ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೆಷ್ಟು ದಿನ ಫೆಂಗಲ್ ಮಳೆ ಅಬ್ಬರ? ಸೈಕ್ಲೋನ್ ಸೃಷ್ಟಿಯಾಗುವುದು ಹೇಗೆ?
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಜೋರಾಗಿನೇ ಆರ್ಭಟಿಸುತ್ತಿದೆ. ಇದರ ಪರಿಣಾಮ ಪುದುಚೇರಿ ಸೇರಿದಂತೆ ಹಲವೆಡೆ ದಾಖಲೆ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಕಡೆಗಳಲ್ಲಿ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಈ ಸೈಕ್ಲೋನ್ ಸೃಷ್ಟಿ ಹೇಗಾಗುತ್ತೆ? ಇದಕ್ಕೆ ಕಾರಣವೇನು? ಸೈಕ್ಲೋನ್ ಕಾಣಿಸಿಕೊಳ್ಳುತ್ತಿದ್ದಂತೆ ಹೆಚ್ಚಿನ ಮಳೆಯಾಗುವುದೇಕೆ? ವಿಪರೀಚ ಚಳಿಯಾಗುವುದೇಕೆ?
ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡು ಸೈಕ್ಲೋನ್ ಸುಳಿಯಲ್ಲಿ ಸಿಲುಕಿದೆ. ಫೆಂಗಲ್ ಎಫೆಕ್ಟ್ಗೆ ತಮಿಳುನಾಡು ಕಂಪ್ಲೀಟ್ ಲಾಕ್ ಆಗಿದೆ. ಶನಿವಾರ 16 ಗಂಟೆಗಳ ಕಾಲ ಚೆನ್ನೈ ಏರ್ ಪೋರ್ಟ್ ಬಂದ್ ಆಗಿತ್ತು. ಪುದುಚೇರಿ ಸೇರಿದಂತೆ ಕೆಲವೆಡೆ 48 ಸೆ.ಮೀ ದಾಖಲೆಯ ಮಳೆಯಾಗಿದೆ. ಹೆಚ್ಚು ಮಳೆಯಾದ ಕಡೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇದೆ. ಒಟ್ಟಿನಲ್ಲಿ ಕಳೆದ ವಾರ ಶ್ರೀಲಂಕಾದಲ್ಲಿ ಅಬ್ಬರಿಸಿದ್ದ ಫೆಂಗಲ್ ಸೈಕ್ಲೋನ್ ಕಳೆದ ಮೂರ್ನಾಲ್ಕು ದಿನಗಳಿಂದ ತಮಿಳುನಾಡಿನಲ್ಲಿ ಇನ್ನಿಲ್ಲದಂತೆ ಆರ್ಭಟಿಸುತ್ತಿದೆ.
ಚಂಡಮಾರುತಗಳ ಭಯಾನಕ ಸ್ವರೂಪಕ್ಕೆ ಗಾಳಿ ವೇಗ ಕಾರಣ
ಹೌದು ಚಂಡಮಾರುಗಳ ಭಯಾನಕ ಸ್ವರೂಪಕ್ಕೆ ಪ್ರಮುಖವಾಗಿ ಗಾಳಿ ಕಾರವಾಗಿದೆ. ಅದು ಹೇಗೆ ಅಂತೀರಾ? ಇಡೀ ಭೂಮಂಡಲ ಗಾಳಿಯಿಂದ ಆವೃತವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಭೂಮಿಯನ್ನು ಗಾಳಿ ಆವರಿಸಿಕೊಳ್ಳದಿದ್ದರೆ ನಾವೆಲ್ಲ ಬದುಕಿರೋದಕ್ಕೆ ಸಾಧ್ಯವಿರಲಿಲ್ಲ. ಭೂಮಿ ಮೇಲೆ ಬೀಸುವ ಗಾಳಿ ತನ್ನ ಮೂಲ ಸ್ವರೂಪದಲ್ಲಿ ಬೀಸುತ್ತಿದ್ದರೆ ಯಾವುದೇ ಸಮಸ್ಯೆಗಳಿರೋದಿಲ್ಲ. ಆದ್ರೆ ಮೂಲ ಸ್ವರೂಪ ದಾಟಿ ಹೆಚ್ಚಿನ ವೇಗವಾಗಿ ಬೀಸಿದರೆನೇ ಮನುಕುಲಕ್ಕೆ ಆಪತ್ತು ಎದುರಾಗೋದು. ಹಾಗಿದ್ರೆ ಒಂದು ವರ್ಷಕ್ಕೆ ಎಷ್ಟು ಚಂಡಮಾರುತಗಳು ಸೃಷ್ಟಿಯಾಗುತ್ತವೆ ಎಂದು ನೋಡೋದಾದ್ರೆ, ಜಗತ್ತಿನಲ್ಲಿರುವ ಎಲ್ಲ ಸಮದ್ರಗಳಿಂದ ಒಂದು ವರ್ಷಕ್ಕೆ ಸುಮಾರು 80 ಚಂಡಮಾರುತಗಳು ಸೃಷ್ಟಿಯಾಗುತ್ತವೆ. ಇದರಲ್ಲಿ ಕೆಲವೊಂದಿಷ್ಟು ಚಂಡಮಾರುತಗಳು ಕಾಣಿಸಿಕೊಳ್ಳುವ ಮುನ್ನವೇ ನಶೀಸಿಹೋಗುತ್ತವೆ. ಹಾಗೆನೇ ಭಾರತದಲ್ಲಿ ಒಂದು ವರ್ಷಕ್ಕೆ 6 ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ.
Cyclone Fengal
ಭೂಮಿ ಮೇಲೆ ಬೀಸುವ ಗಾಳಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ವೇಗವಾಗಿ ಬೀಸಲು ಆರಂಭಿಸಿದಾಗ ಚಂಡಮಾರುತಗಳ ಸೃಷ್ಟಿಯಾಗುತ್ತೆ. ಗಾಳಿ ಎಷ್ಟು ವೇಗದಲ್ಲಿ ಬೀಸುತ್ತೋ ಚಂಡಮಾರುತ ಅಷ್ಟು ಭಯಾನಕವಾಗಿರುತ್ತೆ. ಸಧ್ಯಕ್ಕೆ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ವೇಗ ಎಷ್ಟಿದೆ ಗೊತ್ತಾ? 70 ರಿಂದ 80 ಕಿ.ಮೀ ವೇಗದಲ್ಲಿದೆ. ಈ ವೇಗಕ್ಕೆನೇ ತಮಿಳುನಾಡಿ ತತ್ತರಿಸುತ್ತಿದೆ. ಇನ್ನು ನೂರು ಕಿ.ಮೀ ವೇಗಕ್ಕಿಂತ ಹೆಚ್ಚಿನ ಗಾಳಿ ಬೀಸಿದ್ರೆ ಪರಿಸ್ಥಿತಿ ಎಷ್ಟು ಗಂಭೀರ ಅನ್ನೋದನ್ನು ಊಹಿಸಿ. ಕಳೆದ ತಿಂಗಳು ಅಮೆರಿಕಾದಲ್ಲಿ ಇದೇ ಆಗಿತ್ತು. ಮಿಲ್ಟನ್ ಎಂಬ ಚಂಡಮಾರುತ ಅಮೆರಿಕಾದ ಕರಾವಳಿ ಪ್ರದೇಶವನ್ನು ಇನ್ನಿಲ್ಲದಂತೆ ಕಾಡಿತ್ತು. ಯಾಕೆಂದ್ರೆ ಈ ಮಿಲ್ಟನ್ ಚಂಡಮಾರುತ ಗಂಟೆಗೆ 160 ಕಿ.ಮೀ ವೇಗದಲ್ಲಿ ಅಮೆರಿಕಾ ಕರಾವಳಿಯನ್ನು ಕಾಡಿತ್ತು.
ವಾಯುಭಾರ ಕುಸಿತ ಆಗೋದೇಕೆ..?
