Sivakasi fire accident: ತಮಿಳುನಾಡಿನ ಶಿವಕಾಶಿಯಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದೂ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿರುದನಗರ ವೆಂಬಕೋಟೈ ಬಳಿಯ ಮತ್ತುಚಾಮಿಪುರಂನಲ್ಲಿ ಘಟನೆ ನಡೆದಿದೆ.
ಬೆಂಗಳೂರು (ಫೆ.17): ಮಧ್ಯಪ್ರದೇಶದ ಹರ್ದಾದ ಪಟಾಕಿ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದ ಸುದ್ದಿ ಮಾಸುವ ಮುನ್ನವೇ ದಕ್ಷಿಣ ಭಾರತದ ಪ್ರಮುಖ ಪಟಾಕಿ ಉತ್ಪನ್ನಗಳ ಕೇಂದ್ರವಾದ ತಮಿಳುನಾಡಿನ ಶಿವಕಾಶಿಯಲ್ಲಿ ಇದೇ ಮಾದರಿಯ ದುರಂತ ನಡೆದಿದೆ. ಈ ಪಟಾಕಿ ದುರಂತದಲ್ಲಿ ಹತ್ತು ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಪಟಾಕಿ ಸ್ಪೋಟಗೊಂಡಾಗ ಒಳಗೆ 10 ಜನ ಒಳಗೆ ಸಿಲುಕಿಕೊಂಡಿದ್ದರು. ಈ ಎಲ್ಲರೂ ಸಾವು ಕಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಮಿಳುನಾಡಿನ ವಿರುದನಗರದ ವೆಂಬಕೋಟೈ ಬಳಿಯ ಮತ್ತುಚಾಮಿಪುರಂನಲ್ಲಿ ಘಟನೆ ನಡೆದಿದೆ. ಮೃತರನ್ನು ಅಂಬಿಕಾ, ಮುರುಗ, ಜ್ಯೋತಿ, ಮುತ್ತು ಸೇರಿ ಹತ್ತು ಜನರು ಎನ್ನುವುದು ಪತ್ತೆಯಾಗಿದೆ. ಸ್ಪೋಟಕಗಳ ಘರ್ಷಣೆಯಿಂದಾಗಿ ನಡೆದ ದುರಂತ ಸಂಭವಿಸಿದೆ. ವಿಘ್ನೇಶ್ ಎಂಬುವರಿಗೆ ಸೇರಿದ ಪಟಾಕಿ ಕಾರ್ಖಾನೆ ಇದಾಗಿದ್ದು, ಘಟನೆಯಲ್ಲಿ ಐವರು ಮಹಿಳೆಯರು ಹಾಗೂ ಐವರು ಪುರುಷರು ಸಾವು ಕಂಡಿದ್ದಾರೆ. ಗಂಭೀರ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಕಾಶಿ ಸರ್ಕಾರಿ ಆಸ್ಪತ್ರೆಯಲ್ಲೂ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಮೂಲಗಳ ಪ್ರಕಾರ ಇನ್ನು 10 ಮಂದಿ ಒಳಗೆ ಸಿಲುಕಿರುವ ಶಂಕೆ ಇದೆ.
ಪರಿಹಾರ ಘೋಷಣೆ ಮಾಡಿದ ಪ್ರಧಾನಿ: ವಿರುದುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ನಡೆದ ಅನಾಹುತದ ಬಗ್ಗೆ ಬಹಳ ನೋವಾಗಿದೆ. ಈ ಕಷ್ಟದ ಸಮಯದಲ್ಲಿ, ನಾನು ದಾರುಣವಾಗಿ ಸಾವು ಕಂಡ ವ್ಯಕ್ತಿಗಳ ಕುಟುಂಬದ ಜೊತೆಗಿದೆ. ಗಾಯಗೊಂಡಿರುವ ಎಲ್ಲರೂ ಶೀಘ್ರ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಪಿಎಂಎನ್‌ಆರ್‌ಎಫ್ ಡಿಯಲ್ಲಿ ಸಾವು ಕಂಡ ವ್ಯಕ್ತಿಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ.
