ನವದೆಹಲಿ (ಅ.30) : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಉಂಟುಮಾಡಿದರೆ 5 ವರ್ಷದವರೆಗೆ ಜೈಲುಶಿಕ್ಷೆ ಹಾಗೂ 1 ಕೋಟಿ ರು.ವರೆಗೆ ದಂಡ ವಿಧಿಸುವ ಕಠಿಣ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಕುರಿತು ಬುಧವಾರ ರಾತ್ರಿ ರಾಷ್ಟ್ರಪತಿಗಳ ಅಂಕಿತ ಪಡೆದು ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಸುಗ್ರೀವಾಜ್ಞೆಯ ಅನ್ವಯ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಹಾಗೂ ಅಕ್ಕಪಕ್ಕದ ದೆಹಲಿ, ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶ ಮತ್ತು ರಾಜಸ್ಥಾನಕ್ಕೆ ಅನ್ವಯಿಸುವಂತೆ ವಾಯು ಗುಣಮಟ್ಟನಿರ್ವಹಣೆ ಆಯೋಗ ಸ್ಥಾಪನೆ ಮಾಡಲಾಗುತ್ತದೆ. ಇದರಲ್ಲಿ 18 ಸದಸ್ಯರಿರುತ್ತಾರೆ. ಈ ಆಯೋಗವು ದೆಹಲಿ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಬೆಳೆಯ ಕೂಳೆ ಸುಡುವುದು, ವಾಹನದಿಂದ ಉಂಟಾಗುವ ಮಾಲಿನ್ಯ, ಧೂಳಿನ ಮಾಲಿನ್ಯ ಹೀಗೆ ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ವಾಯು ಗುಣಮಟ್ಟವನ್ನು ಹಾಳುಗೆಡವುವ ಎಲ್ಲಾ ಸಂಗತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ಆಯೋಗವು ಪ್ರತಿ ವರ್ಷ ಸಂಸತ್ತಿಗೆ ತನ್ನ ವರದಿ ನೀಡಬೇಕು. ವಾಯುಮಾಲಿನ್ಯ ಉಂಟುಮಾಡುವ ಯಾವುದೇ ಪ್ರದೇಶ, ಘಟಕ ಅಥವಾ ಕಟ್ಟಡಗಳಲ್ಲಿ ಶೋಧ ನಡೆಸಿ ಅವುಗಳನ್ನು ಮುಚ್ಚಲು ಅಥವಾ ಅವುಗಳಿಗೆ ನೀರು ಹಾಗೂ ವಿದ್ಯುತ್‌ ಸರಬರಾಜು ನಿಲ್ಲಿಸುವ ಅಧಿಕಾರ ಆಯೋಗಕ್ಕೆ ಇರಲಿದೆ.

FIM ವಿಶ್ವ ಚಾಂಪಿಯನ್‌ಶಿಪ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಹೋಂಡಾಗೆ 800ನೇ ಗೆಲುವು! ...

ವಾಯು ಗುಣಮಟ್ಟನಿರ್ವಹಣೆ ಆಯೋಗವು ದಾಖಲಿಸುವ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ನ ಹಸಿರು ಪೀಠ ಮಾತ್ರ ವಿಚಾರಣೆ ನಡೆಸಬೇಕು. ಈ ಕುರಿತು ರಾಜ್ಯಗಳ ಜೊತೆ ಯಾವುದೇ ವಿವಾದ ಏರ್ಪಟ್ಟರೂ ಆಯೋಗದ ಆದೇಶವೇ ಅಂತಿಮವಾಗಿರುತ್ತದೆ. ಆಯೋಗ ಹೊರಡಿಸುವ ಆದೇಶವನ್ನು ಉಲ್ಲಂಘಿಸುವವರಿಗೆ 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಕೋಟಿ ರು.ವರೆಗೆ ದಂಡ ವಿಧಿಸಬಹುದು. ಈ ಆಯೋಗದ ರಚನೆಯೊಂದಿಗೆ ಹಿಂದೆ ಸುಪ್ರೀಂಕೋರ್ಟ್‌ನಿಂದ ನೇಮಕವಾಗಿದ್ದ ಇಪಿಸಿಎ ಸೇರಿದಂತೆ ದೆಹಲಿಯ ವಾಯುಮಾಲಿನ್ಯ ನಿಯಂತ್ರಣದ ಉದ್ದೇಶಕ್ಕಾಗಿ ಸ್ಥಾಪನೆಯಾದ ಎಲ್ಲಾ ಆಯೋಗ ಅಥವಾ ಏಜೆನ್ಸಿಗಳು ತಮ್ಮ ಕಾರ್ಯ ಸ್ಥಗಿತಗೊಳಿಸಲಿವೆ.

ಯಾಕೆ ಈ ಕ್ರಮ?

ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯ ಸುತ್ತಲಿನ ರಾಜ್ಯಗಳ ರೈತರು ತಮ್ಮ ಹೊಲಗಳಲ್ಲಿ ಪೈರಿನ ನಂತರ ಒಣಗಿದ ಕೂಳೆಯನ್ನು ಸುಡುತ್ತಾರೆ. ಅದರಿಂದಾಗಿ ದೆಹಲಿಯ ಗಾಳಿ ಮಲಿನವಾಗಿ ಉಸಿರಾಡುವುದು ಕೂಡ ಕಷ್ಟವಾಗುತ್ತದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಈಗ ಸುಗ್ರೀವಾಜ್ಞೆ ಹೊರಡಿಸಿ ಆಯೋಗ ರಚಿಸಲಾಗುತ್ತಿದೆ.