Gujarat Elections 2022 ಪತ್ನಿ ರಿವಾಬ ಪರ ಪ್ರಚಾರ ಆರಂಭಿಸಿದ ರವೀಂದ್ರ ಜಡೇಜಾ; ಮೋದಿ ಭೇಟಿ ಮಾಡಿದ ತಾರಾ ಕ್ರಿಕೆಟಿಗ!
ಗುಜರಾತ್‌ನಲ್ಲಿ ಜೋರಾಯ್ತು ಚುನಾವಣಾ ಕಾವು
ಪತ್ನಿ ರಿವಾಬ ಪರ ಚುನಾವಣಾ ಪ್ರಚಾರಕ್ಕೆ ಧುಮುಕಿದ ರವೀಂದ್ರ ಜಡೇಜಾ
ರವೀಂದ್ರ ಜಡೇಜಾಗೆ ಸಾಥ್ ನೀಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ(ನ.29): ಪ್ರತಿಯೊಬ್ಬರ ಜೀವನದಲ್ಲಿ ರಾಜಕೀಯ ಎನ್ನುವುದು ತನ್ನದೇ ಆದ ಪಾತ್ರವನ್ನು ನಿಭಾಯಿಸುತ್ತಲೇ ಬಂದಿದೆ. ಅದು ಕ್ರಿಕೆಟಿಗರನ್ನೂ ಹೊರತಾಗಿಲ್ಲ. ಅದರಲ್ಲೂ ಹಾಲಿ ಕ್ರಿಕೆಟರ್ ಪತ್ನಿಯೊಬ್ಬರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರೆ ಅದಕ್ಕಿರುವ ಕುತೂಹಲ ಮತ್ತಷ್ಟು ಜೋರಾಗುತ್ತದೆ. ಇದೀಗ ಅಂತಹದ್ದೇ ಪರಿಸ್ಥಿತಿಯೊಂದು ನಿರ್ಮಾಣವಾಗಿದ್ದು ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಪತ್ನಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇದೀಗ ಜಡ್ಡು, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ.
ಹೌದು, 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರ ಜಡೇಜಾ ಪತ್ನಿ ರಿವಾಬ ಜಡೇಜಾ, ಜಾಮ್‌ನಗರ್(ಉತ್ತರ) ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ರಿವಾಬ ಜಡೇಜಾ 2019ರಿಂದಲೇ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಕೊಟ್ಟಿದ್ದು, ಇದೀಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿಪೇಂದ್ರಸಿಂಗ್ ಜಡೇಜಾ ಹಾಗೂ ಆಮ್ ಆದ್ಮಿ ಪಕ್ಷದ ಕರ್ಸಾನ್ ಕರ್ಮುರ್ ಎದುರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪತ್ನಿಗೆ ಬಿಜೆಪಿ ಟಿಕೆಟ್: ಪ್ರಧಾನಿ ಮೋದಿ, ಅಮಿತ್ ಶಾಗೆ ರವೀಂದ್ರ ಜಡೇಜಾ ಧನ್ಯವಾದ
ಇದೀಗ ತಮ್ಮ ಪತ್ನಿಯನ್ನು ಗೆಲ್ಲಿಸಲು ರವೀಂದ್ರ ಜಡೇಜಾ, ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಇವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಥ್ ನೀಡಿದ್ದಾರೆ. ಈ ಕುರಿತಂತೆ ರವೀಂದ್ರ ಜಡೇಜಾ, ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, 'ದೇಶದ ಹೆಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ. ರವೀಂದ್ರ ಜಡೇಜಾ ಅವರ ಕುಟುಂಬ ರಿವಾಬ ಅವರ ಗೆಲುವನ್ನು ಎದುರು ನೋಡುತ್ತಿದೆ.
ಈ ಬಾರಿಯ ಗುಜರಾತ್ ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದಾರೆ. ಹಲವು ಚುನಾವಣಾ ಸಮೀಕ್ಷೆಗಳು ಈ ಬಾರಿ ಕೂಡಾ ಎಎಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
ಡೆಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು, ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಗುಜರಾತ್‌ನಲ್ಲೂ ಮ್ಯಾಜಿಕ್ ಮಾಡಲು ಆಮ್ ಆದ್ಮಿ ಪಕ್ಷವು ಸರ್ಕಸ್ ಮಾಡುತ್ತಿದೆ. ಇನ್ನು ಗುಜರಾತ್‌ನಲ್ಲಿ ಅಧಿಕಾರ ಹಿಡಿಯಲು ಹಲವು ಪಕ್ಷಗಳ ಮುಖಂಡರು ಹಲವು ರೀತಿಯಲ್ಲಿ ನಾನಾ ರೀತಿಯ ಪ್ರಚಾರಗಳು ನಡೆಸುತ್ತಿದ್ದಾರೆ. ಗುಜರಾತ್‌ನಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ. ಗುಜರಾತ್‌ನಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯು ಡಿಸೆಂಬರ್ 01ರಂದು ನಡೆಯಲಿದೆ. ರವೀಂದ್ರ ಜಡೇಜಾ ಪತ್ನಿ ರಿವಾಬ ಜಡೇಜಾ ಅವರು ಕೂಡಾ ಮೊದಲ ಹಂತದ ಚುನಾವಣೆಯಲ್ಲಿಯೇ ಅದೃಷ್ಟ ಪರೀಕ್ಷೆ ನಡೆಯಲಿದೆ. ಇನ್ನು ಎರಡನೇ ಹಂತದ ಚುನಾವಣೆಯು ಡಿಸೆಂಬರ್ 05ರಂದು ನಡೆಯಲಿದೆ. ಇನ್ನು ಡಿಸೆಂಬರ್ 08ರಂದು ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.