ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಮತಎಣಿಕೆಗೆ ಕೇಂದ್ರ ಸರ್ಕಾರಿ ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಈ ಕುರಿತು ಟಿಎಂಸಿ ಸರ್ಕಾರದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಸಿಬ್ಬಂದಿ ನಿಯೋಜನೆ ಆಯೋಗದ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ (ಮೇ.3): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಮತಎಣಿಕೆ ಕಾರ್ಯಕ್ಕೆ ಕೇಂದ್ರ ಸರ್ಕಾರಿ ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಅಲ್ಲದೆ ಈ ಕುರಿತು ಆಯೋಗದ ಸುತ್ತೋಲೆ ವಿಚಾರದಲ್ಲಿ ತಾನು ಮಧ್ಯಪ್ರವೇಶಿಸಲ್ಲ. ಜೊತೆಗೆ ಈ ವಿಚಾರವಾಗಿ ಹೆಚ್ಚಿನ ಆದೇಶದ ಅಗತ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಕೇಂದ್ರದ ನೌಕರರ ನೇಮಕ ಪ್ರಶ್ನಿಸಿದ್ದ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಎಂಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್‌.ನರಸಿಂಹ ಮತ್ತು ನ್ಯಾ.ಜೋಯ್‌ಮಲ್ಯ ಬಾಗ್ಚಿ ಅವರಿದ್ದ ವಿಶೇಷ ಪೀಠ, ‘ಏ.4ರಂದು ಮತಎಣಿಕೆಗೆ ಯಾರನ್ನು ನಿಯೋಜಿಸಬೇಕೆಂಬುದನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಏ.13ರ ಆಯೋಗದ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರನ್ನೂ ನಿಯೋಜಿಸುವುದಾಗಿ ಆಯೋಗ ತಿಳಿಸಿದೆ. ಹೀಗಾಗಿ ಆಯೋಗದ ನಿರ್ಧಾರದಲ್ಲಿ ತಪ್ಪಿಲ್ಲ’ ಎಂದು ತಿಳಿಸಿತು.

ಜೊತೆಗೆ, ‘ಮತಎಣಿಕೆ ವೇಳೆ ಅಕ್ರಮದ ಸಾಧ್ಯತೆ ಕುರಿತ ಟಿಎಂಸಿ ಆತಂಕಕ್ಕೆ ಯಾವುದೇ ಅರ್ಥ ಇಲ್ಲ. ಚುನಾವಣಾ ಆಯೋಗ ಬಿಡುಗಡೆ ಮಾಡಿದ ಪ್ರಕಟಣೆಯಲ್ಲೇ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳ ಸಿಬ್ಬಂದಿ ನಿಯೋಜಿಸುವುದಾಗಿ ಸ್ಪಷ್ಟವಾಗಿ ಹೇಳಲಾಗಿದೆ. ಜತೆಗೆ ಪಕ್ಷದ ಪ್ರತಿನಿಧಿಯೂ ಮತಎಣಿಕೆ ವೇಳೆ ಹಾಜರಿರಲಿದ್ದಾರೆ’ ಎಂದು ಪೀಠ ಹೇಳಿತು.

ಸುಪ್ರೀಂ ಕೋರ್ಟ್‌ ನಿರ್ಧಾರ ಸ್ವಾಗತಿಸಿದ ಬಿಜೆಪಿ ಮುಖಂಡ ಅಮಿತ್‌ ಮಾಳವೀಯ, ‘ಇದು ಟಿಎಂಸಿಗಾದ ಮತ್ತೊಂದು ಕಾನೂನು ಹಿನ್ನಡೆ’ ಎಂದಿದ್ದಾರೆ. ಮತ್ತೊಂದೆಡೆ ಟಿಎಂಸಿ ಕೂಡಾ ಸುಪ್ರೀಂಕೋರ್ಟ್‌ ನಿಲುವನ್ನು ಸ್ವಾಗತಿಸಿದ್ದು, ಏ.13ರ ಸುತ್ತೋಲೆಯನ್ನು ಅಕ್ಷರಶಃ ಮತ್ತು ನೈಜ ಆಶಯದೊಂದಿಗೆ ಪಾಲಿಸುವುದಾಗಿ ಚು.ಆಯೋಗವು ನ್ಯಾಯಾಲಯದ ಮುಂದೆ ತಿಳಿಸಿದೆ. ಇದು ನಮ್ಮ ನಿಲುವಿಗೆ ಪೂರಕವಾಗಿದೆ ಎಂದಿದೆ.