- Home
- Karnataka Districts
- ಬೀದಿ ನಾಯಿ ಮಾಹಿತಿಗೆ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ನೋಟಿಸ್: ಸುಪ್ರೀಂ ಕೋರ್ಟ್ ಹೇಳಿದ್ದೇನು?
ಬೀದಿ ನಾಯಿ ಮಾಹಿತಿಗೆ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ನೋಟಿಸ್: ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಮಾಹಿತಿ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳಿಗೆ ಆಯಾ ನಗರ ಪಾಲಿಕೆಗಳು ನೋಟಿಸ್ ಜಾರಿ ಮಾಡಿವೆ.

ನೋಟಿಸ್ ಜಾರಿ
ಬೆಂಗಳೂರು (ನ.29): ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಮಾಹಿತಿ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳಿಗೆ ಆಯಾ ನಗರ ಪಾಲಿಕೆಗಳು ನೋಟಿಸ್ ಜಾರಿ ಮಾಡಿವೆ. ದೇಶದ ಸರ್ಕಾರಿ, ಖಾಸಗಿ ಸೇರಿದಂತೆ ಸಂಘ ಸಂಸ್ಥೆಯ ಆವರಣದಲ್ಲಿ ಇರುವ ಬೀದಿ ನಾಯಿಗಳನ್ನು ಸ್ಥಳಾಂತರಿಸಿ, ಆಶ್ರಯ ತಾಣ ನಿರ್ಮಿಸಬೇಕು ಈ ಕುರಿತು ಎಂಟು ವಾರದಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಸಂಸ್ಥೆಗಳಿಗೆ ನೋಟಿಸ್
ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು-ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೋಚಿಂಗ್ ಕೇಂದ್ರಗಳು (ಹಾಸ್ಟೆಲ್‌ಸಹಿತ/ರಹಿತ), ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು -ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು, ವೈದ್ಯ ಕಾಲೇಜುಗಳು, ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು (ಸಾರ್ವಜನಿಕ ಅಥವಾ ಖಾಸಗಿ), ಬಸ್ ನಿಲ್ದಾಣಗಳು, ಡಿಪೋ, ಇಂಟರ್ ಸ್ಟೇಟ್ ಬಸ್ ಟರ್ಮಿನಲ್ ಮತ್ತು ರೈಲು ನಿಲ್ದಾಣ ಸೇರಿದಂತೆ ಇತರೆ ಇಲಾಖೆ, ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್‌ನಲ್ಲಿ ಏನಿದೆ?
ಬೀದಿನಾಯಿಗಳ ಸಂಖ್ಯೆ ಮಾಹಿತಿ ನೀಡಬೇಕು. ಸಂಸ್ಥೆಗಳ ಆವರಣದೊಳಗೆ ಬೀದಿ ನಾಯಿಗಳ ಮರು ಪ್ರವೇಶವನ್ನು ತಡೆಗಟ್ಟಲು ಆಯಾ ಸಂಸ್ಥೆಗಳ ಆವರಣಕ್ಕೆ ತಡೆಗೊಡೆ ಹಾಕಿಸಬೇಕು. ಸಂಸ್ಥೆಯಲ್ಲಿ ಬೀದಿನಾಯಿಗಳ ಮರುಪ್ರವೇಶ ತಡೆಗಟ್ಟುವಿಕೆ, ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಯನ್ನು ಕಾಪಾಡುವಿಕೆ ಹಾಗೂ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಲು ಓರ್ವ ಜವಾಬ್ದಾರಿಯುತ ಅಧಿಕಾರಿಯನ್ನು ನಾಮ ನಿರ್ದೇಶನ ಮಾಡಬೇಕು. ನೋಡಲ್ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸಂಸ್ಥೆಯ ಆವರಣದಲ್ಲಿ ಪ್ರದರ್ಶಿಸಬೇಕು. ಸಂಬಂಧ ಪಟ್ಟ ಪಾಲಿಕೆಗೆ ನೋಡಲ್ ಅಧಿಕಾರಿ ಮಾಹಿತಿ ನೀಡಬೇಕು. ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು ಆವರಣದಲ್ಲಿ ಬೀದಿನಾಯಿಗಳ ಪ್ರವೇಶ ತಡೆಗಟ್ಟಲು 24*7 ನಿಗಾ ವಹಿಸಲು ಭದ್ರತಾ ಸಿಬ್ಬಂದಿ ನೇಮಿಸಬೇಕೆಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ವಿವಿಧ ಕ್ರಮಗಳು
ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ನಗರ ಪಾಲಿಕೆಗಳ ಪಶುಪಾಲನಾ ವಿಭಾಗದ ಅಧಿಕಾರಿಗಳು ಗುರುತಿಸಲಿದ್ದಾರೆ. ಈ ತಾಣಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಬೇರೆ ಸ್ಥಳಗಳಲ್ಲಿ ಆಹಾರ ನೀಡುವುದು ಕಂಡು ಬಂದಲ್ಲಿ ಸುಪ್ರೀಂ ಆದೇಶ ಉಲ್ಲಂಘನೆಯಾಗುತ್ತದೆ. ಈ ಆದೇಶವನ್ನು ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಸಮಸ್ಯೆ ಪರಿಹರಿಸಲು ಸಹಕರಿಸಬೇಕು
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಮತ್ತು ಎಬಿಸಿ ನಿಯಮಗಳು ಮಾರ್ಗಸೂಚಿಗಳಂತೆ ಸಾರ್ವಜನಿಕರು ಬೀದಿನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಆಹಾರ, ಆರೋಗ್ಯ, ಭದ್ರತೆ ಮತ್ತು ಸುರಕ್ಷಿತ ಆಶ್ರಯ ನೀಡಿ ಬೀದಿನಾಯಿಗಳ ಸಮಸ್ಯೆ ಪರಿಹರಿಸಲು ಸಹಕರಿಸಬೇಕು. ಬೀದಿ ನಾಯಿಗಳನ್ನು ದತ್ತು ಪಡೆಯಲು ಐದು ನಗರ ಪಾಲಿಕೆಗಳ ಪಶುಪಾಲನಾ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಬೀದಿ ನಾಯಿ ಕಡಿತ ಹಾಗೂ ಉಪಟಳ ಸಂಬಂಧಿತ ದೂರಿಗೆ ಸಹಾಯವಾಣಿ ಸಂಖ್ಯೆ(1533) ಮತ್ತು ರೇಬೀಸ್ ಸಹಾಯವಾಣಿ ಸಂಖ್ಯೆ 6364893322 ಗೆ ಕರೆ ಮಾಡಬಹುದಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

