ಮಸೀದಿ ನೋಡಿಕೊಳ್ಳುವ ಮೌಲ್ವಿಗೆ ಸಂಬಳ ಕೊಟ್ಟಿದ್ದು ಸಿದ್ದರಾಮಯ್ಯ: ಜಮೀರ್ ಅಹ್ಮದ್
ದಾವಣಗೆರೆಯಲ್ಲಿ ನಡೆಯಲಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಅಲ್ಪಸಂಖ್ಯಾತ ನಾಯಕ ಜಮೀರ್ ಅಹ್ಮದ್ ಅವರು ತಮ್ಮ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಕೈ ಕಾರ್ಯಕರ್ತರು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯಲಿದ್ದು, ಈ ಕುರಿತು ರಾಜ್ಯಾದ್ಯಂತ ಪರ್ಯಟನೆ ಮಾಡ್ತಿರುವ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಪರಮಾಪ್ತ ಜಮೀರ್ ಅಹ್ಮದ್ ಅವರು ತಮ್ಮ ಅಲ್ಪಸಂಖ್ಯಾತ ಸಮುದಾಯದ ಜನರೊಂದಿಗೆ ಸಮಾಲೋಚನಾ ಸಭೆ ನಡೆಸುತ್ತಿದ್ದಾರೆ.
ಅದರಂತೆ ಇಂದು ಕೂಡ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭರ್ಜರಿಯಾಗಿಯೇ ಭಾಷಣ ಮಾಡಿದರು. ನಮ್ ನಾಯಕರು ಸಿದ್ಧರಾಮಯ್ಯ ಯಾವತ್ತೂ ಬರ್ತಡೇ ಆಚರಿಸಿರಲಿಲ್ಲ. ಕೇಕ್ ಸಹ ಕತ್ತರಿಸಲು ಸಿದ್ಧರಿರುತ್ತಿರಲಿಲ್ಲ. ಜನತಾದಳದಲ್ಲಿದ್ದಾಗಿನಿಂದ ಸಿದ್ಧರಾಮಯ್ಯ ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕಳೆದ ಸಲ ನಾನು ಸಿದ್ದರಾಮಯ್ಯ ಅವರೊಟ್ಟಿಗೆ ದೆಹಲಿಯಲ್ಲಿದ್ದಾಗ 200ಕ್ಕೂ ಹೆಚ್ಚು ಕರೆ ಬಂದವು. ಸಿದ್ಧರಾಮಯ್ಯ ಅವರೇ ನೀವು ಬರ್ತಡೇ ಆಚರಿಸಿಕೊಳ್ಳಬೇಕು ಎಂದು ಎಲ್ಲರೂ ಒತ್ತಾಯಿಸಿದರು. ಬಹು ಜನರ ಒತ್ತಾಯದ ಮೇರೆಗೆ ಆಯ್ತು ಸರಿ ಮಾಡಿ ಎಂದು ಅನುಮತಿ ಕೊಟ್ಟರು. ಅದಕ್ಕಾಗಿಯೇ ಇಂದು ನಾವೆಲ್ಲಾ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದ ಮಾಡಿಕೊಳ್ತಿದ್ದೀವಿ.