ಸಧ್ಯಕ್ಕೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಫೆಂಗಲ್ ಸೈಕ್ಲೋನ್ ಕಾಣಿಸಿಕೊಂಡಿದೆ. ಸಮುದ್ರ ಮಟ್ಟದಲ್ಲಿ ಆಗುವ ವಾಯುಭಾರ ಕುಸಿತವೂ ಚಂಡಮಾರುತಗಳ ಹುಟ್ಟಿಗೆ ಕಾರಣವಾಗಿದೆ. ಹಾಗಿದ್ರೆ ವಾಯುಭಾರ ಕುಸಿತವಾಗೋದು ಏಕೆ? ಇದರಿಂದ ಚಂಡಮಾರುಗಳು ಹುಟ್ಟು ಪಡೆಯೋದು ಯಾಕೆ ಅನ್ನೋದನ್ನು ಇಲ್ಲಿ ನೋಡೋಣ. ಸಮುದ್ರ ಮಟ್ಟದಲ್ಲಿ ಉಷ್ಣತೆಯ ಪ್ರಮಾಣ ತುಂಬಾ ಪ್ರಮುಖವಾಗುತ್ತದೆ. ಉಷ್ಣತೆ ಪ್ರಮಾಣ ಏರು-ಪೇರು ಆದಾಗ ಪ್ರಾಕೃತಿಕ ವಿಕೋಪಗಳು ಆಗೋದು ಹೆಚ್ಚು. ಒಂದು ವೇಳೆ ಸಮುದ್ರ ಮಟ್ಟದಲ್ಲಿನ ಉಷ್ಣತೆ 26 ಸೆಂಟಿಗ್ರೇಡ್ಗಿಂತ ಹೆಚ್ಚಾದರೆ ಅದು ವಾಯುಭಾರ ಕುಸಿತಕ್ಕೆ ಕಾರಣವಾಗುತ್ತೆ. ಈ ವಾಯುಭಾರ ಕುಸಿತದಿಂದ ಚಂಡಮಾರುಗಳಿಗೆ ಕಾರಣವಾಗುತ್ತೆ.
ಸಮುದ್ರ ಮಟ್ಟದಲ್ಲಿ ಉಷ್ಣತೆ ವ್ಯತ್ಯಾಸವಾಗೋದು ಏಕೆ?
ಚಂಡಮಾರುತಗಳ ಹುಟ್ಟಿಗೆ ಪ್ರಮುಖವಾಗಿ ಗಾಳಿ ಮತ್ತು ಸಮುದ್ರ ಮಟ್ಟದಲ್ಲಿನ ಉಷ್ಣತೆ ಕಾರಣ. ಹಾಗಿದ್ರೆ ಸಮುದ್ರ ಮಟ್ಟದಲ್ಲಿ ಉಷ್ಣತೆಯಲ್ಲಿ ವ್ಯತ್ಯಾಸವಾಗೋದು ಏಕೆ? ಇದಕ್ಕೆ ಪ್ರಮುಖ ಕಾರಣ ಸೂರ್ಯ. ಸಮುದ್ರ ಮೇಲೆ ದಟ್ಟವಾಗಿ ಸೂರ್ಯನ ಕಿರಣಗಳು ಬಿದ್ದಾಗ ನೀರು ಬಿಸಿಯಾಗುತ್ತೆ. ಸಮುದ್ರದ ನೀರು ಬಿಸಿಯಾದಂತೆ ಅಲ್ಲಿದ್ದ ಗಾಳಿಯೂ ಬಿಸಿಯಾಗಿ ಮತ್ತಷ್ಟು ಉಷ್ಣಾಂಶವನ್ನು ಬಿಡುಗಡೆಗೊಳಿಸುತ್ತೆ. ಆಗ ಗಾಳಿಯ ತೂಕ ಹಗುರವಾಗುತ್ತೆ. ನಂತರ ಸುತ್ತಲಿನ ವಾತಾವರಣ ಬಿಸಿಯಾಗುತ್ತೆ. ಇದೆಲ್ಲರದ ಪರಿಣಾಮದಿಂದಾಗಿ ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತವಾಗುತ್ತೆ. ಈ ವಾಯುಭಾರ ಕುಸಿತ ಚಂಡಮಾರುಗಳ ಹುಟ್ಟಿಗೆ ಕಾರಣವಾಗುತ್ತೆ.
ನಿರಂತರ ಮಳೆ ಸುರಿಯುವುದೇಕೆ?
ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತ ಆಯ್ತು ಅಂತಂದ್ರೆ ಇದ್ದಕ್ಕಿದ್ದಂತೆ ಚಳಿ ಮತ್ತು ನಿರಂತರ ಮಳೆ ಆರಂಭವಾಗುತ್ತೆ. ಹಾಗಿದ್ರೆ ಸೈಕ್ಲೋನ್ ಸಂದರ್ಭದಲ್ಲಿ ಕರಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುವುದೇಕೆ? ಬಿಸಿಯಾಗಿರುವ ಗಾಳಿ ಸಮುದ್ರದ ಮೇಲೆ ಹರಡಿಕೊಂಡು ಬೀಸುತ್ತಾ ಹೋಗುತ್ತೆ. ಈ ಸಂದರ್ಭದಲ್ಲಿ ಗಾಳಿ ತಂಪಾಗಿ ಮಳೆ ಸುರಿಸುತ್ತೆ. ಹೀಗೆ ಮುಂದಕ್ಕೆ ಹೋದಂತೆ ಗಾಳಿಯು ಮತ್ತಷ್ಟು ವೇಗ ಪಡೆದುಕೊಳ್ಳುತ್ತೆ. ಗಾಳಿ ವೇಗ ಪಡೆದುಕೊಂಡಂತೆ ಅದರ ಜೊತೆ ಮಳೆಯೂ ಸೇರಿಕೊಂಡು ಚಂಡಮಾರುತ ಸೃಷ್ಟಿಯಾಗುತ್ತೆ. ಹಾಗೆನೇ ಗಾಳಿಯೂ ಸುರಳಿಯಾಗಿ ಮೇಲಕ್ಕೆ ಹೋದಂತೆಲ್ಲ ಮಳೆ ಮತ್ತಷ್ಟು ತೀವ್ರವಾಗುತ್ತೆ. ಹೀಗೆ ಬಿರುಗಾಳಿ ಜೊತೆ ಮಳೆಯೂ ಸೇರಿ ಚಂಡಮಾರುತವಾಗುತ್ತೆ. ಗಾಳಿ ವೇಗ ಹೆಚ್ಚಿದಷ್ಟು ಚಂಡಮಾರುತದ ಭಯಾನಕತೆಯೂ ಹೆಚ್ಚುತ್ತೆ.
ಚಂಡಮಾರುತದ ಅವಧಿ ಎಷ್ಟು ದಿನಗಳು?
ಹಾಗಿದ್ರೆ ವಾಯುಭಾರ ಕುಸಿದರಿಂದಾಗಿ ಸೃಷ್ಟಿಯಾಗುವ ಚಂಡಮಾರುತದ ಅವಧಿ ಎಷ್ಟು ದಿನಗಳು. ಸಾಮಾನ್ಯವಾಗಿ ಒಂದು ಚಂಡಮಾರುತದ ಅವಧಿ 7 ರಿಂದ 9 ದಿನಗಳು ಇರುತ್ತದೆ. ಒಮ್ಮೆ ಹುಟ್ಟಿಕೊಂಡ ಚಂಡಮಾರುತ ಕನಿಷ್ಠ ಒಂದು ವಾರದವರೆಗೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಗಾಳಿಯ ವೇಗದ ಮೇಲೆ ಅದರ ಭಯಾನಕತೆ ನಿರ್ಧಾರವಾಗುತ್ತೆ. ಅದರ ನಂತರ ಚಂಡಮಾರುತ ಕೊನೆಗೊಳ್ಳುವುದು ಹೇಗೆ ಗೊತ್ತಾ? ಸಮದ್ರದಲ್ಲಿ ದೊಡ್ಡ ಅಲೆಗಳೊಂದಿಗೆ ಅಬ್ಬರಿಸುವ ಚಂಡಮಾರುತಗಳು ನಿಧಾನಕ್ಕೆ ಅಲೆಗಳು ಬಂದು ತೀರಕ್ಕೆ ಅಪ್ಪಳಿಸುವ ಮೂಲಕ ಚಂಡಮಾರುತಗಳು ಕೊನೆಯಾಗುತ್ತವೆ. ಹಾಗೆನೇ ಅದೇ ಸಂದರ್ಭದಲ್ಲಿ ಗಾಳಿಯ ವೇಗ ಕಡಿಮೆಯಾಗುತ್ತೆ. ಗಾಳಿ ವೇಗ ಕಡಿಮೆಯಾಗುತ್ತಿದ್ದಂತೆ ಮಳೆ ಪ್ರಮಾಣವೂ ಕಡಿಮೆಯಾಗುತ್ತೆ. ಇದೆಲ್ಲವೂ ಕಡಿಮೆಯಾದ ಮೇಲೆ ಮೂಡ ತಿಳಿಯಾಗುತ್ತೆ. ವಾತಾವರಣ ಸಹಜ ಸ್ಥಿತಿಗೆ ಬರುತ್ತೆ.
