* ಲಸಿಕೆ ಖರೀದಿ, ನೀಡಿಕೆ, ದರದ ಬಗ್ಗೆ ಸಷ್ಟನೆ ನೀಡಿ* ಸಮಗ್ರ ಮಾಹಿತಿ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ* 18-44 ವರ್ಷದ ಒಳಗಿನವರಿಗೆ ಉಚಿತ ಲಸಿಕೆ ಏಕಿಲ್ಲ?: ಚಾಟಿ

ನವದೆಹಲಿ(ಜೂ.03): ಲಸಿಕೆ ನೋಂದಣಿ ಮತ್ತು ಖರೀದಿ ನೀತಿಯಲ್ಲಿನ ನ್ಯೂನತೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್‌, ಇದುವರೆಗೆ ಖರೀದಿಸಲಾದ ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಮತ್ತು ಸ್ಪುಟ್ನಿಕ್‌-5 ಲಸಿಕೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೇ 18-44 ವರ್ಷ ಒಳಗಿನವರಿಗೆ ಎಲ್ಲರಿಗೂ ಉಚಿತ ಲಸಿಕೆ ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರವನ್ನು ಪ್ರಶ್ನಿಸಿದೆ. ಇದೇ ವೇಳೆ ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಔಷಧ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸ್ಪಷ್ಟಪಡಿಸುವಂತೆಯೂ ಸೂಚನೆ ನೀಡಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ ಸಂಬಂಧ ಸುಪ್ರೀಂಕೋರ್ಟ್‌ ಮೇ 31ರಂದು ಹೊರಡಿಸಿದ್ದ ಆದೇಶದ ಪ್ರತಿಯನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಬುಧವಾರ ಅಪ್ಲೋಡ್‌ ಮಾಡಲಾಗಿದೆ. ಕೊರೋನಾ ನಿರ್ವಹಣೆಯ ಕುರಿತಂತೆ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸಿ ಮೇ 31ರಂದು ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿನ ಇನ್ನಷ್ಟುಅಂಶಗಳು ಇದೀಗ ಲಭ್ಯವಾಗಿವೆ. ಅದರಂತೆ ಕೇಂದ್ರ ಸರ್ಕಾರಕ್ಕೆ ಪ್ರಮಾಣಪತ್ರ ಸಲ್ಲಿಸಲು ಸುಪ್ರೀಂಕೋರ್ಟ್‌ 2 ವಾರಗಳ ಗಡುವು ನೀಡಿದೆ.

ಈ ತೀರ್ಪಿನಲ್ಲಿ 18ರಿಂದ 44 ವರ್ಷದ ಒಳಗಿನ ವಯೋಮಾನದವರಿಗೆ ಕೇಂದ್ರ ಸರ್ಕಾರ ರೂಪಿಸಿರುವ ಲಸಿಕೆ ನೀತಿಯನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. 45 ವರ್ಷದ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಆದರೆ, 45 ವರ್ಷಕ್ಕಿಂತ ಕೆಳಗಿನವರಿಗೆ ಹಣ ಕೊಟ್ಟು ಲಸಿಕೆ ಖರೀದಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಮೇಲ್ನೋಟಕ್ಕೆ ಇದು ತರ್ಕ ರಹಿತ ಮತ್ತು ಸ್ವೇಚ್ಛಾನುಸಾರ ರೂಪಿಸಿದ ನೀತಿಯಂತೆ ಕಂಡುಬರುತ್ತಿದೆ ಎಂದು ಕಿಡಿಕಾರಿದೆ. ಲಸಿಕೆ ಕೊರತೆ ಹಾಗೂ ಗ್ರಾಮೀಣ ಭಾಗದಲ್ಲಿ ಲಸಿಕೆ ವಿತರಣೆಗೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀತಿಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂಕೊರ್ಟ್‌, 2021ರ ಡಿಸೆಂಬರ್‌ವರೆಗೆ ದೇಶದಲ್ಲಿ ಎಷ್ಟುಪ್ರಮಾಣ ಲಸಿಕೆ ಲಭ್ಯವಾಗಲಿದೆ ಎಂಬ ಕುರಿತು ಮಾಹಿತಿಯನ್ನು ಒದಗಿಸುವಂತೆ ತಿಳಿಸಿದೆ.

ಇದೇ ವೇಳೆ ಲಸಿಕೆಗೆ ಖರೀದಿಗೆ ಮೀಸಲಿಟ್ಟ35,000 ಕೋಟಿ ರು. ಹೇಗೆ ಬಳಕೆ ಆಗಿದೆ. ಒಂದು ವೇಳೆ ಲಸಿಕೆ ಖರೀದಿಗೆ 35,000 ಕೋಟಿಯನ್ನು ಮೀಸಲಿಟ್ಟಿದ್ದೇ ಆದಲ್ಲಿ ಆ 18-44 ವರ್ಷದೊಳಗಿನವರಿಗೆ ಈ ಅನುದಾನವನ್ನು ಏಕೆ ಬಳಕೆ ಮಾಡಬಾರದು ಎಂದು ಕೋರ್ಟ್‌ ಪ್ರಶ್ನಿಸಿದೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಕೋರ್ಟ್‌ ಹೇಳಿದ 5 ಪ್ರಮುಖ ಅಂಶಗಳು

- ಕಾರ್ಯಾಂಗದ ವಿಷಯದಲ್ಲಿ ಕೋರ್ಟ್‌ ಮಧ್ಯ ಪ್ರವೇಶಿಸಬಾರದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಜನರ ಹಕ್ಕು ಉಲ್ಲಂಘನೆ ಆದರೆ ಕೋರ್ಟ್‌ ಮೌನವಾಗಿರಲು ಸಾಧ್ಯವಿಲ್ಲ

- ಲಸಿಕೆ ಖರೀದಿಗೆ ಕೇಂದ್ರ ಬಜೆಟ್‌ನಲ್ಲಿ 35 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಎಷ್ಟುಬಳಸಿದ್ದೀರಿ? ಈ ಹಣವನ್ನು 18-44 ವರ್ಷದೊಳಗಿನವರಿಗೆ ಲಸಿಕೆ ಖರೀದಿಗಾಗಿ ಏಕೆ ಬಳಕೆ ಆಗುತ್ತಿಲ್ಲ?

- ಇದುವರೆಗೆ ಖರೀದಿಸಲಾದ ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಮತ್ತು ಸ್ಪುಟ್ನಿಕ್‌-5 ಲಸಿಕೆಯ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸಿ

- ಭಾರತದಲ್ಲಿ ಲಭ್ಯವಿರುವ ಲಸಿಕೆಯ ದರ ಹಾಗೂ ಅವುಗಳ ಅಂತಾರಾಷ್ಟ್ರೀಯ ದರದ ಹೋಲಿಕೆಯನ್ನು ನೀಡಿ

- 2021ರ ಡಿಸೆಂಬರ್‌ವರೆಗೆ ದೇಶದಲ್ಲಿ ಎಷ್ಟುಪ್ರಮಾಣ ಲಸಿಕೆ ಲಭ್ಯವಾಗಲಿದೆ ಎಂಬ ಕುರಿತು ಅಂದಾಜು ವರದಿ ಸಲ್ಲಿಸಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona