ಸುಲಿಗೆ ದಂಧೆಯನ್ನು ಅಡೆತಡೆಯಿಲ್ಲದೆ ನಡೆಸಲು ದೆಹಲಿಯ ರೋಹಿಣಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾಗ, ಸುಖೇಶ್‌ ಚಂದ್ರಶೇಖರ್‌ ಅಧಿಕಾರಿಗಳಿಗೆ ಮಾಸಿಕ 1.5 ಕೋಟಿ ರೂಪಾಯಿ ಲಂಚ ನೀಡುತ್ತಿದ್ದ ಎಂದು ತಿಳಿದುಬಂದಿದೆ. 

ಕೋಟ್ಯಂತರ ರೂ. ಸುಲಿಗೆ, ವಂಚನೆ ಆರೋಪದಲ್ಲಿ ಜೈಲಿನಲ್ಲಿರುವ (Jail) ಹಾಗೂ ಬಾಲಿವುಡ್‌ ನಟಿ (Bollywood Actress) ಜಾಕ್ವೆಲಿನ್‌ ಫರ್ನಾಂಡೀಸ್‌ (Jacqueline Fernandez) ಮಾಜಿ ಬಾಯ್‌ಫ್ರೆಂಡ್‌ ಎನ್ನಲಾದ ಸುಖೇಶ್‌ ಚಂದ್ರಶೇಖರ್‌ (Sukesh Chandrashekhar) ಸುಪ್ರೀಂಕೋರ್ಟ್‌ ಜಡ್ಜ್‌ (Supreme Court Judge) ಹಾಗೂ ಕೇಂದ್ರ ಗೃಹ ಹಾಗೂ ಕಾನೂನು ಇಲಾಖೆಯ ಕಾರ್ಯದರ್ಶಿಗಳ (Secretary) ಸೋಗು ಹಾಕಿದ್ದ ಎಂದು ತಿಳಿದುಬಂದಿದೆ.ದೆಹಲಿ ಪೊಲೀಸರು ಸೋಮವಾರ ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಅಂದಿನ ಸುಪ್ರೀಂಕೋರ್ಟ್‌ ಜಡ್ಜ್‌ ಕುರಿಯನ್‌ ಜೋಸೆಫ್‌ ಹಾಗೂ ಕೆಂದ್ರ ಗೃಹ ಸಚಿವ ಮತ್ತು ಕಾನೂನು ಸಚಿವಾಲಯಗಳ ಸೋಗು ಹಾಕಿದ್ದ ಎಂದು ಹೇಳಿದ್ದಾರೆ. ಸುಖೇಶ್‌ ಚಂದ್ರಶೇಖರ್‌ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾಗ ಬಯಸಿದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಮತ್ತು ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಎಂದೂ ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: ಆಪ್‌ ವಿರುದ್ದ ದೂರು ವಾಪಸ್‌ಗೆ ಒತ್ತಾಯ; ನನ್ನ ಮರ್ಮಾಂಗದ ಮೇಲೆ ಜೈಲು ಸಿಬ್ಬಂದಿ ಹಲ್ಲೆ: ಸುಖೇಶ್ ಚಂದ್ರಶೇಖರ್‌

ತನ್ನ ಸುಲಿಗೆ ದಂಧೆಯನ್ನು ಅಡೆತಡೆಯಿಲ್ಲದೆ ನಡೆಸಲು ದೆಹಲಿಯ ರೋಹಿಣಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾಗ, ಸುಖೇಶ್‌ ಚಂದ್ರಶೇಖರ್‌ ಅಧಿಕಾರಿಗಳಿಗೆ ಮಾಸಿಕ 1.5 ಕೋಟಿ ರೂಪಾಯಿ ಲಂಚ ನೀಡುತ್ತಿದ್ದ ಎಂದೂ ತಿಳಿದುಬಂದಿದೆ. ಈ ಬಗ್ಗೆ ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಡಿಸಿಪಿ ಅನ್ಯೇಶ್ ರಾಯ್ ಅವರು ನ್ಯಾಯಮೂರ್ತಿಗಳಾದ ಎ.ಆರ್.ರಸ್ತೋಗಿ ಮತ್ತು ಬೇಲಾ ಎಂ. ತ್ರಿವೇದಿ ಅವರ ಪೀಠದ ಮುಂದೆ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. 

ಬಂಧಿತ ಸಹಾಯಕ ಜೈಲು ಸೂಪರಿಂಟೆಂಡೆಂಟ್ ಧರಮ್ ಸಿಂಗ್ ಮೀನಾ ಹೇಳಿಕೆಯನ್ನು ಉಲ್ಲೇಖಿಸಿ, ದೆಹಲಿ ಪೊಲೀಸರು ಈ ಹೇಳಿಕೆ ನೀಡಿದ್ದಾರೆ. ಸುಖೇಶ್‌ ಚಂದ್ರಶೇಖರ್‌ ಅಧಿಕಾರಿಗಳಿಗೆ ಜೈಲು ಸೂಪರಿಂಟೆಂಡೆಂಟ್‌ಗೆ ತಿಂಗಳಿಗೆ 66 ಲಕ್ಷ ರೂ., ಮೂವರು ಉಪ ಅಧೀಕ್ಷಕರಲ್ಲಿ ಇಬ್ಬರಿಗೆ ತಲಾ 5 ಲಕ್ಷ ರೂ ಮತ್ತು ಮೂರನೇ ವ್ಯಕ್ತಿಗೆ (ಸುಭಾಷ್ ಬಾತ್ರಾ 6 ಲಕ್ಷ ರೂ. ನೀಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ರೋಹಿಣಿ ಜೈಲು ಅಧಿಕಾರಿಗಳಿಗೆ ಸುಖೇಶ್‌ ಚಂದ್ರಶೇಖರ್‌ ಐದು ಸಹಾಯಕ ಸೂಪರಿಂಟೆಂಡೆಂಟ್‌ಗಳಿಗೆ ತಲಾ 2 ಲಕ್ಷ ರೂ., ಧರಮ್ ಸಿಂಗ್ ಮೀನಾಗೆ 5-10 ಲಕ್ಷ ರೂ. ಅಂದಾಜು 35 ಹೆಡ್ ವಾರ್ಡರ್‌ಗಳಿಗೆ ತಲಾ ರೂ. 30,000 ಮತ್ತು 60 ವಾರ್ಡರ್‌ಗಳಿಗೆ ತಲಾ ರೂ. 20,000 ಮಾಸಿಕ ಲಂಚವನ್ನು ನೀಡಲಾಗಿದೆ.

ಇದನ್ನೂ ಓದಿ: ಕೇಜ್ರಿವಾಲ್‌ಗೆ ರಾಜ್ಯಸಭೆ ಸ್ಥಾನಕ್ಕಾಗಿ 50 ಕೋಟಿ ಕೊಟ್ಟಿದ್ದೆ: ಸುಕೇಶ್‌

ಇನ್ನು, ದೆಹಲಿ ಪೊಲೀಸರ ಪರ ಹಾಜರಾದ ವಕೀಲ ರಜತ್ ನಾಯರ್, ತನ್ನ ಮೇಲೆ ಮಾಂಡೋಲಿ ಜೈಲು ಅಧಿಕಾರಿಗಳು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಮತ್ತು ಜೀವ ಬೆದರಿಕೆ ಇದೆ ಎಂಬ ಸುಖೇಶ್‌ ಆರೋಪವನ್ನು ತಳ್ಳಿಹಾಕಿದ್ದಾರೆ. ಆತನನ್ನು 2017 ರಲ್ಲಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು, 2020 ರಲ್ಲಿ ರೋಹಿಣಿ ಜೈಲಿಗೆ ಸ್ಥಳಾಂತರಿಸಲಾಗಿತ್ತು, ಅಕ್ಟೋಬರ್ 2021 ರಲ್ಲಿ ತಿಹಾರ್‌ಗೆ ಹಾಗೂ ಈ ವರ್ಷದ ಆಗಸ್ಟ್ 25 ರಿಂದ ಮಾಂಡೋಲಿ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದೂ ಹೇಳಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜೈಲು ಸಿಬ್ಬಂದಿ ವಿರುದ್ಧ ಆರೋಪ ಮಾಡುವುದು ಸುಖೇಶ್‌ಗೆ ಅಭ್ಯಾಸವಾಗಿದೆ. ಹಾಗೂ, ಈ ಆರೋಪಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದಾಗ ಯಾವುದೇ ಹಲ್ಲೆ ನಡೆದಿಲ್ಲ ಎಂಬುದು ಹಲವು ಬಾರಿ ನಡೆದ ವೈದ್ಯಕೀಯ ಪರೀಕ್ಷೆಗಳಲ್ಲಿಯೂ ತಿಳಿದುಬಂದಿದೆ ಎಂದೂ ರಜತ್‌ ನಾಯರ್ ಹೇಳಿದ್ದಾರೆ. ಜನವರಿ ಎರಡನೇ ವಾರದಲ್ಲಿ ಸುಖೇಶ್ ಅವರನ್ನು ತಿಹಾರ್ ಜೈಲಿನಿಂದ ದೆಹಲಿಯ ಹೊರಗಿನ ಯಾವುದೇ ಜೈಲಿಗೆ ಸ್ಥಳಾಂತರಿಸುವಂತೆ ಮಾಡಿದ ಮನವಿಯ ಕುರಿತು ಹೆಚ್ಚಿನ ವಿಚಾರಣೆಯನ್ನು ಪೀಠವು ಮುಂದೂಡಿತು ಮತ್ತು ಅವರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್‌ಗೆ 10 ಕೋಟಿ ನೀಡಿದ್ದೆ: ಸುಖೇಶ್‌ ಚಂದ್ರಶೇಖರ್‌