ಪುಟ್ಬಾಲ್ ಮ್ಯಾಚ್‌ನಲ್ಲಿ ಸೋತ ಶಾಲಾ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿದ ಪಿಟಿ ಟೀಚರ್: ವೀಡಿಯೋ ವೈರಲ್
ದೈಹಿಕ ಶಿಕ್ಷಕರೊಬ್ಬರು ಫುಟ್ಬಾಲ್ ಪಂದ್ಯ ಸೋತು ಬಂದ ಮಕ್ಕಳಿಗೆ ಸರಿಯಾಗಿ ನಿಂದಿಸಿದ್ದಲ್ಲದೇ ಜುಟ್ಟು ಹಿಡಿದು ಕೆನ್ನೆಗೆ ಬಾರಿಸಿ ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದಂತಹ ಘಟನೆ ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈ: ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಸೋತಾಗ ಸಮಾಧಾನ ಮಾಡಿ ಮುಂದಿನ ಗೆಲುವಿಗೆ ಪ್ರೋತ್ಸಾಹಿಸಬೇಕಾದ ಶಿಕ್ಷಕರೇ ಸೋತ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿದರೆ ಹೇಗಿರುತ್ತೆ? ತಮಿಳುನಾಡಿನ ಸೇಲಂನಲ್ಲಿ ಇಂತಹ ಘಟನೆಯೊಂದು ನಡೆದಿದೆ. ದೈಹಿಕ ಶಿಕ್ಷಕರೊಬ್ಬರು ಫುಟ್ಬಾಲ್ ಪಂದ್ಯ ಸೋತು ಬಂದ ಮಕ್ಕಳಿಗೆ ಸರಿಯಾಗಿ ನಿಂದಿಸಿದ್ದಲ್ಲದೇ ಜುಟ್ಟು ಹಿಡಿದು ಕೆನ್ನೆಗೆ ಬಾರಿಸಿ ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದಂತಹ ಘಟನೆ ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಅನೇಕರು ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸೇಲಂ ಜಿಲ್ಲೆಯ ಮೆಟ್ಟೂರಿನಲ್ಲಿರುವ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ. ಶಾಲೆಯ ಫುಟ್‌ಬಾಲ್ ತಂಡ ಇತ್ತೀಚೆಗೆ ಪಂದ್ಯವೊಂದರಲ್ಲಿ ಭಾಗವಹಿಸಿತ್ತು. ಆದರೆ ನಿರೀಕ್ಷಿತ ಗೆಲುವು ಸಾಧಿಸಲು ತಂಡ ವಿಫಲವಾಯ್ತು. ಇದರಿಂದ ಅಸಮಾಧಾನಗೊಂಡ ಶಿಕ್ಷಕ, ಆಟವಾಡಿ ಬಳಲಿ ಕುಳಿತಿದ್ದ ಮಕ್ಕಳನ್ನು ಒಬ್ಬೊಬ್ಬರಾಗೇ ವಿಚಾರಿಸುತ್ತಾ ಬಂದಿದ್ದು, ಅವರಿಗೆ ಸೋತಿರುವುದಕ್ಕೆ ಬೈದಿದ್ದಲ್ಲದೇ ಅವರ ಜುಟ್ಟು ಹಿಡಿದು ಕೆನ್ನೆಗೆ ಬಾರಿಸಿ ಕಾಲಿನಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ. ಹೀಗೆ ಮಕ್ಕಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೈಹಿಕ ಶಿಕ್ಷಕನನ್ನು ಅಣ್ಣಾಮಲೈ ಎಂದು ಗುರುತಿಸಲಾಗಿದೆ.
ಮಕ್ಕಳು ತಪ್ಪು ಮಾಡಿದಾಗ ಕಿರುಚಾಡ್ಬೇಡಿ, ಪರಿಸ್ಥಿತಿ ನಿಭಾಯಿಸಲು ಹೀಗ್ಮಾಡಿ
ವೀಡಿಯೋದಲ್ಲಿ ಕೇಳಿಸುವಂತೆ ಶಿಕ್ಷಕ ಓರ್ವ ವಿದ್ಯಾರ್ಥಿಗೆ ನೀನು ಹುಡುಗನೋ ಹುಡುಗಿಯೋ? ನೀನು ಹೇಗೆ ಅವರು ಅಂಕ ಗಳಿಸಲು ಬಿಟ್ಟೆ, ಹೇಗೆ ಬಾಲ್ ನಿನ್ನನ್ನು ದಾಟಿ ಹೋಗುವುದಕ್ಕೆ ಬಿಟ್ಟೆ ಎಂದು ಕೇಳಿದ್ದಾರೆ. ಅಲ್ಲದೇ ಮತ್ತೊಬ್ಬ ವಿದ್ಯಾರ್ಥಿಗೆ ನಿನಗೆ ಒತ್ತಡದಲ್ಲಿ ಆಟವಾಡಲು ಬರುವುದಿಲ್ಲವೇ? ಯಾಕೆ ಅಲ್ಲಿ ಮಾತುಕತೆಯೇ ಇರಲಿಲ್ಲ ಎಂದು ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಾ ಕೆನ್ನೆಗೆ ಬಾರಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಇದಾದ ನಂತರ ದೈಹಿಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ವರದಿ ಆಗಿದೆ.
ಮುಖ್ಯ ಶಿಕ್ಷಕನಿಂದ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