ಬಾದಾಮಿ: ಪಾದಯಾತ್ರೆಗೆ ಸಿದ್ದರಾಮಯ್ಯ ಚಿಂತನೆ, ಕಾಂಗ್ರೆಸ್ನಲ್ಲಿ ಹೆಚ್ಚಿದ ಹುರುಪು
ರಾಜ್ಯ ಮಾತ್ರವಲ್ಲ, ದೇಶದಲ್ಲೇ ಸಿದ್ಧರಾಮಯ್ಯ ಅವರನ್ನು ಜನ ಇಷ್ಟಪಡುವವರಿದ್ದಾರೆ. ಅವರನ್ನು ಕೇವಲ ಕುರುಬ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದವರು ಇಷ್ಟ ಪಡುತ್ತಾರೆ. ನಮ್ಮ ಅಲ್ಪಸಂಖ್ಯಾತ ಸಮುದಾಯ ಸೇರಿ ಎಲ್ಲಾ ಜಾತಿಯ ಜನರು ಇಷ್ಟ ಪಡುತ್ತಾರೆ. ಅದ್ರಲ್ಲೂ ವಿಶೇಷವಾಗಿ ನಮ್ಮ ಅಲ್ಪಸಂಖ್ಯಾತ ಜನರಿಗೆ ಸಿದ್ದರಾಮಯ್ಯ ಅಂದ್ರೆ ಹೆಚ್ಚಿನ ಪ್ರೀತಿ. ಆ ಕಾರಣಕ್ಕಾಗಿಯೇ ಮುಂದಿನ ತಿಂಗಳು ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು.
ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ನಮ್ಮ ಸಮುದಾಯಕ್ಕೆ 3150 ಕೋಟಿ ಅನುದಾನ ನೀಡಿದ್ದಾರೆ. ಇದುವರೆಗೂ ಯಾರೂ ಕೂಡ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿಲ್ಲ. ಮೊದಲು 280 ಕೋಟಿ ಮಾತ್ರ ಅನುದಾನ ಮೀಸಲಿಡ್ತಿದ್ರು. ಆದ್ರೆ ಇವ್ರು ಸಾವಿರ ಕೋಟಿ ಮೀಸಲಿಟ್ಟಿರೋದಕ್ಕೆ ನಮ್ಮ ಸಮುದಾಯ ಚಿರ ಋಣಿ ಆಗಿರುತ್ತೆ. ಅದೇ ರೀತಿ ನಾನು ಈಗ ಸಿಎಂ ಆಗಿದ್ದರೆ 10 ಸಾವಿರ ಕೋಟಿ ಕೊಡುತ್ತಿದ್ದೆ ಎಂದಿದ್ದರು. ಮುಸ್ಲಿಂ ಸಮುದಾಯ ಸಿದ್ದರಾಮಯ್ಯಗೆ ಸಪೋರ್ಟ್ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಿದ್ಧರಾಮಯ್ಯ ಜನ್ಮದಿನಕ್ಕೆ ಹೆಚ್ಚಿನ ಅಲ್ಪಸಂಖ್ಯಾತರು ಬಂದರೆ ಗೌರವ ಸಲ್ಲುತ್ತದೆ. ಇದು ಬೇರೆಯವರಿಗೆ ಮೆಟ್ಟು ತಗೊಂಡು ಹೊಡೆದಂಗೆ ಆಗುತ್ತದೆ ಎಂದು ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟರು.
Mysuru: ಸಿದ್ದರಾಮಯ್ಯ ಜನಪರ ಕಾರ‍್ಯಕ್ರಮಗಳಿಗೆ ಮಲ್ಲಿಕಾರ್ಜುನ ಖರ್ಗೆ ಪರಾಕ್
ಉತ್ತಮ ಯೋಜನೆ ನೀಡಿದ ಅವರಿಗೆ ಮುಸ್ಲಿಂ ಸಮುದಾಯ ಎಷ್ಟು ನಿಯತ್ತಾಗಿದೆ ಎಂಬುದು ಗೊತ್ತಾಗುತ್ತದೆ. ಹುಟ್ಟು ಹಬ್ಬ ಸಿದ್ಧರಾಮಯ್ಯ ಅವರದಲ್ಲ, ಅದು ನಮ್ಮ ಹುಟ್ಟು ಎಂದು ಘೋಷಣೆ ಕೂಗಿದರು. ಎಲ್ಲರೂ ಹಬ್ಬದ ರೀತಿ ಸಿದ್ಧರಾಮಯ್ಯ ಜನ್ಮ ದಿನ ಆಚರಣೆ ಮಾಡಬೇಕು. ನಾಡಹಬ್ಬ, ರಂಜಾನ್ ಬಕ್ರೀದ್, ಯುಗಾದಿ, ದೀಪಾವಳಿಯಂತೆ ಆಚರಣೆ ಮಾಡಬೇಕು ಎಂದು ತಮ್ಮ ಸಮುದಾಯದ ಜನರಿಗೆ ಕಿವಿ ಮಾತು ಹೇಳಿದರು. ಎಲ್ಲಾ ಸಿದ್ಧರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಅಭಿಮಾನಿಗಳೇ ಎಂದರು. ಚಿತ್ರದುರ್ಗ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಎರಡೂವರೆ ಲಕ್ಷ ಜನಸಂಖ್ಯೆಯಿದೆ. ಕನಿಷ್ಟ ಐವತ್ತು ಸಾವಿರ ಜನ ಅಲ್ಪಸಂಖ್ಯಾತರು ಈ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಮನವಿ ಮಾಡಿಕೊಂಡರು.
ಮಸೀದಿ ನೋಡಿಕೊಳ್ಳುವ ಮೌಲಾನಾ, ಇಮಾಮ್ ಸಾಬ್ ಗೆ ಸಂಬಳ ನೀಡಿದ್ದು ಸಿದ್ಧರಾಮಯ್ಯ. ಗೋಮಾಂಸ ತಿನ್ನುತೇನೆ ಏನೀಗ ಎಂದಿದ್ದರು, ಸಿಎಂ ಆಗಿದ್ದಾಗ ಸಾರ್ವಜನಿಕ ಸಭೆಯಲ್ಲಿ ಹೀಗೆ ಹೇಳುವವರು ಯಾರಿದ್ದಾರೆ. ನಾನು ಸಿದ್ಧರಾಮಯ್ಯ ಅವರ ದೊಡ್ಡ ಅಭಿಮಾನಿ ಆಗಿದ್ದೇನೆ. ಸಿದ್ಧರಾಮಯ್ಯಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ವಿಧಾನಸೌಧ ಬ್ಯಾಕ್ವೆಂಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಮಾಡಿದರು. ಸಿದ್ಧರಾಮಯ್ಯ ಪರವಾಗಿ ನಾವು ಇರಬೇಕು ಅಲ್ಲವೇ? ಸಿದ್ಧರಾಮಯ್ಯ ಪರವಾಗಿ ನಿಯತ್ತಾಗಿ ನಿಂತು ಬೇರೆಯವರಿಗೆ ಪಾಠ ಕಲಿಸಬೇಕು. ದೇಶದಲ್ಲಿ ಮುಸ್ಲಿಮರು ಈಗ ಸಂಕಷ್ಟದಲ್ಲಿದ್ದೇವೆ. ಬಿಜೆಪಿ ಆಡಳಿತದಿಂದಾಗಿ ದೇಶದಲ್ಲಿ ಸಂಕಷ್ಟದಲ್ಲಿದ್ದೇವೆ. ಹಿಂದೂ, ಮುಸ್ಲಿಂ ಧರ್ಮಗಳ ನಡುವೆ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಆಡಳಿತದ ಸಾಧನೆ ತೋರಿಸಿ ಮತ ಕೇಳುತ್ತೇವೆ. ಅಚ್ಚೆ ದಿನ್ ಬಗ್ಗೆ ಹೇಳಿ ಮೋದಿ ಮತ ಪಡೆದರು. ಆದ್ರೆ, ಅಚ್ಚೆ ದಿನ್ ಬರಲೇ ಇಲ್ಲ, ಉದ್ಯಮಿಗಳು, ಅಮಿತ್ ಶಾ ಗೆ ಅಚ್ಚೆ ದಿನ್ ಬಂತು. ಜಮೀರ್ ಅಹ್ಮದ್ ಯಾವುದಕ್ಕೂ ಕೇರ್ ಮಾಡಲ್ಲ ಎಂದು ಘರ್ಜಿಸಿದರು.