75ರ ಹರೆಯದ ನಿವೃತ್ತಿ ಬ್ಯಾಂಕ್ ಉದ್ಯೋಗಿ ಬೀದಿ ನಾಯಿಗೆ ಪ್ರತಿ ದಿನ ಅನ್ನ ನೀಡುತ್ತಿದ್ದ. ಬೀದಿ ನಾಯಿ ಕೂಡ ಪ್ರತಿ ದಿನ ವೃದ್ಧನ ಮನೆ ಬಳಿ ಬಂದು ಅನ್ನಕ್ಕಾಗಿ ಕಾಯುತ್ತಿತ್ತು. ಆದರೆ ದಿಢೀರ್ ವೃದ್ಧನ ಸಾವು ಮೂಕ ಪ್ರಾಣಿಯಲ್ಲಿ ಇನ್ನಿಲ್ಲದ ನೋವು ತರಿಸಿತ್ತು. ವೃದ್ಧನ ಅಂತ್ಯಕ್ರಿಯೆವರೆಗೂ ಹಿಂಬಾಲಿಸಿ ಮೌನವಾಗಿ ಕುಳಿತ ನಾಯಿಯ ರೋಧನೆಗೆ ಎಲ್ಲರು ಕಣ್ಣೀರಾಗಿದ್ದಾರೆ.
ಭೋಪಾಲ್ (ನ.24) ಮನುಷ್ಯನ ಅತ್ಯಂತ ನಂಬಕಸ್ತ ಗೆಳೆಯ ನಾಯಿ. ಮನೆಯ ಯಜಮಾನ ಮೃತಪಟ್ಟಾಗ ನಾಯಿಯ ಮೂಕರೋಧನೆಯ ಘಟನೆಗಳು ವರದಿಯಾಗಿದೆ. ಇದೀಗ ಬೀದಿ ನಾಯಿಯೊಂದು ತನಗೆ ಪ್ರತಿ ದಿನ ಅನ್ನ, ಹಾಲು,ಬಿಸ್ಕೆಟ್ ನೀಡುತ್ತಿದ್ದ ವೃದ್ಧ ವ್ಯಕ್ತಿಯ ಅಂತ್ಯಕ್ರಿಯೆಯವರೆಗೂ ಹಿಂಬಾಲಿಸಿದ ಘಟನೆ ನಡೆದಿದೆ. ಸ್ಮಶಾನದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ವಿಧಿವಿಧಾನಗಳಲ್ಲಿ ತೊಡಗಿದರೆ, ಈ ಬೀದಿ ನಾಯಿ ದೂರದಲ್ಲಿ ಮೌನವಾಗಿ ಕುಳಿತು ರೋಧಿಸಿದ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದಿದೆ.
ಮೋಹನ್ಲಾಲ್ ರೈಕ್ವಾರ್ ಸೆಹೋರ್ ಜಿಲ್ಲೆಯ ನಿವಾಸಿ 75ರ ಹರೆಯದ ನಿವೃತ್ತ ಬ್ಯಾಂಕ್ ಉದ್ಯೋಗಿ.ಮೋಹನ್ಲಾಲ್ ತಮ್ಮ ಬಡಾವಣೆಯಲ್ಲಿದ್ದ ಬೀದಿ ನಾಯಿಗೆ ಪ್ರತಿ ದಿನ ಅನ್ನ ನೀಡುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗಿ ಬಂದ ಬಳಿಕ ಬೀದಿ ನಾಯಿಗೆ ಬಳಿ ತೆರಳಿ ಹಾಲು ಬಿಸ್ಕೆಟ್ ನೀಡುತ್ತಿದ್ದರು. ಬಳಿಕ ತಿಂಡಿ, ಮಧ್ಯಾಹ್ನ ಊಟ, ಸಂಜೆ ವೇಳೆ ಬಿಸ್ಕೆಟ್, ರಾತ್ರಿ ಊಟ ನೀಡುತ್ತಿದ್ದರು. ಪ್ರತಿ ದಿನ ಇದು ಖಾಯಂ . ಹೀಗಾಗಿ ಬೀದಿ ನಾಯಿ ಹಾಗೂ ಮೋಹನ್ಲಾಲ್ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು. ವಾಕಿಂಗ್ ತೆರಳುವಾಗ ಬೀದಿ ನಾಯಿಯೂ ಮೋಹನ್ಲಾಲ್ ಹಿಂಬಾಲಿಸುತ್ತಿತ್ತು.
ಮನೆ ಬಳಿ ಬರುತ್ತಿದ್ದ ಕಾಲು
ನಾಯಿ ಜೊತೆ ಗಾಢ ಸಂಬಂಧ ಬೆಳೆದಿತ್ತು. ಕಪ್ಪು ಬಣ್ಣದ ನಾಯಿಯನ್ನು ಕಾಲು ಎಂದು ಕರೆಯುತ್ತಿದ್ದರು. ಸಮಯದಲ್ಲಿ ಕೊಂಚ ವ್ಯತ್ಯಾಸವಾದರೂ ಕಾಲು ನೇರವಾಗಿ ಮೋಹನ್ಲಾಲ್ ಮನೆಗೆ ಗೇಟ್ ಬಳಿ ಬರುತ್ತಿತ್ತು. ಇದು ಪ್ರತಿ ದಿನ ಸಾಗಿತ್ತು. ಬೆಳಗ್ಗೆ ವಾಕಿಂಗ್ ಹೋಗಿ ಬರುವಾಗ ಬೀದಿ ನಾಯಿ ಕಾಲು ಮನೆಯವರೆಗೂ ಹಿಂಬಾಲಿಸುತ್ತಿತ್ತು. ಬಳಿಕ ಹಾಲು ನೀಡುತ್ತಿದ್ದರು.
ಮೋಹನ್ಲಾಲ್ ಸಾವಿನಿಂದ ತೀವ್ರ ರೋಧನೆ
ಆದರೆ ಇದಕ್ಕಿದ್ದಂತೆ ಬೆಳಗ್ಗೆ ಮೋಹನ್ಲಾಲ್ ಅಸ್ವಸ್ಥಗೊಂಡು ನಿಧನರಾಗಿದ್ದಾರೆ. ಇತ್ತ ಕಾಲು ನಾಯಿ ಮೋಹನ್ಲಾಲ್ಗಾಗಿ ಕಾಯುತ್ತಿತ್ತು. ಆದರೆ ಸುಳಿವಿಲ್ಲ. ಹೀಗಾಗಿ ಮನೆಯ ಬಳಿ ಬಂದಾಗ ಮನೆಯಲ್ಲಿ ಒಂದಷ್ಟು ಜನ ಸೇರಿದ್ದಾರೆ. ಅಂದು ಅನ್ನ , ಹಾಲು, ನೀರಿಲ್ಲದೆ ನಾಯಿ ದೂರದಲ್ಲಿ ಕುಳಿತಿತ್ತು. ಕೊನೆಗೆ ಮೋಹನ್ಲಾಲ್ ಅಂತ್ಯಕ್ರಿಯೆ ಬಡಾವಣೆಯ ಹೊರಗಿನ ಸ್ಮಶಾನದಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಮೋಹನ್ಲಾಲ್ ಪಾರ್ಥೀವ ಶರೀರ ಎತ್ತಿಕೊಂಡು ಸ್ಮಶಾನದತ್ತ ಕುಟುಂಬಸ್ಥರು ಹೊರಟಿದ್ದಾರೆ. ಈ ವೇಳೆ ಈ ಬೀದಿ ನಾಯಿ ತನ್ನ ಮೋಹನ್ಲಾಲ್ ಪಾರ್ಥಿವ ಶರೀರವನ್ನು ಹಿಂಬಾಲಿಸಿತ್ತು. ಆಪ್ತರು, ಕುಟುಂಬಸ್ಥರು ಹಿಂದೆ ಬೀದಿ ನಾಯಿ ಕಾಲು ಕೂಡ ಸ್ಮಶಾನದವರೆಗೆ ಸಾಗಿತ್ತು.
ಸ್ಮಶಾನದಲ್ಲಿ ಕುಟುಂಬಸ್ಥರು ಅಂತಿಮ ವಿಧಿವಿಧಾನ ಮಾಡುತ್ತಿದ್ದರೆ ದೂರದಲ್ಲಿ ಕಾಲು ಕುಳಿತು ರೋಧಿಸುತ್ತಿತ್ತು. ಅಂತ್ಯಕ್ರಿಯೆ ಮುಗಿದ ಬಳಿಕ ಮನೆಯವರು ಕಾಲ್ನಡಿಗೆಯಲ್ಲಿ ಮತ್ತೆ ಮನೆಗೆ ಮರಳಿದ್ದಾರೆ. ಈ ವೇಳೆ ಬೀದಿ ನಾಯಿ ಕೂಡ ಹಿಂಬಾಲಿಸಿ ಮನೆಯವರೆಗೆ ಬಂದಿದೆ. ಪ್ರತಿ ದಿನ ಮೋಹನ್ಲಾಲ್ ಮನೆ ಬಳಿ ಬರುತ್ತಿದ್ದ ಈ ಬೀದಿ ನಾಯಿ, ಮೋಹನ್ಲಾಲ್ ನಿಧನದ ಬಳಿಕ ಸುಳಿವಿಲ್ಲ. ಈ ಘಟನೆ ಕುರಿತು ಆಪ್ತರು, ಕುಟುಂಬಸ್ಥರು ಹೇಳಿದ್ದಾರೆ. ಮೋಹನ್ಲಾಲ್ ಆಸೆಯಂತೆ ಕಾಲುಗೆ ಅನ್ನ ಹಾಕಲು ಹುಡುಕಾಡಿದ್ದಾರೆ, ಆದರೆ ಬಡಾವಣೆಯಲ್ಲೇ ಈ ನಾಯಿಯ ಸುಳಿವಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
