ಯಾವ ಯಾವ ತಿಂಗಳಿನಲ್ಲಿ ಎಲ್ಲೆಲ್ಲಿ ಚಂಡಮಾರುತ?
ಹಾಗಿದ್ರೆ ಈ ಚಂಡಮಾರುಗಳು ಯಾವ ತಿಂಗಳಿನಲ್ಲಿ ಎಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ನೋಡೋದಾದ್ರೆ. ಸಾಮಾನ್ಯವಾಗಿ ಚಂಡಮಾರುತಗಳು ಪಶ್ಚಿಮ ಪೂರ್ವಕ್ಕೆ ಉಷ್ಟವಲಯದ ಸಮುದ್ರಗಳಲ್ಲಿ ಕಂಡು ಬರುತ್ತವೆ. ಹಾಗೆನೇ ಉತ್ತರಾರ್ಧ ಗೋಳದಲ್ಲಿ ಮೇ ತಿಂಗಳಿನಿಂದ ನವೆಂಬರ್ ತಿಂಗಳಿನವರೆಗೆ ಚಂಡಮಾರುಗಳು ಕಂಡು ಬರುತ್ತವೆ. ಹಾಗೆನೇ ದಕ್ಷಿಣಾರ್ಧ ಗೋಳದಲ್ಲಿ ಡಿಸೆಂಬರ್ನಿಂದ ಜೂನ್ ತಿಂಗಳಿನವರೆಗೆ ಚಂಡಮಾರುಗಳು ಹೆಚ್ಚಾಗಿ ಸಂಭವಿಸುತ್ತವೆ.
ಡಿಸೆಂಬರ್ 2ರಂದು ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಹೆಚ್ಚಿನ ಮಳೆ ಕೂಡ ಆಗಿದೆ. ಹಾಗೆನೇ ಡಿಸೆಂಬರ್ 3 ರಂದು ರಾಜ್ಯದಲ್ಲಿ ಫೆಂಗಲ್ ಪ್ರಭಾವ ಹೆಚ್ಚಾಗಲಿದೆ ಎಂದು ಈ ಹಿಂದೆನೇ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಫೆಂಗಲ್ ಚಂಡಮಾರುತದ ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜಿಗೆ ರಜೆ ನೀಡಿದ್ದಾರೆ. ಈಗಾಗಲೇ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿನ್ನೆನೇ ರಜೆ ಘೋಷಿಸಲಾಗಿತ್ತು. ಇಂದು ಕೊಡಗು ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ಫೆಂಗಲ್ ಚಂಡಮಾರುತದ ಎಫೆಕ್ಟ್ನಿಂದಾಗ ಕೊಡಗಿನಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ.
ಡಿಸೆಂಬರ್ 1 ರಿಂದ ರಾಜ್ಯದತ್ತ ಫೆಂಗಲ್ ಮುಖಲಾಡಲಿದೆ ಎಂದು ಹವಾಮಾನ ಇಲಾಖೆ ತಿಳಸಿತ್ತು. ಆ ಪ್ರಕಾರ ನಿನ್ನೆಯಿಂದ ರಾಜ್ಯದಲ್ಲಿ ಫೆಂಗಲ್ ಪವರ್ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮಳೆಯೊಂದಿಗೆ ಮೋಡ ಕವಿದ ವಾತಾವರಣವಿತ್ತು. ಹಾಗೆನೇ ಡಿಸೆಂಬರ್ 5ರ ವರೆಗೆ ಈ ಫೆಂಗಲ್ ಆರ್ಭಟ ರಾಜ್ಯದಲ್ಲಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲಿವರೆಗೂ ಎಲ್ಲರೂ ಎಚ್ಚರಿಕೆಯಿಂದಿರಿ.