ಮದ್ದೂರು ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಮಾಂಗಲ್ಯ ಸರ ಕಳ್ಳತನದ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬಳ್ಳಾರಿಯ ಬಾಲಕಿಯನ್ನು ಮಾರಸಿಂಗನಹಳ್ಳಿಯ ಯುವಕನಿಗೆ ವಿವಾಹ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರುವ ಘಟನೆ ನಡೆದಿದೆ.
ಮದ್ದೂರು (ಜೂ.9): ಬಳ್ಳಾರಿ ಮೂಲದ ಬಾಲಕಿಯನ್ನು ಕರೆ ತಂದು ಬಾಲ್ಯ ವಿವಾಹ ಮಾಡಿರುವ ಪ್ರಕರಣ ತಾಲೂಕಿನ ಮಾರಸಿಂಗನ ಹಳ್ಳಿಯಿಂದ ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿಯ ರೂಪನಗಡಿಯ ಬಾಲಕಿಯನ್ನು ಕರೆ ತಂದ ಪೋಷಕರು ಮಾರಸಿಂಗನಹಳ್ಳಿ ಗ್ರಾಮದ ಯುವಕ ಪ್ರಸನ್ನ ಎಂಬಾತನಿಗೆ ಕೊಟ್ಟು ಗ್ರಾಮದ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಕಳೆದ ಮಾರ್ಚ್ 6ರಂದು ಮದುವೆ ಕಾರ್ಯ ನೆರವೇರಿಸಲಾಗಿದೆ.
ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಲೀಲಾವತಿ ಎಂಬುವವರು ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ಆದರಿಸಿ ಬೆಸಗರಹಳ್ಳಿ ಠಾಣಾ ಪೊಲೀಸರು ಬಾಲಕಿಯ ಪೋಷಕರಾದ ವೆಂಕಟೇಶ, ಪದ್ಮಾವತಿ, ಮಾರಸಿಂಗನಹಳ್ಳಿಯ ಪ್ರಸನ್ನ, ವೆಂಕಟೇಶ್ ಮತ್ತು ವೆಂಕಟೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳ!
ಮದುವೆ ಮುಗಿಸಿಕೊಂಡು ವಾಪಸ್ ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಮಹಿಳೆ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ನಗರದ ಸುರಭಿ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಕಲ್ಲಹಳ್ಳಿ ವಿವಿ ನಗರ ಬಡಾವಣೆಯ ಕಮಲ ಎಂಬುವರೇ ಸುಮಾರು 2.50 ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ.
ರಾತ್ರಿ ಸುಮಾರು 7.30ರ ಸಮಯದಲ್ಲಿ ಸುರಭಿ ಕಲ್ಯಾಣ ಮಂಟಪದಲ್ಲಿ ಮದುವೆ ಆರತಕ್ಷತೆ ಸಮಾರಂಭ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ. ಇದನ್ನು ಅರಿತ ಕಮಲ ತಕ್ಷಣ ಮಾಂಗಲ್ಯ ಸಮೇತ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಆದರೂ ಅಪರಿಚಿತ ವ್ಯಕ್ತಿ ಸರವನ್ನು ಬಲವಾಗಿ ಎಳೆದ ಕಾರಣ ಕಿತ್ತು ಅರ್ಧ ಆತನ ಕೈಯ್ಯಲ್ಲಿ, ಮಾಂಗಲ್ಯ ಸಮೇತ ಅರ್ಧ ಸರ ನನ್ನ ಕೈಯಲ್ಲಿ ಉಳಿದುಕೊಂಡಿದೆ. ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.
ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.