ಬಿಹಾರದಲ್ಲಿ ಆರ್‌ಜೆಡಿ ಜೊತೆ ಸೇರಿ ಜೆಡಿಯು ಸರ್ಕಾರ ರಚನೆ ಮಾಡಿದ ದಿನದಿಂದ ಒಂದಲ್ಲಾ ಒಂದು ವಿವಾದಗಳು ಮೇಲೇಳುತ್ತಿದೆ. ಕ್ರಿಮಿನಲ್‌ ಕೇಸ್‌ಗಳನ್ನು ಹೊಂದಿರುವ ವ್ಯಕ್ತಿ ಬಿಹಾರದ ಕಾನೂನು ಸಚಿವರಾಗಿರುವ ಬೆನ್ನಲ್ಲಿಯೇ ಸರ್ಕಾರಿ ಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್‌ ಅವರ ಹಿರಿಯ ಅಳಿಯ ಭಾಗಿಯಾಗಿರುವುದು ವಿವಾದ ಸೃಷ್ಟಿಸಿದೆ.

ಪಾಟ್ನಾ (ಆ.19): ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾದ ಬೆನ್ನಲ್ಲಿಯೇ ವಿವಾದಗಳು ಆರಂಭವಾಗಿದ.ೆ ಇದೀಗ ಲಾಲು ಪ್ರಸಾದ್‌ ಯಾದವ್ ಅವರ ಹಿರಿಯ ಅಳಿಯ, ಪುತ್ರಿ ಮಿಸಾ ಭಾರತಿಯ ಪತಿ ಶೈಲೇಶ್ ಕುಮಾರ್ ಬಗ್ಗೆ ಹೊಸ ವಿವಾದ ಶುರುವಾಗಿದೆ. ಅವರು ತಮ್ಮ ಭಾವ ಮತ್ತು ಅರಣ್ಯ ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಅವರೊಂದಿಗೆ ಸರ್ಕಾರಿ ಸಭೆಯಲ್ಲಿ ಕಾಣಿಸಿಕೊಂಡರು. ಇದಕ್ಕೂ ಮುನ್ನ ಕಾನೂನು ಸಚಿವರ ವಿರುದ್ಧ ಪ್ರಕರಣ, ನಂತರ ಶಿಕ್ಷಣ ಸಚಿವರ ಹೇಳಿಕೆ ಕೂಡ ಸರ್ಕಾರದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಗುರುವಾರ ಸಚಿವ ತೇಜ್ ಪ್ರತಾಪ್ ಯಾದವ್ ಬಿಹಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗೆ ಬಂದಿದ್ದಲ್ಲದೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಶೈಲೇಶ್ ಕುಮಾರ್ ಕೂಡ ಕುಳಿತಿರುವುದು ಕಂಡುಬಂದಿದೆ. ಕೆಲ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ದೃಶ್ಯವೂ ಕಂಡುಬಂತು. ಈ ಸಭೆಯ ವೀಡಿಯೋ ಮತ್ತು ಚಿತ್ರ ಹೊರಬೀಳುತ್ತಿದ್ದಂತೆಯೇ ವಿವಾದ ತಾರಕಕ್ಕೇರಿದೆ. ಬಿಹಾರ ಸರ್ಕಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಅವರ ಸರ್ಕಾರ ಆರಂಭವಾಗಿರುವ ಲಕ್ಷಣ ಇದಾಗಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದೆ. ಸರ್ಕಾರಿ ಸಭೆಯಲ್ಲಿ ಲಾಲೂ ಪ್ರಸಾದ್‌ ಅವರ ಅಳಿಯ ಭಾಗವಹಿಸಿದ್ದಲ್ಲದೆ, ಅಧಿಕಾರಿಗಳಿಗೆ ಪ್ರಶ್ನೆ ಮಾಡುವ ಅಧಿಕಾರ ಏನಿದೆ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡಿದೆ.

ಇದರ ನಡುವೆ ಶೈಲೇಶ್‌ ಕುಮಾರ್‌ ಅವರನ್ನು ಖಾಸಗಿ ಕಾರ್ಯದರ್ಶಿ ಮಾಡಲಾಗಿದೆಯೇ ಎಂಬ ಪ್ರಶ್ನೆ ಕೂಡ ಏಳುತ್ತಿದೆ. ಆಡಳಿತ ಮಂಡಳಿ ಸಭೆಯಲ್ಲಿ ಲಾಲು ಪ್ರಸಾದ್ ಅವರ ಹಿರಿಯ ಅಳಿಯ ಕೂರುವ ಅಗತ್ಯವೇನು ಎಂದು ಪ್ರತಿಪಕ್ಷಗಳು ಪ್ರಶ್ನೆ ಮಾಡಿವೆ. ಇದಕ್ಕೆ ಸಚಿವರು ಉತ್ತರ ನೀಡಲೇಬೇಕು. ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಭಾವ ಶೈಲೇಶ್ ಕುಮಾರ್ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ಇಟ್ಟುಕೊಂಡಿದ್ದರೆ ಮಾತ್ರವೇ ಅವರು ಈ ಸಭೆಗೆ ಹಾಜರಾಗಬಹುದು. ಆದರೆ, ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಈವರೆಗೂ ಯಾವುದೇ ಮಾಹಿತಿಯನ್ನು ಸರ್ಕಾರ ನೀಡಿಲ್ಲ ಎಂದು ಕಿಡಿಕಾರಿದೆ.

