ತೆಲಂಗಾಣದಲ್ಲಿ 40 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಶಾಲೆಯಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೈದರಾಬಾದ್: ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದು, ಭಾರತೀಯರು ಬಾಹ್ಯಾಕಾಶದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆದರೂ ನಮ್ಮಲ್ಲಿರುವ ಕೆಲವು ಪಿಡುಗುಗಳು ಮಾತ್ರ ಇನ್ನೂ ನಿವಾರಣೆಯಾಗಿಲ್ಲ, ವರದಕ್ಷಿಣೆಯ ಜೊತೆ ಬಾಲ್ಯ ವಿವಾಹಗಳು ಕೂಡ ಈಗಾಗಲೇ ದೇಶದಲ್ಲಿ ನಿಷೇಧಿಸಲ್ಪಟ್ಟಿದ್ದರೂ ಅಲ್ಲಲ್ಲಿ ಘಟನೆಗಳು ನಡೆಯುತ್ತಲೇ ಇವೆ. ಅದೇ ರೀತಿ ಈಗ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣವೊಂದು ದೇಶವನ್ನೇ ಬೆಚ್ಚಿ ಬೀಳಿಸಿದೆ. 40 ವರ್ಷದ ವ್ಯಕ್ತಿಯೋರ್ವ ತನಗಿಂತ 27 ವರ್ಷ ಪ್ರಾಯ ಸಣ್ಣವಳಾದ ಬಾಲಕಿಯ ಜೊತೆ ಹಸೆಮಣೆ ಏರಿದ್ದಾನೆ.

ಕಳೆದ ಮೇ 28ರಂದು ಈ ಮದುವೆ ನಡೆದಿದ್ದು, ಹೀಗೆ ಬಾಲಕಿಯ ಜೊತೆ ವಿವಾಹವಾದ ವ್ಯಕ್ತಿಯನ್ನುಕಂಡಿವಾಡ ನಿವಾಸಿ ಶ್ರೀನಿವಾಸ ಗೌಡ್ ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯೂ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆ ವಿವಾಹಿತ ವ್ಯಕ್ತಿ, ಆತನ ಮೊದಲ ಪತ್ನಿ ಹಾಗೂ ಈ ಮದುವೆಯನ್ನು ನಡೆಸಿಕೊಟ್ಟ ಪುರೋಹಿತರು ಹಾಗೂ ಈ ಮದುವೆಯನ್ನು ಆಯೋಜಿಸಿದ್ದಕ್ಕೆ ಸಹಾಯ ಮಾಡಿದ ಮದುವೆ ದಲ್ಲಾಳಿಯ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ.

8ನೇ ಕ್ಲಾಸ್‌ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿ:

13 ವರ್ಷದ ಬಾಲಕಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ತನ್ನ ಮದುವೆಯ ಬಗ್ಗೆ ಬಾಲಕಿ ಶಾಲೆಯಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ. ನಂತರ ಶಾಲೆಯ ಶಿಕ್ಷಕರು ಗ್ರಾಮದ ತಹಸೀಲ್ದಾರ್ ರಾಜೇಶ್ವರ್ ಹಾಗೂ ಇನ್ಸ್‌ಪೆಕ್ಟರ್‌ ಪ್ರಸಾದ್ ಅವರನ್ನು ಸಂಪರ್ಕಿಸಿ ಘಟನೆ ಬಗ್ಗೆ ಹೇಳಿದ್ದಾರೆ. ನಂತರ ಘಟನೆಯ ಬಗ್ಗೆ ಪೊಲೀಸರು ತನಿಖೆಗೆ ಇಳಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇ ತಿಂಗಳಲ್ಲಿ ನಡೆದಿದ್ದ ಮದುವೆ:

