Indian Navy Rafale-M deal : ಭಾರತೀಯ ನೌಕಾಪಡೆಗೆ 2029ರೊಳಗೆ 26 ರಫೇಲ್-ಎಂ ಫೈಟರ್ ಜೆಟ್‌ಗಳು ಸೇರ್ಪಡೆಯಾಗಲಿವೆ. ಇವು ಐಎನ್ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್‌ನಿಂದ ಕಾರ್ಯನಿರ್ವಹಿಸಲಿವೆ. ಸ್ವದೇಶಿ TEDBF ಯುದ್ಧವಿಮಾನ ಸಿದ್ಧವಾಗುವವರೆಗೆ ಇದು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಭಾರತದ ನೌಕಾಪಡೆ ಮಡಿಲು ಸೇರಲಿದೆ ರಾಫೆಲ್ ಎಂ ಫೈಟರ್ ಜೆಟ್
ನವದೆಹಲಿ: ಭಾರತೀಯ ನೌಕಾಪಡೆಗೆ 2029ರ ಒಳಗೆ ಅಂದರೆ ಇನ್ನೂ 4 ವರ್ಷಗಳಲ್ಲಿ ರಫೇಲ್-ಎಂ ಫೈಟರ್ ಜೆಟ್‌ಗಳು ಸೇರ್ಪಡೆಯಾಗಲಿವೆ ಎಂದು ವರದಿಯಾಗಿದೆ. 2029ರ ಹೊತ್ತಿಗೆ ಭಾರತೀಯ ನೌಕಾಪಡೆಯು ತನ್ನ ವಿಮಾನವಾಹಕ ನೌಕೆಗಳಿಗಾಗಿ ನಾಲ್ಕು ರಫೇಲ್ ಎಂ ಫೈಟರ್ ಜೆಟ್‌ಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲು ಪ್ರಾರಂಭಿಸಲಿದೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರು ಹೇಳಿದ್ದಾರೆ. 2025 ರ ನೌಕಾಪಡೆ ದಿನಾಚರಣೆಗೂ ಮೊದಲು ಮಾತನಾಡಿದ ಅವರು ಈ ವಿಚಾರ ತಿಳಿಸಿದ್ದಾರೆ. ಭಾರತೀಯ ನೌಕಾಪಡೆಗೆ 26 ರಫೇಲ್-ಎಂ ಫೈಟರ್ ಜೆಟ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಈ ವರ್ಷದ ಏಪ್ರಿಲ್‌ನಲ್ಲಿ ಸಹಿ ಹಾಕಲಾಯಿತು, ಇದು ನೌಕಾಪಡೆಯೂ ತನ್ನ ಎರಡೂ ವಿಮಾನವಾಹಕ ನೌಕೆಗಳನ್ನು ಅವುಗಳ ಯುದ್ಧವಿಮಾನಗಳ ಪೂರ್ಣ ಪೂರಕದೊಂದಿಗೆ ನಿಯೋಜಿಸಲು ಅನುವು ಮಾಡಿಕೊಡುತ್ತದೆ ಎಂದು ನೌಕಾಪಡೆ ಮುಖ್ಯಸ್ಥರು ಹೇಳಿದ್ದಾರೆ.
