ಆಂಧ್ರ ಪ್ರದೇಶದ ಶಾಲೆಯೊಂದರಲ್ಲಿ ಗರಗಸ ದಾಳಿ ನಡೆದಾಗ ಗೆಳತಿಯನ್ನು ರಕ್ಷಿಸಲು ಹೋಗಿ ಗಾಯಗೊಂಡ 10ನೇ ತರಗತಿ ವಿದ್ಯಾರ್ಥಿನಿಗೆ ಆನಂದ್ ಮಹೀಂದ್ರ ನೆರವು ಘೋಷಿಸಿದ್ದಾರೆ. ನನ್ಹಿ ಕಲಿ ಯೋಜನೆಯಡಿ ಆಕೆಯ ಓದಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆಂಧ್ರ ಪ್ರದೇಶ: ಶಾಲೆಯಲ್ಲಿ ಗರಗಸ ದಾಳಿ ನಡೆದಾಗ ತನ್ನ ಸ್ನೇಹಿತೆಯನ್ನು ಉಳಿಸಲು ಹೋಗಿ ಗಾಯಗೊಂಡಿದ್ದ 10ನೇ ತರಗತಿ ವಿದ್ಯಾರ್ಥಿನಿಯ ಓದಿಗೆ ಸಹಾಯ ಮಾಡಲು ಉದ್ಯಮಿ ಆನಂದ್ ಮಹೀಂದ್ರ ಮುಂದೆ ಬಂದಿದ್ದಾರೆ.
ತನ್ನ ಸ್ನೇಹಿತೆಯನ್ನು ರಕ್ಷಿಸಲು ಮುಂದಾಗಿ ಧೈರ್ಯ ತೋರಿದ ಆ ಹುಡುಗಿಗೆ ಆನಂದ್ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು ಆಕೆಯ ಓದಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರ, ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ತಮ್ಮ ನನ್ಹಿ ಕಲಿ ಯೋಜನೆಯಿಂದ ಆಕೆಯ ಓದಿಗೆ ನೆರವು ನೀಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಆಕೆಯ ಕುಟುಂಬವನ್ನು ನಾವು ಸಂಪರ್ಕಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
ಏನಾಗಿತ್ತು?
ಅಕ್ಟೋಬರ್ 31 ರಂದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 21 ವರ್ಷದ ಯುವಕನೊಬ್ಬ ತರಗತಿಗೆ ನುಗ್ಗಿ 15 ವರ್ಷದ ಹುಡುಗಿಯ ಮೇಲೆ ಚೈನ್ಸಾದಿಂದ ದಾಳಿ ಮಾಡಿದ್ದ. ಆ ಹುಡುಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನು, ಆಕೆಯನ್ನು ಉಳಿಸಲು ಹೋದ ಸ್ನೇಹಿತೆಗೂ ಗಾಯವಾಗಿದೆ. ಇನ್ನು ಪ್ರಕರಣದ ಆರೋಪಿಯನ್ನು ಹೇಮಂತ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಹುಡುಗಿಯ ತಾಯಿಯ ಕಡೆಯ ಮಾವ ಎನ್ನಲಾಗಿದೆ.
ಪ್ರೀತಿ ಹೆಸರಿನಲ್ಲಿ ಆತ ಆ ಹುಡುಗಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆತನನ್ನು ನವೆಂಬರ್ 1ರಂದು ಬಂಧಿಸಲಾಗಿದೆ. ಅದೇ ರಾತ್ರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಣಾಮ ಆತನ ಬಲಗಾಲನ್ನು ಕಟ್ ಮಾಡಲಾಗಿದೆ.
ಆನಂದ್ ಮಹೀಂದ್ರಾ ಭರವಸೆ
ಆಕೆಯ ಓದಿಗೆ ಸಹಾಯ ಮಾಡಲು ಆನಂದ್ ಮಹೀಂದ್ರ ಒಪ್ಪಿಗೆ ನೀಡಿ ಒಳ್ಳೆಯ ಮಾತುಗಳನ್ನೂ ಹೇಳಿದ್ದಾರೆ. ಭಯ ಇಲ್ಲದಿರುವುದೇ ಧೈರ್ಯ ಅಲ್ಲ. ಇನ್ನೊಬ್ಬರಿಗಾಗಿ ಭಯವನ್ನು ಮರೆತು ಮುಂದಾಗುವುದೇ ನಿಜವಾದ ಧೈರ್ಯ. ಆಕೆ ನಿಜಕ್ಕೂ ಅಸಾಧಾರಣ ಹುಡುಗಿ ಎಂದು 10ನೇ ತರಗತಿ ವಿದ್ಯಾರ್ಥಿಯನ್ನು ಕೊಂಡಾಡಿದ್ದಾರೆ.
ತಾವು ಸಹಾಯ ಮಾಡುವ ಬಗ್ಗೆ ಆಂಧ್ರ ಪ್ರದೇಶ ಶಾಸಕ ಲೋಕೇಶ್ ನಾರಾ ಅವರನ್ನೂ ಟ್ಯಾಗ್ ಮಾಡಿದ್ದಾರೆ.ಲೋಕೇಶ್ ನಾರಾ ಆನಂದ್ ಮಹೀಂದ್ರ ಅವರಿಗೆ ಧನ್ಯವಾದ ಹೇಳಿದ್ದಾರೆ. ಲಕ್ಷ್ಮಿ ತನ್ನ ಪ್ರಾಣದ ಹಂಗು ತೊರೆದು ಸ್ನೇಹಿತೆಯನ್ನು ಕಾಪಾಡಿ ಅಪ್ರತಿಮ ಧೈರ್ಯ ತೋರಿದ್ದಾಳೆ. ನನ್ಹಿ ಕಲಿ ಫೌಂಡೇಶನ್ ಆಕೆಯ ಕನಸುಗಳಿಗೆ ಬೆಂಬಲ ನೀಡುತ್ತಿರುವುದು ಸಂತೋಷ ಎಂದು ನಾರಾ ಲೋಕೇಶ್ ತಿಳಿಸಿದ್ದಾರೆ.














