು ಮಾತ್ರ ವರ್ಷವಿಡೀ ಮೊಬೈಲ್‌ನಲ್ಲಿ ರೀಲ್ಸ್ ಮಾಡುವುದು, ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವುದರಲ್ಲೇ ಮಗ್ನರಾಗಿರುತ್ತಾರೆ. ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಅವರಿಗೆ ಭವಿಷ್ಯದ ಚಿಂತೆ ಶುರುವಾಗುತ್ತದೆ. ಇಂತಹ ಸಮಯದಲ್ಲಿ ಪಾಸ್ ಆಗಲು ವಿದ್ಯಾರ್ಥಿಗಳು ಕಂಡುಕೊಳ್ಳುವ ದಾರಿಗಳು ಒಂದಕ್ಕಿಂತ ಒಂದು ವಿಚಿತ್ರವಾಗಿರುತ್ತವೆ.

ಉತ್ತರ ಪತ್ರಿಕೆಯಲ್ಲಿ ಬಿಚ್ಚಿಟ್ಟ 'ಭಾವನಾತ್ಮಕ' ಕಥೆ:

ತೆಲಂಗಾಣದಲ್ಲಿ ಇತ್ತೀಚೆಗೆ ಇಂಟರ್ ಮೀಡಿಯೇಟ್ ಪರೀಕ್ಷೆಗಳು ಮುಗಿದಿದ್ದು, ಸದ್ಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಈ ವೇಳೆ ಓರ್ವ ವಿದ್ಯಾರ್ಥಿಯ ಪೇಪರ್ ಶಿಕ್ಷಕರ ಕೈಗೆ ಸಿಕ್ಕಿದೆ. ಆತ ಪ್ರಶ್ನೆಗಳಿಗೆ ಉತ್ತರ ಬರೆಯುವ ಬದಲು ಹೀಗೆ ಬರೆದಿದ್ದಾನೆ: 'ಸರ್.. ನನಗೆ ಅಪ್ಪ-ಅಮ್ಮ ಇಲ್ಲ ಸರ್. ನೀವೇ ನನಗೆ ಅಪ್ಪ-ಅಮ್ಮ ಇದ್ದಂತೆ. ದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್. ನಾನು ಓದಿದ್ದ ಯಾವ ಪ್ರಶ್ನೆಗಳೂ ಪರೀಕ್ಷೆಯಲ್ಲಿ ಬಂದಿಲ್ಲ. ದೇವರು ಇದ್ದಾನೆ ಎಂದು ನಾನು ನಂಬಿದ್ದೇನೆ, ಆ ದೇವರೇ ನೀವೇ ಸರ್. ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನನ್ನು ಪಾಸ್ ಮಾಡಿ' ಎಂದು ಮನವಿ ಮಾಡಿದ್ದಾನೆ.

ಟ್ಯಾಲೆಂಟ್ ತೋರಿಸಲು ಚಿತ್ರವನ್ನೂ ಬಿಡಿಸಿದ ಶಿಷ್ಯ!

ಕೇವಲ ಬರವಣಿಗೆಗೆ ಸೀಮಿತವಾಗದ ಈ ವಿದ್ಯಾರ್ಥಿ, ಶಿಕ್ಷಕರ ಮನ ಕರಗಿಸಲು ಒಂದು ಚಿತ್ರವನ್ನೂ ಬಿಡಿಸಿದ್ದಾನೆ. ಗುರುವಿನ ಕಾಲಿಗೆ ಶಿಷ್ಯ ಬಿದ್ದು ನಮಸ್ಕರಿಸುತ್ತಿರುವಂತೆ ಚಿತ್ರ ಬಿಡಿಸಿ, ಗುರುವಿನ ಚಿತ್ರದ ಹತ್ತಿರ 'ಸರ್' ಎಂದು ಮತ್ತು ಶಿಷ್ಯನ ಚಿತ್ರದ ಹತ್ತಿರ 'ನಾನು' ಎಂದು ಬರೆದು ತನ್ನ ಕ್ರಿಯೇಟಿವಿಟಿ ಮೆರೆದಿದ್ದಾನೆ. ಈ ವಿಚಿತ್ರ ಉತ್ತರ ಪತ್ರಿಕೆಯ ಫೋಟೋ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ನೆಟ್ಟಿಗರ ತಮಾಷೆಯ ಕಾಮೆಂಟ್ಸ್:

ಈ ಫೋಟೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ. 'ಇವನು ಪಾಸ್ ಆದರೂ ಅಥವಾ ಫೇಲ್ ಆದರೂ, ಕಾಮಿಡಿ ಶೋಗೆ ಹೋದರೆ ಗ್ಯಾರಂಟಿ ಫೇಮಸ್ ಆಗುತ್ತಾನೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಎಷ್ಟೊಂದು ಡ್ರಾಮಾ ಮಾಡ್ತಾರಪ್ಪ ಈ ಕಾಲದ ಮಕ್ಕಳು"' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ತಮಾಷೆಯ ಮೀಮ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ, ಓದಿನ ಬಗ್ಗೆ ಆಸಕ್ತಿ ಇಲ್ಲದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲು ಇಂತಹ ವಿಚಿತ್ರ ಕಸರತ್ತುಗಳನ್ನು ಮಾಡುತ್ತಿರುವುದು ಶಿಕ್ಷಣ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಶಿಕ್ಷಕರನ್ನು ದೇವರೆಂದು ಭಾವಿಸಿ ಚಿತ್ರ ಬಿಡಿಸಿದ ಈ 'ಮಹಾನ್' ಶಿಷ್ಯನಿಗೆ ಪಾಸಿಂಗ್ ಮಾರ್ಕ್ಸ್ ಸಿಗುತ್ತಾ ಇಲ್ಲವೋ ಎಂಬುದು ಮಾತ್ರ ಸದ್ಯಕ್ಕೆ ರಹಸ್ಯವಾಗಿದೆ.