ಬಿಹಾರ:ಆರ್‌ಜೆಡಿ ಸಚಿವರಿಗೆ ಹೊಸ ಕಾರು ಖರೀದಿಗೆ ಕೊಕ್
ಬಿಹಾರ ಸಚಿವ ಸಂಪುಟದಲ್ಲಿರುವ ಆರ್‌ಜೆಡಿಯ 31 ಸಚಿವರು ಹೊಸ ಕಾರು ಖರೀದಿಸುವಂತಿಲ್ಲ ಎಂಬುದು ಸೇರಿದಂತೆ 6 ನಿಯಮಾವಳಿಗಳನ್ನು ಪಾಲಿಸುವಂತೆ ಪಕ್ಷದ ಹಿರಿಯ ನಾಯಕ ತೇಜಸ್ವಿ ಯಾದವ್ ಸಚಿವರಿಗೆ ಸೂಚನೆ ನೀಡಿದ್ದಾರೆ
ಪಟನಾ: ಬಿಹಾರ ಸಚಿವ ಸಂಪುಟದಲ್ಲಿರುವ ಆರ್‌ಜೆಡಿಯ 31 ಸಚಿವರು ಹೊಸ ಕಾರು ಖರೀದಿಸುವಂತಿಲ್ಲ ಎಂಬುದು ಸೇರಿದಂತೆ 6 ನಿಯಮಾವಳಿಗಳನ್ನು ಪಾಲಿಸುವಂತೆ ಪಕ್ಷದ ಹಿರಿಯ ನಾಯಕ ತೇಜಸ್ವಿ ಯಾದವ್ ಸಚಿವರಿಗೆ ಸೂಚನೆ ನೀಡಿದ್ದಾರೆ. ಹೊಸ ಸಚಿವರು ನೂತನ ಕಾರು ಖರೀದಿಸುವಂತಿಲ್ಲ. ತಮ್ಮನ್ನು ಯಾರೇ ಭೇಟಿಯಾಗಲು ಬಂದರೂ ಅವರನ್ನು ನಮಸ್ತೆ, ಆದಾಬ್ ಎಂದು ಹೇಳಿ ಸ್ವಾಗತಿಸಬೇಕು. ಅವರ ದೂರು ದುಮ್ಮಾನಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಜಾತಿ, ಹಣದ ಆಧಾರದ ಮೇಲೆ ಯಾರಿಗೂ ತಾರತಮ್ಯ ಮಾಡಬಾರದು. ತಮ್ಮನ್ನು ಭೇಟಿ ಮಾಡಲು ಬಂದವರಿಗೆ ಹೂವಿನ ಹಾರ, ಹೂಗುಚ್ಛದ ಬದಲು ಪುಸ್ತಕ, ಪೆನ್ ನೀಡುವುದನ್ನು ಪ್ರೋತ್ಸಾಹಿಸಬೇಕು. ಯಾರಿಗೂ ಕಾಲು ಮುಟ್ಟಿ ನಮಸ್ಕಾರ ಮಾಡಲು ಅವಕಾಶ ನೀಡಬಾರದು. ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತೇಜಸ್ವಿ ಸೂಚಿಸಿದ್ದಾರೆ.
ಜೊತೆಗೆ ತಮ್ಮ ಇಲಾಖೆಯಲ್ಲಿ ಕೈಗೊಂಡ ಕಾರ್ಯಕ್ರಮಗಳು ಜನರಿಗೆ ಶೀಘ್ರ ತಲುಪುವಂತಾಗಲು ಮತ್ತು ಜಾರಿಗೊಳಿಸಿದ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸರ್ಕಾರಿ ಸಭೆಗಳಲ್ಲಿ ಲಾಲು ಅಳಿಯ
ಬಿಹಾರದಲ್ಲಿ ಆರ್‌ಜೆಡಿ ಜೊತೆ ಸೇರಿ ಜೆಡಿಯು ಸರ್ಕಾರ ರಚನೆ ಮಾಡಿದ ದಿನದಿಂದ ಒಂದಲ್ಲಾ ಒಂದು ವಿವಾದಗಳು ಮೇಲೇಳುತ್ತಿದೆ. ಕ್ರಿಮಿನಲ್ ಕೇಸ್‌ಗಳನ್ನು ಹೊಂದಿರುವ ವ್ಯಕ್ತಿ ಬಿಹಾರದ ಕಾನೂನು ಸಚಿವರಾಗಿರುವ ಬೆನ್ನಲ್ಲಿಯೇ ಸರ್ಕಾರಿ ಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಅಳಿಯ ಭಾಗಿಯಾಗಿರುವುದು ವಿವಾದ ಸೃಷ್ಟಿಸಿದೆ. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ತಡ, ಸರ್ಕಾರಿ ಸಭೆಗಳಲ್ಲಿ ಲಾಲು ಪ್ರಸಾದ್ ಅಳಿಯನೂ ಅಕ್ರಮವಾಗಿ ಭಾಗವಹಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಬಿಹಾರ ಸರ್ಕಾರದಲ್ಲಿ ಲಾಲೂ ದರ್ಬಾರ್, ಸರ್ಕಾರಿ ಸಭೆಯಲ್ಲಿ ಹಿರಿಯ ಅಳಿಯ ಭಾಗಿ!
ಲಾಲು ಹಿರಿಯ ಪುತ್ರ ಪರಿಸರ, ಅರಣ್ಯ ಸಚಿವ ತೇಜ್‌ಪ್ರತಾಪ್ ಯಾದವ್ ಅವರು ನೇತೃತ್ವ ವಹಿಸಿದ 2 ಸರ್ಕಾರಿ ಸಭೆಗಳಲ್ಲೂ ಲಾಲು ಅಳಿಯ ಭಾಗವಹಿಸಿದ್ದಾರೆ. ಲಾಲು ಪುತ್ರಿ, ರಾಜ್ಯಸಭಾ ಸಂಸದೆಯಾಗಿರುವ ಮಿಸಾ ಭಾರತಿಯ ಪತಿ ಶೈಲೇಶ್ ಕುಮಾರ್ ಜು. 17ರಂದು ಸರ್ಕಾರಿ ಸಭೆಗಳ ಕೊನೆಯ ಸಾಲಿನಲ್ಲಿ ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಲ್ಲದೇ ಜು. 18ರಂದು ನಡೆದ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲೂ ಅವರು ತೇಜ್‌ಪ್ರತಾಪ್ ಪಕ್ಕ ಕುಳಿತಿರುವುದು ಕಂಡು ಬಂದಿದೆ.
ಬಿಹಾರ ಸರ್ಕಾರದ ಶೇ.72ರಷ್ಟು ಸಚಿವರ ಮೇಲೆ ಕ್ರಿಮಿನಲ್ ಕೇಸ್, ಎಡಿಆರ್ ವರದಿ!
ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತೇಜ್ ಪ್ರತಾಪ್ ವಿವಾದಗಳಿಂದಾಗಿಯೇ ಸುದ್ದಿಯಲ್ಲಿದ್ದವರು. ಈಗ ಸಚಿವರಾಗಿಯೂ ತಮ್ಮ ಕೆಲಸಕ್ಕಾಗಿ ತಮ್ಮ ಭಾವನನ್ನು ಗುತ್ತಿಗೆ ಪಡೆದುಕೊಂಡಿದ್ದಾರೆಎಂದು ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಕಿಡಿಕಾರಿದ್ದಾರೆ. ಬಿಹಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅದರಲ್ಲೂ ಲಾಲು ಅಳಿಯ ಹೊಸ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುವುದು ಖಂಡನೀಯ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.