ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಬಿ. ರವಿ ಜೋಸೆಫ್ ಎಂಬುವವರು ಕಳೆದ ಮೂರು ವರ್ಷಗಳಿಂದ 10 ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿದ್ದರು. ಈ ನಾಣ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಶೋರೂಮ್‌ಗೆ ಹೋಗಿ 1.23 ಲಕ್ಷ ರೂ. ಮೌಲ್ಯದ ಹೊಸ ಸ್ಕೂಟರ್ ಖರೀದಿಸಿದ್ದಾರೆ. ವಿಡಿಯೋ ಇಲ್ಲಿದೆ ವೀಕ್ಷಿಸಿ.

ಹೈದರಾಬಾದ್: ಸಾಮಾನ್ಯವಾಗಿ ಇಪ್ಪತ್ತು ಮೂವತ್ತು ರೂಪಾಯಿಯಲ್ಲಿ ಸಿಗುವ ವಸ್ತುಗಳನ್ನು ಐದು ಹತ್ತು ರೂಪಾಯಿ ನಾಣ್ಯಗಳನ್ನೇ ಕೊಟ್ಟು ಖರೀದಿಸಬಹುದು. ಅಬ್ಬಬ್ಬಾ ಅಂದ್ರೆ ನೂರು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಬಹುದು. ಅದೇ ಒಂದು ಲಕ್ಷ ರೂಪಾಯಿ ಬೆಲೆ ಬೈಕ್ ಖರೀದಿಸುವಾಗಲೂ ಅಷ್ಟು ನಾಣ್ಯಗಳನ್ನೇ ಕೊಟ್ಟು ಖರೀದಿಸಲು ಹೋದರೆ ಹೇಗಿದ್ದೀತು? ಶೋ ರೂಂನವರು ಅಷ್ಟು ಹಣವನ್ನು ಎಣಿಸಲು ಎಷ್ಟು ಪರಿಪಾಟಲು ಬಿಳಬಹುದು? ಅಂತಹದ್ದೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ.

₹10ರ ನಾಣ್ಯಗಳಿಂದಲೇ ₹1.23 ಲಕ್ಷ ಮೌಲ್ಯದ ಸ್ಕೂಟರ್ ಖರೀದಿಸಿದ!

ಹೌದು ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ₹10ರ ನಾಣ್ಯಗಳನ್ನು ಕೂಡಿಟ್ಟು ಬರೋಬ್ಬರಿ ₹1.23 ಲಕ್ಷ ಮೌಲ್ಯದ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಿದ್ದಾರೆ. ಅಷ್ಟು ನಾಣ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಶೋ ರೂಮ್‌ನಲ್ಲಿ ನಾಣ್ಯಗಳ ರಾಶಿಯನ್ನ ಹಾಕಿ ಸ್ಕೂಟರ್ ಖರೀದಿಸಿರುವುದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ದಿನನಿತ್ಯ ವಸ್ತಗಳನ್ನ ಖರೀದಿಸುವಾಗ ಉಳಿಯುತ್ತಿದ್ದ ನಾಣ್ಯಗಳಿಂದಲೇ ಸ್ಕೂಟರ್ ಖರೀದಿಸಿದ ವ್ಯಕ್ತಿ!

ಲಕ್ಸೆಟ್ಟಿಪೇಟೆ ನಿವಾಸಿಯಾಗಿರುವ ಬಿ. ರವಿ ಜೋಸೆಫ್ ಎಂಬುವವರು ಈ ರೀತಿ ನಾಣ್ಯಗಳನ್ನು ಸಂಗ್ರಹಿಸಿ ಸ್ಕೂಟರ್ ಖರೀದಿಸಿದ್ದಾರೆ. ದಿನನಿತ್ಯದ ವಸ್ತುಗಳನ್ನು ಖರೀದಿಸುವಾಗ ವಾಪಸ್ ಸಿಗುತ್ತಿದ್ದ ₹10ರ ನಾಣ್ಯಗಳನ್ನು ಅವರು ಪ್ರತ್ಯೇಕವಾಗಿ ತೆಗೆದಿಡುತ್ತಿದ್ದರು. ಕುಟುಂಬಕ್ಕೆ ಉಪಯುಕ್ತವಾದ ಯಾವುದಾದರೂ ವಸ್ತುವನ್ನು ಖರೀದಿಸಬೇಕು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಹೀಗೆ ಹಣ ಉಳಿಸುತ್ತಿದ್ದರು. ಆರಂಭದಲ್ಲಿ ರವಿ ಜೋಸೆಫ್ ಅವರ ಕುಟುಂಬಸ್ಥರು ಇಂತಹ ಆಲೋಚನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಬಳಿಕ ಅವರ ಉಳಿತಾಯ ಪಯತ್ನ ಬೆಂಬಲಿಸಿದರು ಎಂದು ರವಿ ತಿಳಿಸಿದ್ದಾರೆ.

