ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದೆಂಬ ಚುನಾವಣೋತ್ತರ ಸಮೀಕ್ಷೆಗಳು ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಅಕ್ರಮ ವಲಸಿಗರನ್ನು ಹೊರಹಾಕಿದರೆ, ಬಾಂಗ್ಲಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಅಲ್ಲಿನ ಸಂಸದ ಅಖ್ತರ್‌ ಹೊಸೈನಿ ಕಳವಳ ವ್ಯಕ್ತಪಡಿಸಿದ್ದಾರೆ.

ಢಾಕಾ (ಮೇ.2): ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿರುವ ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜು, ನೆರೆಯ ಬಾಂಗ್ಲಾದೇಶದ ತಲೆನೋವಿಗೆ ಕಾರಣವಾಗಿದೆ. ಈ ಬಗ್ಗೆ ಬಾಂಗ್ಲಾದ ಎನ್‌ಸಿಪಿ ಸಂಸದ ಅಖ್ತರ್‌ ಹೊಸೈನಿ ಆತಂಕ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಸದ್ಯ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿರುವಂತೆ ಬಿಜೆಪಿಗೆ ಅಧಿಕಾರ ಸಿಕ್ಕಿದರೆ ಅವರು ಬಾಂಗ್ಲನ್ನರನ್ನೆಲ್ಲ ಬಾಂಗ್ಲಾಗೆ ಓಡಿಸುತ್ತಾರೆ. ಮುಸಲ್ಮಾನರನ್ನವರು ಕಳಿಸುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಪರಿಣಾಮ ವಲಸಿಗರ ಸಾಗರವೇ ಹರಿದುಬಂದು ಇಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ:

ಹೊಸೈನಿಯವರ ಈ ಹೇಳಿಕೆಯಿಂದ, ‘ಮತಬ್ಯಾಂಕ್‌ಗಾಗಿ ಟಿಎಂಸಿ ನುಸುಳುಕೋರರನ್ನು ಬೆಂಬಲಿಸುತ್ತದೆ’ ಎಂಬ ಬಿಜೆಪಿಯ ಆರೋಪಕ್ಕೆ ಇನ್ನಷ್ಟು ಬಲ ಬಂದಿದ್ದು, ‘ಟಿಎಂಸಿಯ ಸಹಾಯಕರು ನಿಧಾನವಾಗಿ ಮುನ್ನೆಲೆಗೆ ಬರುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಚಾಟಿ ಬೀಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಏರ್ಪಟ್ಟಿದ್ದು, ಎರಡೂ ಪಕ್ಷಗಳು ಬಿರುಸಿನ ಪ್ರಚಾರ ಮಾಡಿ ಮತದಾರರ ಮನ ಗೆಲ್ಲಲು ಯತ್ನಿಸಿದ್ದವು. ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲೂ ಈ ಹಣಾಹಣಿ ಕಂಡುಬಂದಿತ್ತು. ಮತದಾನೋತ್ತರ ಸಮೀಕ್ಷೆಗಳ ಪೈಕಿ 6 ಬಿಜೆಪಿ ಪರ ಭವಿಷ್ಯ ನುಡಿದರೆ, ಇನ್ನೆರಡು ಸಂಸ್ಥೆಗಳು ಮಮತಾ ಬ್ಯಾನರ್ಜಿ 4ನೇ ಬಾರಿ ಸಿಎಂ ಪಟ್ಟಕ್ಕೇರಬಹುದು ಎಂದಿದ್ದವು.