Asianet Suvarna News Asianet Suvarna News

ಭಯೋತ್ಪಾದಕ ಕೃತ್ಯಗಳ ಹಿಂದೆ ಮೌಲ್ವಿಗಳ ಕೈವಾಡ, ಅವರ ಬಗ್ಗೆ ತನಿಖೆ ನಡೆಸಬೇಕು: ಸಿ.ಟಿ. ರವಿ

* ಮೌಲ್ವಿಗಳ ಸಮೀಕ್ಷೆ: ಬೆಲ್ಲದ್‌ ಹೇಳಿಕೆಗೆ ಸಿ.ಟಿ. ರವಿ ಬೆಂಬಲ

* ಉಗ್ರಗಾಮಿ ಕೃತ್ಯದಲ್ಲಿ ಕೈವಾಡ ಇದೆ, ತನಿಖೆಯಾಗಲಿ: ಬಿಜೆಪಿ ನಾಯಕ

* ನಿರ್ದೋಷಿಯಾಗಿದ್ದರೆ ಹೊರಬರುತ್ತಾರೆ, ತನಿಖೆಯೇ ತಪ್ಪೆಂದರೆ ಹೇಗೆ?

CT Ravi Supports Bellad Statement Demands For Investigation On Maulvi s pod
Author
Bangalore, First Published Apr 22, 2022, 4:39 AM IST

ಬೆಂಗಳೂರು(ಏ.22): ದೇಶದ ಉದ್ದಗಲಕ್ಕೆ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಹಿಂದೆ ಮೌಲ್ವಿಗಳ ಕೈವಾಡ ಕಂಡು ಬಂದಿರುವುದರಿಂದ ಅವರ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪರೋಕ್ಷವಾಗಿ ಆಗ್ರಹಿಸಿದ್ದಾರೆ. ತನ್ಮೂಲಕ ಹುಬ್ಬಳ್ಳಿ ಗಲಭೆಯ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಅವರು ಮೌಲ್ವಿಗಳ ಸಮೀಕ್ಷೆ ನಡೆಯಬೇಕು ಎಂದು ಆಗ್ರಹಿಸಿದ್ದಕ್ಕೆ ಬೆಂಬಲ ನೀಡಿದ್ದಾರೆ.

ಪಕ್ಷದ ಸಂಘಟನೆ ಸಲುವಾಗಿ ಪ್ರವಾಸ ಕೈಗೊಂಡಿರುವ ಅವರು ಗುರುವಾರ ದೇವನಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆಗೂ ಮುನ್ನ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಹುಬ್ಬಳ್ಳಿ ಗಲಭೆ ಹಿಂದೆ ಒಬ್ಬ ಮೌಲ್ವಿಯ ಕೈವಾಡವಿದೆ ಎಂಬ ಮಾಹಿತಿ ಬಂದಿದ್ದು, ತನಿಖೆ ನಡೆಯುತ್ತಿದೆ. ಯಾರೂ ಸಹ ಸಂವಿಧಾನಾತೀತರಲ್ಲ. ಯಾರೂ ಸಹ ಕಾನೂನಿಗೆ ಅತೀತರಲ್ಲ. ದೇಶದ ಉದ್ದಗಲಕ್ಕೆ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಹಿಂದೆ ಮೌಲ್ವಿಗಳ ಕೈವಾಡ ಕಂಡುಬಂದಿದೆ. ತನಿಖೆ ಮಾಡಬಾರದೇನು? ನಿರ್ದೋಷಿಯಾಗಿದ್ದರೆ ಹೊರಬರುತ್ತಾರೆ. ಆದರೆ, ತನಿಖೆಯೇ ತಪ್ಪೆಂದರೆ ಹೇಗೆ ಎಂದು ಪ್ರಶ್ನಿಸಿದರು.

ನೆಲದ ಕಾನೂನು ಎಲ್ಲರಿಗೂ ಒಂದೇ:

ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ವಿಶೇಷ ಅನುಮತಿ ಇಲ್ಲದೆ ಯಾರೂ ಮೈಕ್‌ ಹಾಕುವಂತಿಲ್ಲ. ಅದನ್ನು ಎಲ್ಲರೂ ಪಾಲಿಸಲೇಬೇಕು ಎಂದು ಇದೇ ವೇಳೆ ರವಿ ಹೇಳಿದರು.

ನಿಗದಿತ ಡೆಸಿಬಲ್‌ ಮಟ್ಟವನ್ನು ಕಾಪಾಡುವ ಮತ್ತು ಅಂತಹ ಸೂಚನೆಯನ್ನು ಪಾಲಿಸುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ಇದೆ. ಅದು ಅನುಷ್ಠಾನಗೊಳುವಂತೆ ಸರ್ಕಾರ ಮಾಡಬೇಕು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಯಾರೂ ಮೈಕ್‌ ಹಾಕುವಂತಿಲ್ಲ ಎಂದು ಕಾನೂನಿನಲ್ಲಿದೆ. ವಿಶೇಷ ಸಂದರ್ಭದಲ್ಲಿ ಮಾತ್ರ ಅವಕಾಶ ಇದೆ. ಕಾನೂನನ್ನು ಎಲ್ಲರೂ ಪಾಲಿಸಲೇಬೇಕು ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ನವರು ಕೆಲವರನ್ನು ತಲೆ ಮೇಲೆ ಕೂರಿಸಿಕೊಂಡಿರಬಹುದು. ನಾವು ಯಾರನ್ನೂ ತಲೆ ಮೇಲೆ ಕೂರಿಸಿಕೊಂಡಿಲ್ಲ, ಕೂರಿಸಿಕೊಳ್ಳುವುದೂ ಇಲ್ಲ. ಭಯೋತ್ಪಾದಕರ ಮುಖವಾಡ ಕಳಚಿಬಿದ್ದೇ ಬೀಳುತ್ತದೆ. ಕಳ್ಳನ ಹೆಂಡತಿ ಡ್ಯಾಶ್‌..ಡ್ಯಾಶ್‌.. ಎಂಬುದು ನಿಜವಾಗಲಿ ಎಂದರು.

Follow Us:
Download App:
  • android
  • ios