ಮೌಲ್ವಿಗಳಿಗೆ ವೇತನ ತಪ್ಪು: 1993ರ ಸುಪ್ರೀಂಕೋರ್ಟ್ ಆದೇಶವೇ ಸಂವಿಧಾನಬಾಹಿರ ಎಂದ ಮಾಹಿತಿ ಆಯೋಗ
ಮೌಲ್ವಿಗಳಿಗೆ ವೇತನ ತಪ್ಪು ಎಂದು ಮಾಹಿತಿ ಆಯೋಗ ಹೇಳಿದೆ. ಈ ಸಂಬಂಧ 1993ರ ಸುಪ್ರೀಂಕೋರ್ಟ್ ನೀಡಿರುವ ಆದೇಶವೇ ಸಂವಿಧಾನಬಾಹಿರ. ತೆರಿಗೆದಾರರ ಹಣವನ್ನು ನಿರ್ದಿಷ್ಟ ಸಮುದಾಯಕ್ಕೆ ಬಳಸಬಾರದು. ಸಂವಿಧಾನವೇ ಹೀಗೆ ಹೇಳುತ್ತದೆ. ಮುಸ್ಲಿಮರಿಗಷ್ಟೇ ನೀಡುವುದರಿಂದ ಇತರರಿಗೆ ಅನ್ಯಾಯ ಎಂದೂ ಹೇಳಿದೆ.

ನವದೆಹಲಿ: ‘ಮಸೀದಿಗಳಲ್ಲಿ (Masjid) ಕೆಲಸ ಮಾಡುವ ಮೌಲ್ವಿಗಳಿಗೆ (Imams) ವೇತನ ನೀಡಲು 1993ರಲ್ಲಿ ಸುಪ್ರೀಂಕೋರ್ಟ್ (Supreme Court) ಹೊರಡಿಸಿದ್ದ ಆದೇಶ ಸಂವಿಧಾನಬಾಹಿರ (Violation of Constitution)’ ಎಂದು ಕೇಂದ್ರ ಮಾಹಿತಿ ಆಯೋಗ (Central Information Commission) ಮಹತ್ವದ ಆದೇಶ ಪ್ರಕಟಿಸಿದೆ. ನ್ಯಾಯಾಲಯದ ಕ್ರಮದಿಂದ ತಪ್ಪು ನಿದರ್ಶನ ಸೃಷ್ಟಿಯಾಗಿದೆಯಲ್ಲದೆ, ಇದು ಅನಗತ್ಯ ರಾಜಕೀಯ ಕಿತ್ತಾಟ ಹಾಗೂ ಸಾಮಾಜಿಕ ಕಲಹಕ್ಕೂ ನಾಂದಿ ಹಾಡಿದೆ ಎಂದು ದೂರಿದೆ. ‘ತೆರಿಗೆದಾರರ ಹಣವನ್ನು ಯಾವುದೇ ನಿರ್ದಿಷ್ಟ ಸಮುದಾಯದ ಅನುಕೂಲಕ್ಕೆ ಬಳಸಬಾರದು ಎಂದು ಸಂವಿಧಾನ ಹೇಳುತ್ತದೆ. 1993ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅದಕ್ಕೆ ವಿರುದ್ಧವಾಗಿದೆ’ ಎಂದು ಮಾಹಿತಿ ಹಕ್ಕು ಕಾಯ್ದೆ (Right to Information Act) (ಆರ್‌ಟಿಐ) ಅಡಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರು ಹೇಳಿದ್ದಾರೆ.
ತಮ್ಮ ಈ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವರಿಗೆ ಕಳುಹಿಸಬೇಕು. ಸಂವಿಧಾನದ 25ರಿಂದ 28ರವರೆಗಿನ ಪರಿಚ್ಛೇದ ಜಾರಿಯಾಗುವಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರದ ಹಣದಲ್ಲಿ ವಿವಿಧ ಧರ್ಮೀಯ ಅರ್ಚಕರಿಗೆ ನೀಡಲಾಗುತ್ತಿರುವ ಮಾಸಿಕ ವೇತನಕ್ಕೆ ಸಮಾನವಾಗಿ ಎಲ್ಲ ಧರ್ಮಗಳನ್ನೂ ತರಬೇಕು ಎಂದು ಸೂಚಿಸಿದ್ದಾರೆ.
ಇದನ್ನು ಓದಿ: ಮದರಸಾ ವಿದ್ಯಾರ್ಥಿಗಳು ಹಾಗೂ ಮೌಲ್ವಿಗಳಿಂದ ಹರ್ ಘರ್ ತಿರಂಗ, ವಂದೇ ಮಾತರಂ ಘೋಷಣೆ!
ಅರ್ಚಕರಿಗೆ 2 ಸಾವಿರ, ಇಮಾಮ್‌ಗಳಿಗೆ 18 ಸಾವಿರ!:
ಇಮಾಮ್‌ಗಳಿಗೆ ದೆಹಲಿ ಸರ್ಕಾರ ಹಾಗೂ ದೆಹಲಿ ವಕ್ಫ್ ಮಂಡಳಿ ಪಾವತಿಸಿರುವ ವೇತನಕ್ಕೆ ಸಂಬಂಧಿಸಿದ ವಿವರ ನೀಡಬೇಕು ಎಂದು ಕೋರಿ ಆರ್‌ಟಿಐ ಕಾರ್ಯಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದರು. ಅವರಿಗೆ ಸೂಕ್ತ ಉತ್ತರ ಲಭಿಸದ ಹಿನ್ನೆಲೆಯಲ್ಲಿ ಆಯೋಗದ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ಆಯೋಗ, ‘ದೆಹಲಿಯಲ್ಲಿ ಇಮಾಮ್‌ಗಳಿಗೆ 18 ಸಾವಿರ ರೂ. ಗೌರವಧನ ಪಾವತಿಸಲಾಗುತ್ತಿದೆ. ಆದರೆ ದೇಗುಲಗಳಲ್ಲಿ ಅರ್ಚಕರಿಗೆ ಕೇವಲ 2 ಸಾವಿರ ರೂ. ಮಾಸಿಕ ಹಣ ಸಿಗುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮಾತ್ರ ಈ ರೀತಿಯ ವಿಶೇಷ ಧಾರ್ಮಿಕ ಸವಲತ್ತು ನೀಡಿದರೆ, ಅಂತರಧರ್ಮೀಯ ಸೌಹಾರ್ದತೆಗೆ ಭಂಗವಾಗುತ್ತದೆ. ಮಸೀದಿಯ ಮೌಲ್ವಿಗಳು ಹಾಗೂ ಇತರರಿಗೆ ಮಾತ್ರ ವೇತನ ನೀಡುವುದು ಹಿಂದು ಸಮುದಾಯವಷ್ಟೇ ಅಲ್ಲ, ಮುಸ್ಲಿಮೇತರ ಇತರೆ ಧರ್ಮೀಯರಿಗೂ ಅನ್ಯಾಯ ಮಾಡಿದಂತೆ’ ಎಂದು ಕಿಡಿಕಾರಿದೆ. ಅರ್ಜಿದಾರರಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ದೆಹಲಿ ವಕ್ಫ್ ಮಂಡಳಿಗೆ ತಾಕೀತು ಮಾಡಿದೆ.
ಇದನ್ನೂ ಓದಿ: ಮಸೀದಿ ನೋಡಿಕೊಳ್ಳುವ ಮೌಲ್ವಿಗೆ ಸಂಬಳ ಕೊಟ್ಟಿದ್ದು ಸಿದ್ದರಾಮಯ್ಯ: ಜಮೀರ್ ಅಹ್ಮದ್
ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಮಾಮ್‌ಗಳಿಗೆ ವೇತನ ನೀಡುವಂತೆ 1993ರಲ್ಲಿ ಅಖಿಲ ಭಾರತ ಇಮಾಮ್ ಸಂಘಟನೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ವೇತನ ಪಾವತಿಸಲು ದೆಹಲಿಯಲ್ಲಿ ಮಸೀದಿಗಳನ್ನು ನಿರ್ವಹಿಸುವ ವಕ್ಫ್ ಮಂಡಳಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಇದನ್ನೂ ಓದಿ: ಭಯೋತ್ಪಾದಕ ಕೃತ್ಯಗಳ ಹಿಂದೆ ಮೌಲ್ವಿಗಳ ಕೈವಾಡ, ಅವರ ಬಗ್ಗೆ ತನಿಖೆ ನಡೆಸಬೇಕು: ಸಿ.ಟಿ. ರವಿ