ಬ್ಲಿಂಕಿಟ್‌ಗಿಂತ ಫಾಸ್ಟ್, ಮದುವೆಯಾಗಿ ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಡಿವೋರ್ಸ್ ಕೊಟ್ಟ ಪತ್ನಿ, ಹಲವು ತಿಂಗಳಿನಿಂದ ಮದುವೆ ತಯಾರಿ ನಡೆದಿದೆ. ಅದ್ಧೂರಿಯಾಗಿ ಮದವೆಯೂ ಮುಗಿದಿದೆ. ಮಂಟಪದಿಂದ ಮದುವೆ ಮನೆಗೆ ಬಂದ 20 ನಿಮಿಷದಲ್ಲಿ ಎಲ್ಲವೂ ಉಲ್ಟಾ ಆಗಿದೆ. 

ದಿಯೋರಿಯಾ (ಡಿ.02) ಮದುವೆಯಾದ ಬೆನ್ನಲ್ಲೇ ಡಿವೋರ್ಸ್ ಆಗಿರುವ ಘಟನೆ ಹೊಸದೇನಲ್ಲ. ಆದರೆ ಇದು 10 ನಿಮಿಷದ ಜಮಾನ. ಏನೇ ಆರ್ಡರ್ ಮಾಡಿದರೂ, ಏನೇ ಬೇಕೆಂದರೂ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಆದರೆ ಮದುವೆ ಕೂಡ ಇದೇ ರೀತಿ ನಿಮಿಷದ ಸಂಬಂಧವಾಗುತ್ತೆ ಅನ್ನೋದು ಮಾತ್ರ ಯಾರೂ ಊಹಿಸಿರಲಿಲ್ಲ. ಇಲ್ಲೊಂದು ಮದುವೆ ಜೋಡಿ ಕೇವಲ 20 ನಿಮಿಷದಲ್ಲಿ ವಿಚ್ಚೇದನ ಪಡೆದುಕೊಂಡ ಘಟನೆ ನಡೆದಿದೆ. ಮದುವೆ ಮಂಟಪದಿಂದ ಗಂಡನ ಮನೆಗೆ ಬಂದು ಇನ್ನು ಡ್ರೆಸ್ ಚೇಂಜ್ ಮಾಡಿಲ್ಲ, ಅತಿಥಿಗಳು, ಸಂಬಂಧಿಕರು ಕುಡಿಯುತ್ತಿದ್ದ ಜ್ಯೂಸ್ ಗಂಟಲಿನಿಂದ ಇಳಿದಿಲ್ಲ, ಅಷ್ಟರಲ್ಲೇ ಡಿವೋರ್ಸ್ ಆದ ಘಟನೆ ಉತ್ತರ ಪ್ರದೇಶದ ದಿಯೋರಾದಲ್ಲಿ ನಡೆದಿದೆ. ನೆಟ್ಟಿಗರು ಇದು ಬ್ಲಿಂಕಿಟ್ ಮದುವೆ ಎಂದು ಕಮೆಂಟ್ ಮಾಡಿದ್ದಾರೆ.

ಅದ್ಧೂರಿ ಮದುವೆ, ಅಷ್ಟೇ ವೇಗದಲ್ಲಿ ಡಿವೋರ್ಸ್

ವಿಶಾಲ್ ಮಾಧೇಸಿಯಾ ಭಾಲೌನಿಯಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದಾನೆ. ತನ್ನ ತಂದೆಯ ಸ್ಟೋರ್‌ನಲ್ಲಿ ಪ್ರಮುಖ ಜವಾಬ್ದಾರಿಯನ್ನು ವಿಶಾಲ್ ಮಾಧೇಸಿಯಾ ನೋಡಿಕೊಳ್ಳುತ್ತಿದ್ದಾನೆ. ಈತನ ಮದುವೆ ಸಲೇಂಪುರ್ ನಿವಾಸಿ ಪೂಜಾ ಜೊತೆ ಫಿಕ್ಸ್ ಆಗಿತ್ತು. ಮದುವೆ ಫಿಕ್ಸ್ ಆದ ಬಳಿಕ ಫೋನ್ ಮೂಲಕ ಮಾತುಕತೆ, ಹರಟೆ ಎಲ್ಲವೂ ನಡೆಯುತ್ತಿತ್ತು. ಇತ್ತ ಕುಟುಂಬಸ್ಥರು, ಆಪ್ತರು ಅದ್ಧೂರಿ ಮದುವೆ ತಯಾರಿ ಮಾಡಿದ್ದರು. ಕಳೆದ ಹಲವು ತಿಂಗಳಿನಿಂದ ಎರಡೂ ಕುಟುಂಬಗಳು ಮಾತುಕತೆ ನಡೆಸಿದೆ. ಮದುವೆ, ಊಟದ ವ್ಯವಸ್ಥೆ, ಮೆನು, ಅತಿಥಿ ಸತ್ಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದೆ.

ನವೆಂಬರ್ 25ರಂದು ವರ ಮೆರವಣಿಗೆ ಮೂಲಕ ಮದುವೆ ಮಂಟಪ ತಲುಪಿದ್ದಾನೆ. ವಧುವಿನ ಕುಟುಂಬಸ್ಥರು ವರನ ಸ್ವಾಗತಿಸಿದ್ದಾರೆ. ನವೆಂಬರ್ 25ರ ಸಂಜೆ ಮದುವೆ ಆಯೋಜನೆಗೊಂಡಿತ್ತು. ಮುಹೂರ್ತದ ಪ್ರಕಾರ ಮದುವೆ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಎಲ್ಲಾ ಕಾರ್ಯಕ್ರಮ ಮುಗಿದಿದೆ. ನವ ಜೋಡಿಗಳು ನೇರವಾಗಿ ಮನೆಗೆ ಆಗಮಿಸಿದ್ದಾರೆ. ಇವರ ಜೊತೆಗೆ ಕುಟುಂಬಸ್ಥರು, ಆಪ್ತರು ಮನೆಗೆ ಆಗಮಿಸಿದ್ದಾರೆ.

ಮದುವೆ ಮನೆಗೆ ಬಂದ ನವ ಜೋಡಿಗೆ ಸ್ವಾಗತ

ವಿಶಾಲ್ ಮಾಧೇಸಿಯಾ ತನ್ನ ಪತ್ನಿ ಪೂಜಾ ಕರೆದುಕೊಂಡು ಮನೆ ಒಳಗೆ ಪ್ರವೇಶಿಸಿದ್ದಾರೆ. ಗಂಡನ ಮನೆಗೆ ಬಂದ ಪೂಜಾಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.ಬಳಿಕ ನವ ಜೋಡಿಗಳನ್ನು ಅವರ ಕೋಣೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಕೋಣೆ ಪ್ರವೇಶಿಸಿದ ಕೇವಲ 20 ನಿಮಿಷದಲ್ಲಿ ಪೂಜಾ ಹೊರಬಂದಿದ್ದಾಳೆ. ಅಷ್ಟರಲ್ಲೇ ಅತಿಥಿಗಳು, ಸಂಬಂಧಿಕರು ಜ್ಯೂಸ್ ಕುಡಿಯುತ್ತಾ, ಮಾತನಾಡುತ್ತಿದ್ದರು. ಮನೆಯ ಲೀವಿಂಗ್ ಏರಿಯಾಗೆ ಬಂದ ಪೂಜಾ, ನನಗೆ ಈ ಸಂಬಂಧ ಮುಂದವರಿಸಲು ಸಾಧ್ಯವಿಲ್ಲ. ನಾನು ಈಗಲೇ ಮನೆಗೆ ಹೋಗುತ್ತೇನೆ. ಪೋಷಕರಿಗೆ ಕರೆ ಮಾಡಿ ತಿಳಿಸಿ ಎಂದಿದ್ದಾರೆ.

Scroll to load tweet…

ಆರಂಭದಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಹಲವರು ಎಂದುಕೊಂಡಿದ್ದರು. ಆದರೆ ಪೂಜಾ ಗಂಭೀರವಾಗಿ ಹೇಳಿದ್ದಳು. ಅತ್ತ ಕೋಣೆ ಪ್ರವೇಶಿದ 10 ನಿಮಿಷಕ್ಕೆ ತಾನು ಇಲ್ಲಿರುವುದಿಲ್ಲ, ನನಗೆ ಮದುವೆ, ಸಂಬಂಧ ಬೇಡ ಎಂದಿದ್ದಾಳೆ. 10 ನಿಮಿಷ ವಿಶಾಲ್ ಮನ ಒಲಿಸಲು ಪ್ರಯತ್ನಿಸಿದ್ದಾನೆ. ಸಾಧ್ಯವಾಗಿಲ್ಲ. 20 ನಿಮಿಷಕ್ಕೆ ಹೊರಬಂದು ಪೂಜಾ ತನ್ನ ನಿರ್ಧಾರ ಸ್ಪಷ್ಟಪಡಿಸಿದ್ದಾಳೆ. ಪೂಜಾ ಪೋಷಕರು, ಕುಟುಂಬಸ್ಥರು ಆಗಮಿಸಿದ್ದರೆ. ಸತತ 5 ಗಂಟೆಗಳ ಕಾಲ ಮನ ಒಲಿಸುವ ಪ್ರಯತ್ನ ನಡೆದಿದೆ. ಆಗಿಲ್ಲ. ಪೂಜಾ ಕಾರಣವನ್ನೂ ಹೇಳುತ್ತಿಲ್ಲ. ಆದರೆ ಸಂಬಂಧ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಅಷ್ಟೊತ್ತಿಗೆ ಬೆಳಗಿನ ಜಾವವಾಗಿದೆ. ಪಂಚಾಯಿತಿ ಮಾಡಲು ಗ್ರಾಮದ ಹಿರಿಯರನ್ನು ಆಹ್ವಾನಿಸಿದ್ದಾರೆ. ಸತತ ಮಾತುಕತೆ ಬಳಿಕ ಕೊನೆಗೆ ಡಿವೋರ್ಸ್ ಘೋಷಿಸಲಾಗಿದೆ. ಇಬ್ಬರು ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ್ದಾರೆ. ನೆಟ್ಟಿಗರು ಇದು ಬ್ಲಿಂಕಿಟ್‌ಗಿಂತ ಫಾಸ್ಟ್ ಮದುವೆ ಎಂದು ಕರೆದಿದ್ದಾರೆ. ಸದ್ಯ ಕೊನೆಗೆ ಉಳಿದಿರುವ ಪ್ರಶ್ನೆ 20 ನಿಮಿಷದಲ್ಲಿ ಡಿವೋರ್ಸ್ ಕೊಡಲು ಕಾರಣವೇನು? ಈಗಲೂ ಬಹಿರಂಗವಾಗಿಲ್ಲ.