ನುಸುಳುಕೋರ ರೋಹಿಂಗ್ಯ ಮುಸ್ಲಿಮರಿಗೆ ಭವ್ಯ ಸ್ವಾಗತ ಕೊಡಬೇಕೆ? ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಅಕ್ರಮವಾಗಿ ಭಾರತಕ್ಕೆ ಬರುತ್ತಾರೆ, ಅವರ ಮಕ್ಕಳಿಗೆ ಶಿಕ್ಷಣ, ಬೇಕು, ಆಹಾರ ಬೇಕು ಎಂದರೆ ಕೊಡಲು ಸಾಧ್ಯವೇ? ಎಂದು ಸುಪ್ರೀಂ ಗರಂ ಆಗಿದೆ. 

ನವದೆಹಲಿ (ಡಿ.02) ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿರುವ ರೋಹಿಂಗ್ಯ ಮುಸ್ಲಿಮರು ಬೆಂಗಳೂರು, ದೆಹಲಿ, ಪಶ್ಚಿಮ ಬಂಗಾಳ ಸೇರದಂತೆ ದೇಶದ ಎಲ್ಲಾ ಭಾಗದಲ್ಲಿ ನೆಲೆಸಿದ್ದಾರೆ. ಇಂತಹ ಅಕ್ರಮ ನುಸುಳುಕೋರರನ್ನು ಹುಡುಕಿ ಗಡೀಪಾರು ಮಾಡುವ ಕೆಲಸವನ್ನು ಹಲವು ರಾಜ್ಯಗಳು ಮಾಡುತ್ತಿದೆ. ಇದರ ನಡುವೆ ರೋಹಿಂಗ್ಯ ಮುಸ್ಲಿಮವರಿಗೆ ಬದುಕಲು ಅವಕಾಶಕೊಡಿ. ಮಾನವೀಯತೆ ಆಧಾರದಲ್ಲಿ ರೋಹಿಂಗ್ಯ ಮುಸ್ಲಿಮರ ಮಕ್ಕಳಿಗೆ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು ಅನ್ನೋ ವಾದ ವಿವಾದ ನಡೆಯುತ್ತಲೇ ಇದೆ. ಇದೀಗ ಸಾಮಾಜಿಕ ಕಾರ್ಯಕರ್ತ ರಿತಾ ಮಾನ್‌ಚಂದಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಚಾಟಿ ಬೀಸಿದೆ. ಭಾರತದಲ್ಲಿ ಅಕ್ರಮ ನುಸುಳುಕೋರ ರೋಹಿಂಗ್ಯ ಮುಸ್ಲಿಮರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಬೇಕಾ, ಅವರಿಗೆ ಇಲ್ಲಿ ಇರಲು ಅವಕಾಶ ಮಾಡಿಕೊಡಬೇಕಾ? ಎಂದು ಪ್ರಶ್ನಿಸಿದೆ.

ರೋಹಿಂಗ್ಯ ಮುಸ್ಲಿಮರ ಹಕ್ಕಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ರಿತಾ ಮಾನ್‌ಚಂದ್, ಅಕ್ರಮವಾಗಿ ಭಾರತಕ್ಕೆ ನುಸುಳಿ ಇಲ್ಲಿ ನೆಲೆಸಿರುವ ರೋಹಿಂಗ್ಯ ಮುಸ್ಲಿಮರ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಸೂರ್ಯ ಕಾಂತ್, ಜಸ್ಟೀಸ್ ಜೋಯ್‌ಮಲ್ಯ ಬಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ದೆಹಲಿ ಪೊಲೀಸರು ಮೇ ತಿಂಗಳಲ್ಲಿ ಕೆಲ ರೋಹಿಂಗ್ಯ ಮುಸ್ಲಿಮರನ್ನು ಬಂಧಿಸಿತ್ತು. ಆದರೆ ಬಂಧಿತ ರೋಹಿಂಗ್ಯ ಮುಸ್ಲಿಮರು ನಾಪತ್ತೆಯಾಗಿದ್ದಾರೆ. ಅವರ ಹಕ್ಕುಗಳ ಕುರಿತು ಪ್ರಶ್ನಿಸಿ ರಿತಾ ಮಾನ್‌ಚಂದ್ ಅರ್ಜಿ ಸಲ್ಲಿಸಿದ್ದರು.

ರೋಹಿಂಗ್ಯ ಮುಸ್ಲಿಮರ ಗಡೀಪಾರು ಮಾಡಿದರೆ ಸಮಸ್ಯೆ ಏನು

ಭಾರತ ಪ್ರವೇಶಿಸಲು ನಿಮ್ಮ ಬಳಿ ಸೂಕ್ತ ದಾಖಲೆ ಇಲ್ಲದಿದ್ದರೆ, ಅವರನ್ನು ಅಕ್ರಮ ನಸುಳುಕೋರರು ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ನುಸುಳುಕೋರರು ಅಕ್ರಮವಾಗಿ ಭಾರತ ಪ್ರವೇಶಿಸಿದರೆ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ಮಾಡಬೇಕೇ? ಹೀಗೆ ಅಕ್ರಮವಾಗಿ ನೆಲೆಸಿರುವ ಮಂದಿಯನ್ನು ಗಡೀಪಾರು ಮಾಡಿದರೆ ನಿಮಗೆ ಸಮಸ್ಯೆ ಎನು ಎಂದು ಜಸ್ಟೀಸ್ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಬಡವರಿದ್ದಾರೆ. ಅಕ್ರಮವಾಗಿ ಭಾರತಕ್ಕೆ ನುಸುಳಿ, ಇಲ್ಲೇ ನೆಲೆಸಿ ಇದೀಗ ರಾಜ್ಯದ ಹಕ್ಕು, ದೇಶದ ಸೌಲಭ್ಯಗಳಿಗೆ ಬೇಡಿಕೆ ಮಾಡಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟೀಸ್ ಸೂರ್ಯ ಕಾಂತ್ ಹೇಳಿದ್ದಾರೆ.

ಮೊದಲು ಸುರಂಗ ಕೊರೆದು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡುತ್ತಾರೆ. ಬಳಿಕ ಇಲ್ಲೇ ಉಳಿಯುತ್ತಾರೆ. ಬಳಿಕ ಹಕ್ಕುಗಳ ಅಡಿಯಲ್ಲಿ ಆಹಾರ ಕೇಳುತ್ತಾರೆ, ಇರಲು ಸೂರು ಕೇಳುತ್ತಾರೆ, ಮಕ್ಕಳಿಗೆ ವಿಧ್ಯಾಭ್ಯಾಸ ಕೇಳುತ್ತಾರೆ. ಇದಕ್ಕೆಲ್ಲಾ ಕಾನೂನು ವಿಸ್ತರಣೆ ಮಾಡುತ್ತಾ ಹೋದರೆ ಗತಿಯೇನು? ಎಂದು ಚೀಫ್ ಜಸ್ಟೀಸ್ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ.