ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ನಾಯಕರು ಭರ್ಜರಿ ಜಯಗಳಿಸಿ ಪ್ರಭಾವ ಬೀರಿದ್ದಾರೆ. ಪ್ರಮೀಳಾ ಜಯಪಾಲ್, ಸುಹಾಸ್ ಸುಬ್ರಮಣಿಯಂ ಸೇರಿದಂತೆ ಹಲವರು ಗೆಲುವು ಸಾಧಿಸಿದರೆ, ವಿವೇಕ್ ರಾಮಸ್ವಾಮಿ ಸೋಲನುಭವಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕದ ನಾಯಕರು ಮಿಂಚಿದ್ದಾರೆ. ವಿಜೇತ ಅಭ್ಯರ್ಥಿಗಳಲ್ಲಿ ಮೇರಿಲ್ಯಾಂಡ್ ಲೆಫ್ಟಿನೆಂಟ್ ಗವರ್ನರ್ ಅರುಣಾ ಮಿಲ್ಲರ್, ಪ್ರಮೀಳಾ ಜಯಪಾಲ್ ಮತ್ತು ಅಮಿ ಬೆರಾ ಸೇರಿದಂತೆ ಹಲವರು ಇದ್ದಾರೆ. ಟ್ರಂಪ್ ಅವರ ಕಟ್ಟಾ ಬೆಂಬಲಿಗ ವಿವೇಕ್ ರಾಮಸ್ವಾಮಿ ಸೋಲನ್ನ ಕಂಡರು. ಒಟ್ಟಾರೆ ಅಮೆರಿಕ ಚುನಾವಣೆಯಲ್ಲಿ 7 ಭಾರತೀಯ ಮೂಲದವರು ಹೆಚ್ಚು ಗಮನ ಸೆಳೆದರು. ಆ ಮೂಲಕ ಅಮೆರಿಕದಲ್ಲಿ ಭಾರತೀಯ ಮೂಲದ ನಾಯಕರು ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಅನ್ನೋದು ಸಾಬೀತಾಗಿದೆ. ಅವರ ವಿವರ ಇಲ್ಲಿದೆ.

ಪಿಯಾ ದಾಂಡಿಯಾ

ಫ್ಲೋರಿಡಾದ 22ನೇ ಕಾಂಗ್ರೆಷನಲ್ ಜಿಲ್ಲೆಯಲ್ಲಿ ಪಿಯಾ ದಾಂಡಿಯಾ ಭರ್ಜರಿ ಜಯಗಳಿಸಿದ್ದಾರೆ. ಅವರ ಪೋಷಕರು ಭಾರತದಿಂದ ಅಮೆರಿಕಕ್ಕೆ ವಲಸೆ ಹೋದವರು. ರಿಪಬ್ಲಿಕನ್ ಅಭ್ಯರ್ಥಿ ಕೇಸಿ ಆಸ್ಕರ್ ಅವರನ್ನು ಸೋಲಿಸಿ, ಸುಮಾರು 52% ಮತಗಳನ್ನು ಗಳಿಸಿದರು.

ಸುಹಾಸ್ ಸುಬ್ರಮಣಿಯಂ

ವರ್ಜೀನಿಯಾದ 10ನೇ ಕಾಂಗ್ರೆಷನಲ್ ಜಿಲ್ಲೆಯನ್ನು ಪ್ರತಿನಿಧಿಸುವ ಡೆಮಾಕ್ರಟಿಕ್ ಕಾಂಗ್ರೆಸ್ಸಿಗ ಸುಹಾಸ್ ಸುಬ್ರಮಣಿಯಂ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ರಿಪಬ್ಲಿಕನ್ ಎದುರಾಳಿ ಡೇವ್ ಬೆಕ್ವಿತ್ ಅವರನ್ನು ಸೋಲಿಸಿದ್ದಾರೆ. ಗೆಲುವಿನ ಬೆನ್ನಲ್ಲೇ ನಿಜವಾದ ಕೆಲಸ ಇವತ್ತಿನಿಂದ ಆರಂಭ ಆಗಿದೆ ಎಂದಿದ್ದಾರೆ.

ಪ್ರಮೀಳಾ ಜಯಪಾಲ್

ಅಮೆರಿಕ ಕಾಂಗ್ರೆಸ್‌ನಲ್ಲಿ ಪ್ರಮೀಳಾ ಜಯಪಾಲ್‌ಗೆ ತುಂಬಾ ಜನಪ್ರಿಯತೆ ಇದೆ. ಪಶ್ಚಿಮ ಕರಾವಳಿಯ ವಾಷಿಂಗ್ಟನ್ ರಾಜ್ಯದ 7ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ ಪ್ರತಿನಿಧಿಸುತ್ತಾರೆ. ರಿಪಬ್ಲಿಕನ್ ಅಭ್ಯರ್ಥಿ ನೀರವ್ ಸೇಠ್ ಅವರನ್ನು ಸೋಲಿಸಿದ್ದಾರೆ. ಇವರು 2016ರಲ್ಲಿ ಮೊದಲ ಬಾರಿಗೆ ಹೌಸ್ ಆಫ್ ರೆಫ್ರಿಜೆಂಟೀವ್ಸ್‌ಗೆ ಆಯ್ಕೆ ಆದರು. ಇತ್ತೀಚೆಗೆ ಅವರು ಭಾರತ ಸರ್ಕಾರವನ್ನು ಟೀಕಿಸಿದ್ದರು. ಭಾರತ ಸರ್ಕಾರವು 130 ಮಿಲಿಯನ್ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವದ ಹಕ್ಕನ್ನು ಜನರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದರು. ಅಲ್ಲದೇ ಎಸ್‌ಐಆರ್ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಪ್ರತಿಭಟನೆಗಳಿಗೆ ಜಯಪಾಲ್ ಬೆಂಬಲ ವ್ಯಕ್ತಪಡಿಸಿದ್ದರು. ಇವರು ಮೂಲತಃ ಚೆನ್ನೈನವರು.

ರೋ ಖನ್ನಾ

ಡೆಮಾಕ್ರಟಿಕ್ ಕಾಂಗ್ರೆಸ್ಸಿಗ ರೋ ಖನ್ನಾ ಮತ್ತೊಮ್ಮೆ ಕ್ಯಾಲಿಫೋರ್ನಿಯಾದ 17ನೇ ಕಾಂಗ್ರೆಷನಲ್ ಜಿಲ್ಲೆಯಿಂದ ಜಯ ಸಾಧಿಸಿದ್ದಾರೆ. ಚುನಾವಣಾ ಕಣದಲ್ಲಿ ರಿಪಬ್ಲಿಕನ್ ಪಕ್ಷದ ರಿತೇಶ್ ಟಂಡನ್ ಅವರನ್ನು ಸೋಲಿಸಿದ್ದಾರೆ.

ಅರುಣಾ ಮಿಲ್ಲರ್

ಮೇರಿಲ್ಯಾಂಡ್‌ನಲ್ಲಿ ಅರುಣಾ ಮಿಲ್ಲರ್ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಮಿಲ್ಲರ್ ಕಳೆದ ನಾಲ್ಕು ವರ್ಷಗಳ ಅವಧಿಗೆ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ. ಅಮಿಶ್ ಶಾ

ಭಾರತೀಯ ಮೂಲದ ವೈದ್ಯ ಮತ್ತು ಮಾಜಿ ರಾಜ್ಯ ಶಾಸಕ ಅಮಿಶ್ ಶಾ ಅರಿಜೋನಾದ 1 ನೇ ಕಾಂಗ್ರೆಷನಲ್ ಜಿಲ್ಲೆಯಲ್ಲಿ ಮುನ್ನಡೆ ಕಂಡಿದ್ದಾರೆ. ರಿಪಬ್ಲಿಕನ್ ಜೇ ಫೀಲಿ ವಿರುದ್ಧ ಬಲವಾದ ಮುನ್ನಡೆ ಸಾಧಿಸಿದ್ದಾರೆ.

ವಿವೇಕ್ ರಾಮಸ್ವಾಮಿ

ಹಲವಾರು ಭಾರತೀಯ ಮೂಲದ ಅಮೆರಿಕನ್ ನಾಯಕರು ಗೆಲುವು ಕಂಡರು. ಆದರೆ ರಿಪಬ್ಲಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಹಿನ್ನಡೆ ಅನುಭವಿಸಿದರು. ದೇಶಾದ್ಯಂತ ವಿರೋಧದ ಅಲೆ ಬೀಸುತ್ತಿದೆ. ಅವರು ಓಹಿಯೋ ಗವರ್ನಟೋರಿಯಲ್ ಚುನಾವಣೆಯಲ್ಲಿ ಡೆಮೋಕ್ರಾಟ್ ಆಮಿ ಆಕ್ಟನ್ ವಿರುದ್ಧ ಸೋತರು. ಟ್ರಂಪ್ ಬೆಂಬಲದೊಂದಿಗೆ ಸ್ಪರ್ಧಿಸಿದ ವಿವೇಕ್ ಸರಿಸುಮಾರು 46% ಮತಗಳನ್ನು ಪಡೆದರು.