22 ಸಿಂಗಲ್ ಸೀಟರ್‌ಗಳು ಹಾಗೂ 4 ಎರಡು ಸೀಟುಗಳ ಫೈಟರ್ ಜೆಟ್
ನೌಕಾಪಡೆಯ ದಿನಾಚರಣೆಗೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅಡ್ಮಿರಲ್ ದಿನೇಶ್ ತ್ರಿಪಾಠಿ, 2029 ರ ವೇಳೆಗೆ ಭಾರತೀಯ ನೌಕಾಪಡೆಗೆ ನಾಲ್ಕು ರಫೇಲ್ ಯುದ್ಧ ವಿಮಾನಗಳ ಮೊದಲ ಸೆಟ್ ಸಿಗುವ ನಿರೀಕ್ಷೆಯಿದೆ ಎಂದರು. ಕಳೆದ ಏಪ್ರಿಲ್ 28 ರಂದು ಭಾರತ ಮತ್ತು ಫ್ರಾನ್ಸ್ ದೇಶಗಳು ಭಾರತೀಯ ನೌಕಾಪಡೆಗಾಗಿ 26 ರಫೇಲ್-ಮೆರೈನ್ ಜೆಟ್‌ಗಳನ್ನು ಅವುಗಳಲ್ಲಿ 22 ಸಿಂಗಲ್ ಸೀಟರ್‌ಗಳು ಹಾಗೂ 4 ಎರಡು ಸೀಟುಗಳ ಫೈಟರ್ ಜೆಟ್‌ಗಳನ್ನು ಖರೀದಿಸಲು ಅಂತರ್ ಸರ್ಕಾರಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ: ತನಿಖೆಗೆ ಡಿಜಿಸಿಎ ಆದೇಶ
ಈ ಒಪ್ಪಂದವು ತರಬೇತಿಯನ್ನು ಕೂಡ ಒಳಗೊಂಡಿದೆ. ಸುಮಾರು 64,000 ಕೋಟಿ ರೂ. ವೆಚ್ಚದಲ್ಲಿ ಐದು ವರ್ಷಗಳ ಅವಧಿಗೆ ತರಬೇತಿ, ಸಿಮ್ಯುಲೇಟರ್, ಸಂಬಂಧಿತ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ಕಾರ್ಯಕ್ಷಮತೆ ಆಧಾರಿತ ಲಾಜಿಸ್ಟಿಕ್ಸ್ (ಪಿಬಿಎಲ್) ಅನ್ನು ಈ ಒಪ್ಪಂದ ಒಳಗೊಂಡಿದೆ. ಈ ಫ್ರಾನ್ಸ್ ನಿರ್ಮಿತ ರಫೇಲ್-ಎಂ ಫೈಟರ್ ಜೆಟ್‌ಗಳು, ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಈ ಎರಡೂ ಯುದ್ಧ ನೌಕೆಗಳಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.
ಸ್ವದೇಶಿ ನಿರ್ಮಿತ ಟ್ವಿನ್ ಎಂಜಿನ್ ಡೆಕ್-ಬೇಸ್ಡ್ ಫೈಟರ್ (TEDBF) ಸಿದ್ಧವಾಗುವವರೆಗೆ ತಾತ್ಕಾಲಿಕ ಕ್ರಮವಾಗಿ ಭಾರತೀಯ ನೌಕಾಪಡೆಯು 26 ರಫೇಲ್-ಎಂ ಫೈಟರ್ ಜೆಟ್‌ಗಳ ಖರೀದಿಗೆ ಮುಂದಾಗಿದೆ. ಯೋಜನೆಯ ಪ್ರಕಾರ ದೇಶಿ ನಿರ್ಮಿತ ಟ್ವಿನ್ ಎಂಜಿನ್ ಡೆಕ್-ಬೇಸ್ಡ್ ಫೈಟರ್ (TEDBF) 2032-2033ರ ಸುಮಾರಿಗೆ ಸೇವೆಯಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ನೌಕಾಪಡೆಗೆ ರಫೇಲ್-ಎಂ ಸೇರ್ಪಡೆಯು ಹಳೆಯದಾದ ಮಿಗ್-29ಕೆ ಯುದ್ಧ ವಿಮಾನಗಳನ್ನು ಬದಲಾಯಿಸಲಿದೆ. ಜೊತೆಗೆ ನೌಕಾಪಡೆಗೆ ಆಧುನಿಕ ಯುದ್ಧ ವಿಮಾನದ ಸಾಮರ್ಥ್ಯವನ್ನು ಒದಗಿಸುತ್ತದೆ.
ಇದನ್ನೂ ಓದಿ: ದುಬೈನಿಂದ ಬರ್ತಿದ್ದ ವಿಮಾನದಲ್ಲಿ ಗಗನಸಖಿಗೆ ಕಿರುಕುಳ: ಕೇರಳದ ಸಾಫ್ಟ್‌ವೇರ್ ಇಂಜಿನಿಯರ್ ಅರೆಸ್ಟ್


