ಇತ್ತೀಚೆಗೆ ನಡೆದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಕಾರಣಕ್ಕಾಗಿ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ. ಉಧಮ್ ಸಿಂಗ್ ನಗರದ ರುದ್ರಾಪುರದಲ್ಲಿ, ಸ್ಥಳೀಯ ನಿವಾಸಿಗಳು ಪರ್ವೀನ್ ಜಹಾನ್ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ನಡೆದಿದ್ದು, ಈ ದಾಳಿಯಲ್ಲಿ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದರೆ, ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಡೆಹ್ರಾಡೂನ್ (ಏ.8): ಇತ್ತೀಚೆಗೆ ನಡೆದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ (Uttarakhand Assembly Election 2022) ಬಿಜೆಪಿಯನ್ನು ಬೆಂಬಲಿಸಿದ್ದು (Support to BJP) ಮುಸ್ಲಿಂ ಕುಟುಂಬದ (Muslim Family) ಪಾಲಿಗೆ ಘಾತಕವಾಗಿ ಪರಿಣಿಸಿದೆ. ಇದೇ ದ್ವೇಷದಲ್ಲಿ ಊರಿನ ಕೆಲವರು ಮುಸ್ಲಿಂ ಕುಟುಂಬದ ಮೇಲೆ ಮುಸ್ಲೀಮರೇ ಮಾರಣಾಂತಿಕ ಹಲ್ಲೆ ನಡೆಸಿದ್ದು, ಬಾಲಕಿಯೊಬ್ಬಳಿಗೆ ಗಂಭೀರವಾಗಿ ಗಾಯವಾಗಿದೆ ಎಂದು ವರದಿಯಾಗಿದೆ. ಉಳಿದಂತೆ ಮನೆ ಮಾಲೀಕರು ಸೇರಿದಂತೆ 4 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಪ್ರಕರಣದಲ್ಲಿ ಪೊಲೀಸರು 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಪೂರ್ಣ ವಿಚಾರ ನಡೆದಿದ್ದು ಉಧಮ್ ಸಿಂಗ್ ನಗರದ (Udham Singh Nagar) ರುದ್ರಾಪುರ ನಗರದಲ್ಲಿ. ವಾರ್ಡ್ ನಂ. 20ರ ಭೂತಬಂಗ್ಲಾ (Bhootbangla) ನಿವಾಸಿಯಾಗಿರುವ ಪರ್ವೀನ್ ಜಹಾನ್ (Parveen Jahan) ಅವರು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಪತಿ ಅನೀಸ್ ಮಿಯಾನ್ ಗುಡ್ಡು ಬಿಜೆಪಿಯ ಪದಾಧಿಕಾರಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅವರ ಕುಟುಂಬ ಬಿಜೆಪಿಗೆ ಪರವಾಗಿ ಬೆಂಬಲ ನೀಡಿದ್ದರಿಂದ ಅವರ ಸುತ್ತ ಮುತ್ತಲಿನ ಮುಸ್ಲಿಂ ಸಮುದಾಯದ ಜನರು ಸಿಟ್ಟಿಗೆದ್ದು ಅವರ ವಿರುದ್ಧ ದ್ವೇಷ ಸಾಧಿಸಲು ಆರಂಭಿಸಿದ್ದರು.
