ತಮಿಳುನಾಡಲ್ಲಿ ನಿಲ್ಲದ ಮಳೆಯಬ್ಬರ: ಸಚಿವರ ಮೇಲೆ ಕೆಸರೆರಚಿದ ಜನ
ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಚಿವರ ಮೇಲೆ ಕೆಸರು ಎರಚಿದ ಘಟನೆ ನಡೆದಿದೆ. ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಚೆನ್ನೈ: ಫೆಂಗಲ್ ಚಂಡಮಾರುತ ಶಕ್ತಿಗುಂದಿದ್ದರೂ ತಮಿಳುನಾಡಿನಾದ್ಯಂತ 3ನೇ ದಿನವಾದ ಮಂಗಳವಾರವೂ ಭರ್ಜರಿ ಮಳೆ ಮುಂದುವರಿದಿದ್ದು ರಾಜ್ಯಾದ್ಯಂತ ಜನಜೀವನ, ರೈಲು ಸೇರಿ ಪ್ರಮುಖ ಸಾರಿಗೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ತಮಿಳುನಾಡಿನಲ್ಲಿ ಗುಡ್ಡಕುಸಿತ ಸೇರಿ ಮಳೆ ಸಂಬಂಧಿ ಅನಾಹುತಕ್ಕೆ ಈಗಾಗಲೇ 12 ಮಂದಿ ಬಲಿಯಾಗಿದ್ದು, ಪ್ರವಾಹದಲ್ಲಿ ಸಂತ್ರಸ್ತರಾದವರ ರಕ್ಷಣೆಗೆ ಸೇನೆ ತನ್ನ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದೆ. ಭಾರೀ ಮಳೆಯಿಂದಾಗಿ ತಮಿಳುನಾಡಿನ 14 ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಒಟ್ಟಾರೆ ಮೂರ್ನಾಲ್ಕು ದಿನಗಳ ಮಳೆಗೆ 9,576 ಕಿ.ಮೀ. ರಸ್ತೆ, 23,664 ವಿದ್ಯುತ್ ಕಂಬಗಳು, 997 ಟ್ರಾನ್ಸ್‌ಫಾರ್ಮರ್‌ಗಳು, 2,416 ಹಟ್ಟಿಗಳು, 721 ಮನೆಗಳು ಹಾನಿಗೀಡಾಗಿದ್ದರೆ, 963 ಜಾನುವಾರುಗಳು ಮೃತಪಟ್ಟಿವೆ. 1,650 ಪಂಚಾಯತ್ ಕಟ್ಟಡಗಳು, 4269 ಅಂಗನವಾಡಿ ಕಟ್ಟಡಗಳು, 205 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಹಾನಿ ಸಂಭವಿಸಿದೆ.
ಇದೇ ವೇಳೆ ಮತ್ತೆ ತಮಿಳುನಾಡಿನಲ್ಲಿ ಕನಿಷ್ಠ 15 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೋದಿ ಭರವಸೆ:
ಪ್ರಧಾನಿ ಮೋದಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಸಾಧ್ಯವಾದ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ನಡುವೆ, ಚಂಡಮಾರುತದಿಂದಾದ ಹಾನಿ ಕುರಿತು ಮುಖ್ಯಮಂತ್ರಿ ಸ್ಟಾಲಿನ್ ಅವರು ಕ್ಯಾಬಿನೆಟ್ ಸಭೆ ನಡೆಸಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಚಂಡಮಾರುತದ ಪ್ರಭಾವದಿಂದಾಗಿ 69 ಲಕ್ಷ ಕುಟುಂಬಗಳು ಸಂಕಷ್ಟದಲ್ಲಿದ್ದು, ಎನ್‌ಡಿಆರ್‌ಎಫ್‌ನಡಿ ತಕ್ಷಣ ಸುಮಾರು 2 ಸಾವಿರ ಕೋಟಿ ರು.ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮನವಿ ಕೂಡ ಮಾಡಿದೆ.
ಏತನ್ಮಧ್ಯೆ, ಮಳೆಯಿಂದಾಗಿ ಭಾರೀ ಅತಿಹೆಚ್ಚು ಹಾನಿಗೀಡಾಗಿರುವ ವಿಲ್ಲುಪುರಂ, ಕುಡಲೋರ್ ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಸಂತ್ರಸ್ತರಾಗಿರುವವರಿಗೆ ಹಣದ ರೂಪದ ಪರಿಹಾರವಾಗಿ ತಲಾ 2 ಸಾವಿರ ನೀಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಸಚಿವರ ಮೇಲೆ ಕೆಸರೆರಚಿದ ಜನರು!
ಚೆನ್ನೈ: ಮಳೆಹಾನಿ ಪರಿಶೀಲನೆ ವೇಳೆ ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ಅವರ ಮೇಲೆ ವಿಲ್ಲುಪುರಂ ಜಿಲ್ಲೆಯ ಇರುಎವೆಲ್‌ಪಟ್ಟು ಪ್ರದೇಶದಲ್ಲಿ ಕೆಸರೆರಚಿದ ಪ್ರಸಂಗ ನಡೆದಿದೆ.
ಪರಿಹಾರ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ತಿರುಚಿನಾಪಳ್ಳಿ-ಚೆನ್ನೈ ರಸ್ತೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಸಚಿವರು ಕಾರಿನಲ್ಲೇ ಕೂತು ಸಮಸ್ಯೆ ಆಲಿಸುತ್ತಿದ್ದಾರೆಂದು ಆರೋಪಿಸಿ ಕೆಲವರು ಕೆಸರೆರಚಿದ್ದಾರೆ.
ಈ ಕುರಿತ ವಿಡಿಯೋವನ್ನು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಚಿವರಿಗೆ ಕೆಸರಿನ ಸ್ವಾಗತ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೆಷ್ಟು ದಿನ ಫೆಂಗಲ್ ಮಳೆ ಅಬ್ಬರ? ಸೈಕ್ಲೋನ್ ಸೃಷ್ಟಿಯಾಗುವುದು ಹೇಗೆ?
ಇದನ್ನೂ ಓದಿ:ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಫೆಂಗಲ್ ಅವಾಂತರರ: ಮುಂದಿನ 72 ಗಂಟೆ ತೀರಾ ಭಯಂಕರ!