ಹಿರಿಯ ಐಎಎಸ್‌ ಅಧಿಕಾರಿಯ ಪುತ್ರಿ ಮಾಧುರಿ ಸಾಹಿತಿಬಾಯಿ, ಪತಿಯಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವಿವಾಹವಾದ ಕೆಲವೇ ತಿಂಗಳುಗಳಲ್ಲಿ ಪತಿ ರಾಜೇಶ್ ನಾಯ್ಡು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.

ಹೈದರಾಬಾದ್ (ಡಿ.2): ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡನಿಂದ ಅತಿಯಾದ ವರದಕ್ಷಿಣೆ ಕಿರುಕುಳ ಎದುರಿಸಿದ ಯುವತಿಯೊಬ್ಬಳು ಆ*ತ್ಮಹತ್ಯೆಯ ಮೂಲಕ ಸಾವಿಗೆ ಶರಣಾಗಿದ್ದಾರೆ. ಸಾವು ಕಂಡ ನವವಿವಾಹಿತೆಯನ್ನು ಆಂಧ್ರಪ್ರದೇಶದ ಹಿರಿಯ ಐಎಎಸ್‌ ಅಧಿಕಾರಿಯ ಮಗಳು ಎನ್ನಲಾಗಿದೆ. ಪೊಲೀಸರ ಪ್ರಕಾರ, ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ವಾಸ ಮಾಡುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಚಿನ್ನರಾಮುಡು ಅವರ ಪುತ್ರಿ ಮಾಧುರಿ ಸಾಹಿತಿಬಾಯಿ (27) ಭಾನುವಾರ ರಾತ್ರಿ ತಮ್ಮ ರೂಮ್‌ನಲ್ಲಿದ್ದ ಬಾತ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಮಂಗಳಗಿರಿ ಏಮ್ಸ್‌ಗೆ ಸ್ಥಳಾಂತರಿಸಿದ್ದರು. ತಾಯಿ ಲಕ್ಷ್ಮಿಬಾಯಿ ದೂರಿನ ಮೇರೆಗೆ ಮಹಿಳೆಯ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಂದ್ಯಾಲ್ ಜಿಲ್ಲೆಯ ಬೆತಂಚರ ಮಂಡಲದ ಬುಗ್ಗನಪಲ್ಲಿ ತಾಂಡಾ ನಿವಾಸಿ ರಾಜೇಶ್ ನಾಯ್ಡು ಅವರೊಂದಿಗೆ ಮಾಧುರಿ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಮಾರ್ಚ್ 2025 ರಲ್ಲಿ ಮಾಧುರಿ ಅವರನ್ನು ಪ್ರೀತಿಸುತ್ತಿದ್ದರು. ಮದುವೆಯಾದ ಮೂರನೇ ತಿಂಗಳಿನಿಂದ ತಮ್ಮ ಮಗಳಿಗೆ ಪತಿ ಕಿರುಕುಳ ನೀಡುತ್ತಿದ್ದರು ಎಂದು ಮಾಧುರಿಯ ಪೋಷಕರು ಹೇಳಿದ್ದಾರೆ. ಹೀಗಾಗಿ, ಸುರಕ್ಷತಾ ಕಾರಣಗಳಿಗಾಗಿ ಸ್ಥಳೀಯ ಪೊಲೀಸರ ಸಹಾಯದಿಂದ ಎರಡು ತಿಂಗಳ ಹಿಂದೆ ಆಕೆಯನ್ನು ತಮ್ಮ ಮನೆಗೆ ಕರೆತರಲಾಗಿತ್ತು ಎಂದಿದ್ದಾರೆ.

ಹೆಚ್ಚಿನ ವರದಕ್ಷಿಣೆ ಬೇಕೆಂದು ಕಿರುಕುಳ

ರಾಜೇಶ್ ನಾಯ್ಡು ತಮ್ಮ ಮಗಳಿಗೆ ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಮಾಧುರಿಯ ತಂದೆ ಚಿನ್ನರಾಮುಡು ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಅವರು ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಎರಡು ತಿಂಗಳ ಹಿಂದೆ ಮಗಳು ನಮಗೆ ಕರೆ ಮಾಡಲು ಇಷ್ಟಪಟ್ಟರೂ, ತನ್ನ ಗಂಡನ ಅನುಮತಿ ಪಡೆಯಬೇಕು ಮತ್ತು ಅವಳು ಅಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದಾಗ ನಾವು ಆಕೆಯನ್ನು ಮನೆಗೆ ಕರೆತಂದೆವು" ಎಂದಿದ್ದಾರೆ.

'ಆಕೆ ಮನೆಗೆ ಬಂದ ದಿನದಿಂದಲೂ, ಮಗಳು ತನ್ನ ಗಂಡ ನನ್ನ ನಿಜವಾದ ಪ್ರೀತಿ ಅಲ್ಲ ಎಂದೇ ಚಿಂತೆ ಮಾಡುತ್ತಿದ್ದಳು. ಹಾಗೇನಾದರೂ ಪ್ರೀತಿ ಮಾಡುತ್ತಿದ್ದರೆ ಆತ ನನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದ. ನಾವು ಈ ರೀತಿ ಬೇರೆಯಾಗುತ್ತೇವೆ ಎಂದು ಭಾವಿಸಿರಲಿಲ್ಲ ಎಂದು ಆಕೆ ಹೇಳುತ್ತಿದ್ದಳು..' ಎಂದು ಚಿನ್ನರಾಮುಡು ತಿಳಿಸಿದ್ದಾರೆ.