ಏಪ್ರಿಲ್ 5ರಂದು ಸಂಜೆ ಪತಿಯೊಂದಿಗೆ ಸ್ಥಳೀಯ ಅಂಗಡಿಯ ಮುಂದೆ ಪರ್ವೀನ್ ಜಹಾನ್ ನಿಂತಿದ್ದರು. ಈ ವೇಳೆ ಸ್ಥಳಿಯ ನಿವಾಸಿಯಾದ ಯೂನಸ್, ಆತನ ಪತ್ನಿ ರಶೀಮಾ, ಇರ್ಫಾನ್ (ಯೂನಸ್ ಸಹೋದರ) ಮತ್ತು ಆತನ ಪತ್ನಿ ಬೇಬಿ ಸೇರಿದಂತೆ ಕೆಲವರು ಚಾಕು, ದೊಣ್ಣೆಗಳೊಂದಿಗೆ ಅಲ್ಲಿಗೆ ಆಗಮಿಸಿ ದೌರ್ಜನ್ಯ ಎಸಗಿದ್ದಾರೆ. "ನೀವು ಕಾಫಿರರು (ದ್ರೋಹಿಗಳು), ಮುಸ್ಲಿಂ ಧರ್ಮ ಬಿಟ್ಟು ಬಿಜೆಪಿಗೆ ಬೆಂಬಲ ನೀಡಿದ್ದೀರಿ. ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಿರುಚಾಡಲು ಆರಂಭಿಸಿದ್ದರು. ಈ ವೇಳೆ ಯೂನಸ್, ಪರ್ವೀನ್ ಜಹಾನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಅದೇ ಸಮಯದಲ್ಲಿ, ಇತರ ದಾಳಿಕೋರರು ಆಕೆಯ ಪತಿಗೆ ಕೋಲುಗಳಿಂದ ಹೊಡೆದಿದ್ದಾರೆ. ಇದಾದ ಬಳಿಕ ಆರೋಪಿಗಳು ಪರ್ವೀನ್ ಜಹಾನ್ ಅವರ ಕಿವಿಯೋಲೆಯನ್ನೂ ಕಿತ್ತುಕೊಂಡು ಪರಾರಿಯಾಗಿದ್ದರು.
ನಮ್ಮ ಮೇಲೆ ಹಲ್ಲೆ ಆದ ಕಾರಣದಿಂದ ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ ಎಂದು ಪರ್ವೀನ್ ಜಹಾನ್ ಹೇಳಿದ್ದಾರೆ. ಈ ವೇಳೆ ಮನೆಯಲ್ಲಿ ಪುತ್ರಿ ಮತ್ತು ಮಗ ಇಬ್ಬರೇ ಇದ್ದರು. ಈ ವೇಳೆ ಆರೋಪಿಗಳು ತಮ್ಮ ಮನೆಗೂ ನುಗ್ಗಿದ್ದು, ನಿಮ್ಮ ತಾಯಿ, ತಂದೆಗೆ ತಕ್ಕ ಪಾಠ ಕಲಿಸಿದ್ದೇವೆ, ಈಗ ನೀವು ಉಳಿದಿದ್ದೀರಿ ಎಂದು ಹೇಳಿದ್ದಾರೆ. ಆರೋಪಿಗಳು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದು, ಮಗಳು ಮುಸ್ಕಾನ್ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಹೇಳಿದ್ದಾರೆ. ಮಗ ಮೌಸಮ್ ಮಿಯಾನ್ ಗೆ ಕೂಡ ಗಾಯವಾಗಿದೆ. ಈ ಕುರಿತಂತೆ ಪೊಲೀಸರಿಗೆ ದೂರು ನೀಡಲು ಸ್ಥಳೀಯ ಜನರು ತಮ್ಮನ್ನು ಕೊತ್ವಾಲಿಗೆ ಬರದಂತೆ ತಡೆದಿದ್ದರು ಎಂದು ಪರ್ವೀನ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಯೂನಸ್ (Yunus), ಆತನ ಪತ್ನಿ ರಶೀಮಾ (Rashima), ಯೂನಸ್ ಸಹೋದರ ಇರ್ಫಾನ್ (Irfahn), ಶಕೀಲ್ ( Shakeel ) ಮತ್ತು ಆತನ ಪತ್ನಿ ಬೇಬಿ ವಿರುದ್ಧ ಅಪರಿಚಿತ ವ್ಯಕ್ತಿಗಳೊಂದಿಗೆ ಗಲಭೆ, ಹಲ್ಲೆ ಸೇರಿದಂತೆ ಇತರೆ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಐ ಸತೀಶ್ ಕಪ್ರಿ (SSI Satish Kapri) ತಿಳಿಸಿದ್ದಾರೆ.
