ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಜಿರಳೆ ಪದ ಬಳಕೆ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಆರಂಭಗೊಂಡು ಕೋಲಾಹಲ ಸೃಷ್ಟಿಸಿದೆ. ಇದೀಗ ಇದೇ ಸಿಜೆಪಿ ಪ್ರತಿಭಟನೆ ವೇಳೆ ದೆಹಲಿ ಪರಿಸ್ಥಿತಿ ಕುರಿತು ನೀಡಿದ ಹೇಳಿಕೆ ಬೆನ್ನಲ್ಲೇ ಮಕ್ಕಿ ಜನತಾ ಪಾರ್ಟಿ ಆರಂಭಗೊಂಡಿದೆ.

ನವದೆಹಲಿ (ಅ.12) ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಪ್ರಮುಖ ನಾಯಕರು ಇದೀಗ ಪದ ಬಳಸುವಾಗ ಹತ್ತು ಬಾರಿ ಯೋಚನೆ ಮಾಡುವಂತಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕೆಲ ಯುವಕರ ಕುರಿತು ಜಿರೆಳೆಗಳು ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಭಿಜಿತ್ ದೀಪ್ಕೆ ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿದ್ದರು. ಇದೇ ಪಾರ್ಟಿ ಇದೀಗ ಎರಡನೇ ಆಂದೋಲನ ನಡೆಸುತ್ತಿದೆ. ಇದೇ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಕೈಗೊಂಡ ಭಾರಿ ಬಂದೋಬಸ್ತ್‌ನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ನೊಣ ಕೊಲ್ಲಲು ಸುತ್ತಿಗೆ ಬಳಸಬೇಡಿ ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದರು. ಆದರೆ ನೊಣ ಪದ ಬಳಕೆ ಮಾಡಿದ ಬೆನ್ನಲ್ಲೇ ಇದೀಗ ಮಕ್ಕಿ (ನೊಣ) ಜನತಾ ಪಾರ್ಟಿ ಆರಂಭಗೊಂಡಿದೆ.

ಮಕ್ಕಿ ಜನತಾ ಪಾರ್ಟಿ

ಅಕ್ಟೋಬರ್ 10 ರಂದು ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಪ್ರತಿಬಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇತ್ತ ಸಿಜೆಪಿ ನಾಯಕರ ವಶಕ್ಕೆ ಪಡೆದಿದ್ದರು. ಇನ್ನು ಮೆಟ್ರೋ ನಿಲ್ದಾಣ ಬಂದ್ ಮಾಡಲಾಗಿತ್ತು. ರೈಲು ಸಂಚಾರ ರದ್ದು ಮಾಡಲಾಗಿತ್ತು. ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಪ್ರತಿಭಟನಕಾರರು ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಈ ವೇಳೆ ಪೊಲೀಸರ ಕಠಿಣ ಕ್ರಮವನ್ನು ಸಿಜೆಐ ಸೂರ್ಯಕಾಂತ್ ಪ್ರಶ್ನಿಸಿದ್ದರು. ನೊಣ ಕೊಲ್ಲಲು ಸುತ್ತಿಗೆ ಬಳಸಬೇಡಿ ಎಂದು ದಿಲ್ಲಿ ಪೊಲೀಸ್ ಕಠಿಣ ಕ್ರಮದ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ನೊಣ ಪದ ಬಳಕೆ ಮಾಡಿದ್ದ ಕಾರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಿ ಜನತಾ ಪಾರ್ಟಿ ಆರಂಭಗೊಂಡಿದೆ.

ಎಂಜಿಜೆಪಿ ಹೇಳಿಕೊಂಡಿದ್ದೇನು?

ಎಂಜಿಪಿ ವ್ಯಂಗ್ಯದ ರೂಪದಲ್ಲಿ ಹುಟ್ಟಿಕೊಂಡ ಸೋಶಿಯಲ್ ಮೀಡಿಯಾ ಆಂದೋಲನ. ಇದು ನೋಂದಣಿಯಾಗಿರುವ ರಾಜಕೀಯ ಪಕ್ಷವಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಪಾರ್ಟಿ. ಕಾಕ್ರೋಚ್ ಜನತಾ ಪಾರ್ಟಿಗೆ ಸಿಕ್ಕಿರುವ ಬೆಂಬಲದ ಬಳಿಕ ಹಲವು ಜನತಾ ಪಾರ್ಟಿಗಳು ಸೋಶಿಯಲ ಮೀಡಿಯಾದಲ್ಲಿ ತಲೆ ಎತ್ತಿದೆ. ಇದೀಗ ಮಕ್ಕಿ ಜನತಾ ಪಾರ್ಟಿ ಹುಟ್ಟಿಕೊಂಡಿದೆ.

ಎಲ್ಲಾ ನೊಣಗಳೇ ಒಂದಾಗಿ, ವ್ಯವಸ್ಥೆಯಲ್ಲಿ ಅಂಟಿಕೊಂಡಿರುವ ಕೊಳೆಯ ವಿರುದ್ಧ ಶಬ್ದ ಮಾಡಿ ಎಂಬ ಸೂಚನೆಯನ್ನು ಸೋಶಿಯಲ್ ಮೀಡಿಯಾ ಎಂಜೆಪಿ ಖಾತೆಯಲ್ಲಿ ನೀಡಲಾಗಿದೆ. ನೊಣ, ಸದ್ದು, ದೂರು ಹಾಗೂ ವ್ಯವಸ್ಥೆಯಲ್ಲಿ ಅಂಟಿಕೊಂಡಿರುವ ಕೊಳೆಯನ್ನು ತೆಗೆಯುವುದು ಎಂಜೆಪಿ ಮೂಲ ಉದ್ದೇಶವಾಗಿದೆ ಎಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಮಕ್ಕಿ ಜನತಾ ಪಾರ್ಟಿ ಮುಂದಿನ ದಿನಗಳಲ್ಲಿ ಸಿಜೆಪಿ ರೀತಿಯಲ್ಲಿ ರೂಪತಾಳುತ್ತಾ ಅನ್ನೋ ಪ್ರಶ್ನೆಗಳು ಮೂಡಿದೆ.