ಉಳಿಕೆಯ ಹಣದಿಂದ ಸ್ಕೂಟರ್ ಖರೀದಿಸುವ ಕನಸು ನನಸು!

ಅವರ ಹಳೆಯ ಸ್ಕೂಟರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಹೊಸ ಸ್ಕೂಟರ್ ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಕಳೆದ ಮೂರು ವರ್ಷಗಳಿಂದ ನಾಣ್ಯಗಳ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ಬಳಸಿ ಹೊಸ ವಾಹನ ಖರೀದಿಸಲು ಮುಂದಾದರು.

ಸುಮಾರು 15 ದಿನಗಳ ಹಿಂದೆ ರವಿ ಜೋಸೆಫ್ ಅವರು ಶೋರೂಮ್‌ಗೆ ಭೇಟಿ ನೀಡಿದ್ದರು. ಆಗ ₹10ರ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಬಹುದೇ ಎಂದು ವಿಚಾರಿಸಿದ್ದರು. ನಾಣ್ಯಗಳನ್ನು ಸ್ವೀಕರಿಸಲು ಶೋರೂಮ್ ಒಪ್ಪಿಗೆ ನೀಡಿತ್ತು ಎಂದು ಶೋರೂಮ್ ವ್ಯವಸ್ಥಾಪಕರು ತಿಳಿಸಿದ್ದಾರೆ.

Scroll to load tweet…

ಹತ್ತು ರೂಪಾಯಿ ನಾಣ್ಯ ಉಳಿಸುವುದರಿಂದ ಏನೆಲ್ಲ ಖರೀಸಲು ಸಾಧ್ಯ ನೋಡಿ!

ಬಳಿಕ ರವಿ ಜೋಸೆಫ್ ಅವರು ₹1.23 ಲಕ್ಷ ಮೌಲ್ಯದ ₹10ರ ನಾಣ್ಯಗಳನ್ನು ಶೋರೂಮ್‌ಗೆ ತಂದು ಹಣ ಪಾವತಿಸಿ, ಹೊಸ ಹೋಂಡಾ ಆಕ್ಟಿವಾ ಸ್ಕೂಟರ್‌ ಅನ್ನು ಮನೆಗೆ ಕೊಂಡೊಯ್ದಿದ್ದಾರೆ. ಮೂರು ವರ್ಷಗಳ ಸತತ ಉಳಿತಾಯದ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಿರುವ ಅವರ ಪ್ರಯತ್ನ ಈಗ ಎಲ್ಲರ ಗಮನ ಸೆಳೆದಿದೆ. ದಿನ ಹತ್ತು ರೂಪಾಯಿ ಉಳಿಸುವುದರಿಂದ ಏನು ಖರೀದಿಸೋಕೆ ಸಾಧ್ಯ ಎಂಬ ಅಲಕ್ಷ್ಯ ಮಾಡುವವರಿಗೆ ಈ ಘಟನೆ ಒಂದು ಪಾಠವಾಗಬಹುದು. ಹನಿ ಹನಿ ಕೂಡಿ ಹಳ್ಳ ಎಂಬಂತೆ ಪ್ರತಿದಿನ ಉಳಿಸುವ ಹತ್ತು ರೂಪಾಯಿ ನಾಣ್ಯವೂ ಕೂಡ ಮುಂದೆ ನಿಮ್ಮ ಕನಸಿನ ಏನಾದರೊಂದು ವಸ್ತುವನ್ನ ಖರೀದಿಸಲು ಸಾಧ್ಯವಿದೆ.