ಈ ಹುಡುಗಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ತಾವು ವಾಸ ಮಾಡುವ ಮನೆಯ ಮಾಲೀಕರಿಗೆ ಬಾಲಕಿಯ ತಾಯಿ ತನ್ನ ಮಗಳನ್ನು ಮದುವೆ ಮಾಡಲು ಬಯಸುವುದಾಗಿ ಹೇಳಿದ್ದಳು. ನಂತರ ಮಧ್ಯವರ್ತಿಯೊಬ್ಬರು 40 ವರ್ಷದ ವ್ಯಕ್ತಿಯ ಜೊತೆಗೆ ಮದುವೆಗೆ ಅವಕಾಶ ಮಾಡಿಕೊಟ್ಟರು ಮತ್ತು ಮೇ ತಿಂಗಳಲ್ಲಿ ಈ ಮದುವೆ ನಡೆದಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಮದುವೆ ದಲ್ಲಾಳಿ ಹಾಗೂ ಪುರೋಹಿತನನ್ನು ಬಾಲ್ಯ ವಿವಾಹ ಕಾಯ್ದೆಯಡಿ ಬಂಧಿಸಲಾಗಿದೆ. ಹಾಗೂ ಬಾಲಕಿಯನ್ನು ಸುರಕ್ಷತೆ ಹಾಗೂ ಮುಂದಿನ ಭವಿಷ್ಯಕ್ಕೆ ಬೆಂಬಲಿಸುವ ದೃಷ್ಟಿಯಿಂದ ಸಖಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಲೈಂಗಿಕ ಸಂಬಂಧ ಬಳಸಿದ್ದರೆ ಪೋಕ್ಸೋ ಕೇಸ್:

ಅವರು ಸುಮಾರು ಎರಡು ತಿಂಗಳ ಕಾಲ ಸಹಬಾಳ್ವೆ ನಡೆಸುತ್ತಿದ್ದರು. ಹುಡುಗಿಯನ್ನು ಬಲವಂತವಾಗಿ ಲೈಂಗಿಕ ಸಂಬಂಧಕ್ಕೆ ಒಳಪಡಿಸಿದರೆ, ಆಕೆಯನ್ನು ವಿವಾಹವಾದ ವ್ಯಕ್ತಿ ಶ್ರೀನಿವಾಸ್ ಗೌಡ್ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ. ಪೋಸ್ಕೋ ಕಾಯ್ದೆಯಡಿ ಅಪ್ರಾಪ್ತರ ಜೊತೆ ಲೈಂಗಿಕ ಸಂಬಂಧ ಶಿಕ್ಷರ್ಹಾ ಅಪರಾಧವಾಗಿದೆ.

ಬಡತನಕ್ಕಿಂತ ಓಡಿಹೋಗುವ ಭಯದಿಂದ ಮದ್ವೆ ಮಾಡ್ತಿರುವ ಪೋಷಕರು:

ರಾಜ್ಯದಲ್ಲಿ ಇದುವರೆಗೆ 44 ಇಂತಹ ಬಾಲ್ಯವಿವಾಹದ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಕಳೆದ ವರ್ಷ 60 ಪ್ರಕರಣಗಳು ದಾಖಲಾಗಿವೆ. ಬಹುತೇಕ ಬಾಲ್ಯವಿವಾಹಗಳು ಬಡತನಕ್ಕಿಂತಲೂ ಮಕ್ಕಳು ಓಡಿ ಹೋಗುವ ಭಯದಿಂದ ಬಹುತೇಕ ಪೋಷಕರು ಮದುವೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ 14 ರಂದು 18 ವರ್ಷದ ಬಾಲಕಿ ಮತ್ತು 19 ವರ್ಷದ ಯುವಕನ ನಡುವೆ ಮತ್ತೊಂದು ಬಾಲ್ಯ ವಿವಾಹ ನಡೆಯುವ ಬಗ್ಗೆ ಅಧಿಕಾರಿಗೆ ಮಾಹಿತಿ ದೊರೆತ ಬೆನ್ನಲ್ಲೇ ಈ ಇತ್ತೀಚಿನ ಪ್ರಕರಣ ಬೆಳಕಿಗೆ ಬಂದಿದೆ. ಭಾರತದಲ್ಲಿ ಮದುವೆಗೆ ಪುರುಷರ ವಿವಾಹ 21 ಮತ್ತು ಮಹಿಳೆಯರಿಗೆ 18 ವರ್ಷವಾಗಿದೆ. ನಾವು ಅತ್ಯಂತ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ, ಅವರು ಜಾಗರೂಕರಾಗುತ್ತಾರೆ ಮತ್ತು ನಾವು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.