ಭಾವನ ಆಶೀರ್ವಾದ ತೇಜ್‌ ಪ್ರತಾಪ್‌ ಮೇಲೆ ಇರಲಿದೆ: ಈ ವಿಚಾರದಲ್ಲಿ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ, ಸಚಿವ ತೇಜ್‌ ಪ್ರತಾಪ್‌ಗೆ ಭಾವನ ಆಶೀರ್ವಾದ ಖಂಡಿತ ಇರಲಿದೆ ಎಂದು ವ್ಯಂಗ್ಯವಾಗಿದೆ. ತೇಜ್‌ ಪ್ರತಾಪ್‌ ಅವರ ಜೊತೆ ಅರಣ್ಯ ಹಾಗೂ ಪರಿಸರ ಇಲಾಖೆಯನ್ನು ಅವರ ಭಾವ ಶೈಲೇಶ್‌ ಕುಮಾರ್‌ ಕೂಡ ನೋಡಿಕೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರ ನಿಖಿಲ್‌ ಆನಂದ್‌ ಹೇಳಿದ್ದಾರೆ. ಇದು ಸಣ್ಣ ವಿಚಾರವಲ್ಲ. ಶೈಲೇಶ್‌ ಅವರು ಸಂಸದೆ ಮಿಸಾ ಭಾರ್ತಿಯ ಪತಿ. ಅವರು ಜ್ಞಾನದ ಭಂಡಾರ. ಬಿಹಾರ ಸರ್ಕಾರದಲ್ಲಿರುವ ಎಲ್ಲಾ ಸಚಿವರಿಗಿಂತ ಅವರಿಗೆ ಹೆಚ್ಚಿನ ಜ್ಞಾನವಿದೆ. ಶೈಲೇಶ್‌ ಕುಮಾರ್‌ ಅವರ ಆಶೀರ್ವಾದ ಇದ್ದಲ್ಲಿ ಮಾತ್ರವೇ ತೇಜ್‌ ಪ್ರತಾಪ್‌ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.

ನಿತೀಶ್‌ ಕುಮಾರ್‌ ಫಾರಿನ್‌ ಹುಡ್ಗಿ ಥರ, ಯಾರ ಕೈ ಹಿಡೀತಾರೆ, ಯಾರ ಬಿಡ್ತಾರೆ ಅನ್ನೋದು ಗೊತ್ತಾಗಲ್ಲ: ಬಿಜೆಪಿ ಮುಖಂಡ

ಇಂಜಿನಿಯರ್‌ ಆಗಿರುವ ಶೈಲೇಶ್‌: ಮಿಸಾ ಭಾರತಿಯ ಪತಿ ಶೈಲೇಶ್‌ ಮೂಲತಃ ಇಂಜಿನಿಯರ್‌. ಬಿಹಾರದ ಪಾಟ್ನಾದ ಬಿಹ್ತಾ ಅವರ ಮೂಲ. 1999ರಲ್ಲಿ ಮಿಸಾ ಭಾರತಿಯನ್ನು ವಿವಾಹವಾಗಿದ್ದಾರೆ. ಶೈಲೇಶ್‌ ಅವರ ತಂದೆ ರಾಮ್‌ ಬಾಬು ಪಾಥಿಕ್‌ ಬ್ಯಾಂಕ್‌ ನೌಕರರಾಗಿದ್ದರು. ಇನ್ಫೋಸಿಸ್‌ನಲ್ಲಿ ಶೈಲೇಶ್‌ ಕೆಲಸ ಮಾಡಿದ್ದರು. ಮದುವೆಯ ಬಳಿಕ ಕೆಲಸ ಬಿಟ್ಟು ಹೆಂಡತಿ ಜೊತೆ ರಾಜಕಾರಣಕ್ಕೆ ಇಳಿದಿದ್ದರು. ಆರ್‌ಜೆಡಿ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಲ್ಲದೆ, ಪಕ್ಷದ ಸೋಷಿಯಲ್‌ ಮೀಡಿಯಾ ಪೇಜ್‌ ಅನ್ನು ನೋಡಿಕೊಳ್ಳುತ್ತಿದ್ದಾರೆ.

ಬಿಹಾರ ಸರ್ಕಾರದ ಶೇ.72ರಷ್ಟು ಸಚಿವರ ಮೇಲೆ ಕ್ರಿಮಿನಲ್‌ ಕೇಸ್‌, ಎಡಿಆರ್‌ ವರದಿ!

ಜಿತಿನ್‌ ರಾಮ್‌ ಮಾಂಜಿಗೂ ಎದುರಾಗಿತ್ತು ಸಂಕಷ್ಟ: ಇದಕ್ಕೂ ಮುನ್ನ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತಿನ್‌ ರಾಮ್‌ ಮಾಂಜಿ ಕೂಡ ಇದೇ ವಿಚಾರದಲ್ಲಿ ವಿವಾದ ಮಾಡಿಕೊಂಡಿದ್ದರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತನ್ನ ಅಳಿಯನ್ನು ಸರ್ಕಾರದಲ್ಲಿ ಇರಿಸಿಕೊಂಡಿದ್ದರು. ಇದು ದೊಡ್ಡ ವಿವಾದವಾದ ಬಳಿಕ, ಅವರನ್ನು ತೆಗೆದುಹಾಕಲಾಗಿತ್ತು.